

ನವದೆಹಲಿ: ಚೀನಾದಲ್ಲಿ ಹುಟ್ಟಿ ಇಡೀ ವಿಶ್ವವನ್ನು ವ್ಯಾಪಿಸುತ್ತಿರುವ ಕರೊನಾ ಹಾವಳಿಯ ದುಷ್ಪರಿಣಾಮ ದಿನಗಳೆದಂತೆ ಜೀವನದ ನಾನಾ ಕ್ಷೇತ್ರಗಳನ್ನು ವ್ಯಾಪಿಸುತ್ತಿದೆ. ದಿನನಿತ್ಯ ನೂರಾರು ಜನರನ್ನು ಬಲಿಪಡೆದುಕೊಳ್ಳುತ್ತಿರುವ ಈ ಸೋಂಕಿಗೆ ಭಾರತ ಸೇರಿದಂತೆ ಜಾಗತಿಕ ಆರ್ಥಿಕತೆಯಲ್ಲಿ ಕಂಪನ ಉಂಟಾಗಿದೆ. ಕಳೆದ 2 ವಾರದಿಂದ ಭಾರತದ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲ ಎಬ್ಬಿಸಿರುವ ಕರೊನಾ ಪರಿಣಾಮದಿಂದಾಗಿ ಸೋಮವಾರ ಒಂದೇ ದಿನ 7.62 ಲಕ್ಷ ಕೋಟಿ ರೂ.ಗೂ ಅಧಿಕ ಹಣ ನಷ್ಟವಾಗಿದೆ. ಪ್ರವಾಸೋದ್ಯಮ, ವಿಮಾನಯಾನಕ್ಕೆ ಮರ್ವಘಾತ ತಟ್ಟಿದರೆ ವಾಣಿಜ್ಯ ಚಟುವಟಿಕೆಗೆ ಗರ ಬಡಿದಿದೆ. ಇದರ ಪರಿಣಾಮ ಭವಿಷ್ಯದಲ್ಲಿ ಭಾರತಕ್ಕೂ ತಟ್ಟುವುದು ನಿಶ್ಚಿತ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಆತಂಕ ಹೊರಹಾಕಿದ್ದಾರೆ. ಇನ್ನು, ಕರ್ನಾಟಕದಲ್ಲಿ ಕರೊನಾ ಪೀಡಿತರ ಸಂಖ್ಯೆ 8ಕ್ಕೆ ಏರಿಕೆಯಾದರೆ ದೇಶದಲ್ಲಿ 129ಕ್ಕೆ ಮುಟ್ಟಿದೆ.
ಗಾಯದ ಮೇಲೆ ಬರೆ: ಷೇರು ಮಾರುಕಟ್ಟೆಯಲ್ಲಿ ಕರಡಿ ಕುಣಿತ ಮುಂದುವರಿದಿದ್ದು ಸೋಮವಾರ ಒಂದೇ ದಿನ ಸೆನ್ಸೆಕ್ಸ್ 2713 ಹಾಗೂ ನಿಫ್ಟಿ 758 ಅಂಕ ಕುಸಿದಿದೆ. ಇದರಿಂದಾಗಿ ಒಂದೇ ದಿನ ಹೂಡಿಕೆದಾರರ 7.62 ಲಕ್ಷ ಕೋಟಿ ರೂ. ನಷ್ಟವಾಗಿದೆ. ಕರೊನಾ ಆತಂಕ, ವಿದೇಶಿ ಹೂಡಿಕೆದಾರರ ಷೇರು ಮಾರಾಟವೇ ಇದಕ್ಕೆ ಕಾರಣ. ಮತ್ತೊಂದೆಡೆ ರೂಪಾಯಿ ಮೌಲ್ಯ 50 ಪೈಸೆ ಕುಸಿತ ಕಂಡು 74.25ಕ್ಕೆ ತಲುಪಿದೆ. ಚಿನ್ನದ ಬೆಲೆ 10 ಗ್ರಾಂಗೆ 455 ರೂ. ಏರಿ 41,610 ತಲುಪಿದೆ. ಬೆಳ್ಳಿ 1283 ರೂ. ಇಳಿಕೆಯಾಗಿದೆ.
ಕರ್ನಾಟಕದಲ್ಲಿ ಕರೊನಾ ಸೋಂಕಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಮಾ.8ರಂದು ಅಮೆರಿಕದಿಂದ ಬೆಂಗಳೂರಿಗೆ ಬಂದಿದ್ದ 32 ವರ್ಷದ ಟೆಕ್ಕಿಗೆ ಸೋಂಕು ದೃಢಪಟ್ಟಿದ್ದು ಸದ್ಯ ಅವರನ್ನು ಕೆಸಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಪಡಿಸಲಾಗಿದೆ. ಆತನ ಪತ್ನಿ ಹಾಗೂ ಮನೆಕೆಲಸದಾಕೆಯನ್ನೂ ಸ್ಕ್ರೀನಿಂಗ್ಗೆ ಒಳಪಡಿಸಲಾಗಿದೆ.
ಕಲಬುರಗಿ ತತ್ತರ: ಕರೊನಾ ವೃದ್ಧನ ಬಲಿಪಡೆದು ಆತನ ಸಂಬಂಧಿಗೂ ತಗುಲಿರುವುದು ದೃಢಪಟ್ಟ ಬಳಿಕ ಇಡೀ ಕಲಬುರಗಿ ಜಿಲ್ಲೆ ಸ್ತಬ್ಧಗೊಂಡಿದೆ. ದೊಡ್ಡ ದೊಡ್ಡ ಹೋಟೆಲ್, ಅಂಗಡಿಗಳು ಒತ್ತಟ್ಟಿಗಿರಲಿ, ರಸ್ತೆ ಬದಿಗಿರುವ ತಳ್ಳುವ ಬಂಡಿಗಳೂ ಕಾಣಿಸದಂತಾಗಿದೆ. ಅಕ್ಷರಶಃ ಅಘೊಷಿತ ಕರ್ಫ್ಯೂ ವಾತಾವರಣವಿದ್ದು ಇನ್ನು ಒಂದು ತಿಂಗಳು ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ.