

ಬೆಂಗಳೂರು: ರಾಜ್ಯದಲ್ಲಿ ಕರೊನಾ ಸೋಂಕಿಗೆ ಮತ್ತೊಂದು ಸಾವಾಗಿದೆ. ಚಿಕ್ಕಬಳ್ಳಾಪುರದ 69 ವರ್ಷದ ವ್ಯಕ್ತಿಯೋರ್ವ ಮಾರಕ ವೈರಸ್ನಿಂದ ಮೃತಪಟ್ಟಿದ್ದಾರೆ. ಅಲ್ಲಿಗೆ ಕರ್ನಾಟದಲ್ಲಿ ಕೊವಿಡ್ ಸಾವಿನ ಸಂಖ್ಯೆ 11ಕ್ಕೆ ಏರಿದೆ.
ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ಟ್ವೀಟ್ ಮಾಡಿ, ಕರೊನಾ ದಿಂದ ಮತ್ತೊಂದು ಸಾವಾಗಿದ್ದನ್ನು ದೃಢಪಡಿಸಿದ್ದಾರೆ.
ಚಿಕ್ಕಬಳ್ಳಾಪುರದ 69 ವರ್ಷದ ವ್ಯಕ್ತಿಯೋರ್ವರು ಕೋವಿಡ್-19ರಿಂದ ಮೃತಪಟ್ಟಿದ್ದಾರೆ. ಅವರ ಮೃತದೇಹವನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಡಲಾಗಿದೆ. ಕೇಂದ್ರ ಸರ್ಕಾರದ ನಿಯಮಗಳಂತೆ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ. ಸಾರ್ವಜನಿಕರು ದಯವಿಟ್ಟು ಮನೆಯಲ್ಲಿಯೇ, ಸುರಕ್ಷಿತವಾಗಿ ಇರಿ ಎಂದು ಮನವಿ ಮಾಡಿದ್ದಾರೆ.
ಈ ವೃದ್ಧ ವಿದೇಶಕ್ಕೆ ಹೋಗಿಬಂದವರಲ್ಲ. ಹಾಗೇ ಕರೊನಾ ಸೋಂಕಿತರ ಸಂಪರ್ಕಕ್ಕೆ ಹೋಗಿದ್ದು ಹೇಗೆ ಎಂಬುದು ಗೊತ್ತಾಗಿಲ್ಲ. ಅಸ್ತಮಾದಿಂದ ಬಳಲುತ್ತಿದ್ದ ಇವರನ್ನು ಏಪ್ರಿಲ್ 8ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕರೊನಾ ಸೋಂಕು ಇರುವುದು ನಿನ್ನೆ ದೃಢಪಟ್ಟಿತ್ತು.
ಸ್ವಲ್ಪದಿನಗಳ ಹಿಂದೆ ಗೌರಿಬಿದನೂರಿನ 70ವರ್ಷದ ವೃದ್ಧೆ ಕರೊನಾಕ್ಕೆ ಬಲಿಯಾಗಿದ್ದರು. ಸದ್ಯ ಚಿಕ್ಕಬಳ್ಳಾಪುರದ ಒಟ್ಟು ನಾಲ್ಕುವಾರ್ಡ್ಗಳನ್ನು ಸಂಪೂರ್ಣ ಸೀಲ್ಡೌನ್ ಮಾಡಲಾಗಿದೆ.