ಮೈಸೂರು: ಭಾರತ ಲಾಕ್ಡೌನ್ ಆಗಿದೆ. ಆದರೂ ಜನರು ಅದನ್ನು ಗಂಭೀರವಾಗಿ ಪರಿಗಣಿಸದೆ, ಅಗತ್ಯ ವಸ್ತುಗಳ ಖರೀದಿ, ಓಡಾಟದಲ್ಲಿ ತೊಡಗಿಕೊಂಡಿದ್ದಾರೆ. ಅವರನ್ನು ನಿಯಂತ್ರಿಸಲು ಪೊಲೀಸರೂ ಹರಸಾಹಸ ಪಡುತ್ತಿದ್ದಾರೆ. ಈ ಮಧ್ಯೆ ಕರ್ನಾಟಕದಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ.
ಇಂದು ಒಂದೇ ದಿನದಲ್ಲಿ ಕರ್ನಾಟಕದಲ್ಲಿ ನಾಲ್ವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಮೈಸೂರಿನಲ್ಲಿ ಓರ್ವ ವ್ಯಕ್ತಿಯಲ್ಲಿ ಕರೊನಾ ಪಾಸಿಟಿವ್ ದೃಢಪಟ್ಟಿದೆ. ಹಾಗೇ ಬೆಂಗಳೂರಿನಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದವರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಮೈಸೂರಿನಲ್ಲಿ ಕರೊನಾ ಸೋಂಕು ಕಾಣಿಸಿಕೊಂಡ ವ್ಯಕ್ತಿ ಔಷಧಿ ತಯಾರಿಕಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ. ವೈದ್ಯಕೀಯ ವಲಯದ ಹಲವರೊಂದಿಗೆ ಸಂಪರ್ಕ ಹೊಂದಿದ್ದ. ಈಗ ಈತನ ಸಂಪರ್ಕಕ್ಕೆ ಬಂದಿದ್ದ ಏಳು ಜನರನ್ನು ಜಿಲ್ಲಾಡಳಿತ ಗುರುತಿಸಿದೆ. ಅವರನ್ನು ಹೋಂ ಕ್ವಾರೆಂಟೈನ್ನಲ್ಲಿಟ್ಟು ನಿಗಾ ಇಡಲಾಗಿದೆ. ಕರೊನಾ ಪೀಡಿತ ವ್ಯಕ್ತಿಯನ್ನು ಮೈಸೂರಿನ ಐಸೋಲೇಶನ್ ವಾರ್ಡ್ನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಹಾಗೇ ಬೆಂಗಳೂರಿನಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದ ಆಂಧ್ರ ವ್ಯಕ್ತಿ, ಕರೊನಾ ಪೀಡಿತರೋರ್ವರ ಸಂಪರ್ಕಕ್ಕೆ ಬಂದಿದ್ದ ಎನ್ನಲಾಗಿದೆ. ಅಲ್ಲಿಗೆ, ಕರ್ನಾಟಕದಲ್ಲಿ ಕರೊನಾ ಸೋಂಕಿತರ ಸಂಖ್ಯೆ 55ಕ್ಕೆ ಏರಿದೆ.