

ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಮತ್ತೆ ಪರೀಕ್ಷೆ ಬರೆಯುವುದಕ್ಕೆ ಒಂದು ವರ್ಷ ಕಾಯುವುದನ್ನು ತಪ್ಪಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಮುಕ್ತ ಶಾಲಾ ಸಂಸ್ಥೆ (ಎನ್ಐಒಎಸ್) ಮಾದರಿಯಲ್ಲಿ ಪರೀಕ್ಷೆ ನಡೆಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಚಿಂತನೆ ನಡೆಸುತ್ತಿದೆ.
ಪ್ರತಿ ವರ್ಷ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ತಲಾ ಒಂದೂವರೆಯಿಂದ ಎರಡು ಲಕ್ಷ ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಾರೆ. ಇಂತಹ ವಿದ್ಯಾರ್ಥಿಗಳಿಗೆ ಕಳೆದ ಎರಡು ವರ್ಷಗಳಿಂದ ಮೂರು ವಾರ್ಷಿಕ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಹೀಗಿದ್ದರೂ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಾರೆ. ಬಳಿಕ ಉನ್ನತ ಶಿಕ್ಷಣ ಪಡೆಯುವ ಆಲೋಚನೆಯಿಂದ ಹಿಂದೆ ಸರಿಯುತ್ತಾರೆ. ಈ ಕಾರಣದಿಂದ ಮುಕ್ತ ಶಾಲಾ ಮಾದರಿಯನ್ನು ಅಳವಡಿಸಿಕೊಳ್ಳಲು ಶಿಕ್ಷಣ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ರ್ಚಚಿಸಿದ್ದಾರೆ ಎಂದು ಇಲಾಖೆಯ ಮೂಲಗಳು ಖಚಿತಪಡಿಸಿವೆ.
ಏನಿದು ಎನ್ಐಒಎಸ್ ಮಾದರಿ?: ಮುಕ್ತ ಶಾಲೆಗಳು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ವಾರ್ಷಿಕವಾಗಿ ಎರಡು ಬಾರಿ ಜಿಲ್ಲಾ ಹಂತದಲ್ಲಿ ಪರೀಕ್ಷೆಗಳನ್ನು ನಡೆಸುತ್ತವೆ. ಇದೇ ಮಾದರಿಯನ್ನು ರಾಜ್ಯದಲ್ಲೂ ಏಕೆ ಅಳವಡಿಸಿಕೊಳ್ಳಬಾರದು ಎಂಬುದರ ಬಗ್ಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪರಾಮರ್ಶೆ ಮಾಡುತ್ತಿದೆ.
ಮೂರು ಪರೀಕ್ಷೆ: ದೇಶದಲ್ಲಿಯೇ ಮೊದಲ ಬಾರಿಗೆ ಶಾಲಾ ಶಿಕ್ಷಣದಲ್ಲಿ ಮೂರು ಪರೀಕ್ಷೆ ಪದ್ಧತಿಯನ್ನು ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ಅಳವಡಿಸಿಕೊಂಡಿದೆ. ಇದರ ಜತೆಗೆ ಮುಂಬರುವ ಮಾರ್ಚ್/ಏಪ್ರಿಲ್ನಲ್ಲಿ ನಡೆಯಲಿರುವ 2025-26ನೇ ಸಾಲಿನ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಕೇಂದ್ರ ಪಠ್ಯಕ್ರಮ ಶಾಲೆಗಳ ಮಾದರಿಯಲ್ಲಿ ಶೇ.33 ಕನಿಷ್ಠ ಉತ್ತೀರ್ಣ ಪದ್ಧತಿಯನ್ನು ಸಹ ಅಳವಡಿಸಿಕೊಂಡಿದೆ. ಈ ಎರಡೂ ಕಾರಣಗಳಿಂದ ಶಾಲಾ ಪರೀಕ್ಷೆಗಳಲ್ಲಿ ಫಲಿತಾಂಶ ಹೆಚ್ಚಳವಾಗಲಿದ್ದು, ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವವರ ಸಂಖ್ಯೆ ಕಡಿಮೆಯಾಗಬಹುದು. ಇಂತಹ ವಿದ್ಯಾರ್ಥಿಗಳು ವರ್ಷಾನುಗಟ್ಟಲೆ ಏಕೆ ಕಾಯಬೇಕು. ಇದರ ಬದಲಾಗಿ ಎನ್ಐಒಎಸ್ ಮಾದರಿ ಅಳವಡಿಸಿಕೊಂಡು ಪ್ರತ್ಯೇಕ ಪರೀಕ್ಷೆ ನಡೆಸಬಹುದು ಎಂದು ಇಲಾಖೆಯ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಾರಿಯಿಂದ ಖಾಸಗಿ ಮತ್ತು ಪುನರಾವರ್ತಿತ ಅಭ್ಯರ್ಥಿಗಳು ಪ್ರತ್ಯೇಕವಾಗಿ ನೋಂದಣಿ ಮಾಡಿಕೊಳ್ಳಲು ಆನ್ಲೈನ್ನಲ್ಲಿ ಅವಕಾಶ ಮಾಡಿಕೊಡಲಾಗಿದೆ. ಇದರ ಮುಂದುವರಿದ ಭಾಗವಾಗಿ ಎನ್ಐಒಎಸ್ ಮಾದರಿ ಕೂಡ ಅಳವಡಿಸಿಕೊಳ್ಳುವ ಮೂಲಕ ಉನ್ನತ ಶಿಕ್ಷಣದತ್ತ ವಿದ್ಯಾರ್ಥಿಗಳನ್ನು ಆಕರ್ಷಿಸುವ ಮತ್ತು ತಮ್ಮ ಸಹಪಾಠಿಗಳಂತೆ ತಾವು ಕಲಿಯಬೇಕೆಂಬ ಹಂಬಲವಿರುವ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣಕ್ಕೆ ಸೇರುವಂತೆ ಮಾಡುವುದು ಇಲಾಖೆಯ ಗುರಿಯಾಗಿದೆ.
ಜಿಲ್ಲಾ ಹಂತದಲ್ಲಿ ಪರೀಕ್ಷೆ ನಡೆಸಿ ಆದಷ್ಟು ಶೀಘ್ರವಾಗಿ ಫಲಿತಾಂಶವನ್ನು ಪ್ರಕಟಿಸುವುದರಿಂದ ಉನ್ನತ ಶಿಕ್ಷಣ, ಔದ್ಯೋಗಿಕ ಶಿಕ್ಷಣ ಅಥವಾ ಕನಿಷ್ಠ ಎಸ್ಎಸ್ಎಲ್ಸಿ ಪರೀಕ್ಷೆ ಆಧಾರದಲ್ಲಿ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು, ಬ್ಯಾಂಕ್ಗಳಲ್ಲಿ ಸಾಲ-ಸೌಲಭ್ಯಗಳನ್ನು ಪಡೆಯುವುದು ಸೇರಿ ಹತ್ತಾರು ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಕಲಿಕೆಯಲ್ಲಿ ಈಗಾಗಲೇ ಹಿಂದುಳಿದಿರುವ ವಿದ್ಯಾರ್ಥಿಗಳು ಮತ್ತೆ ಪರೀಕ್ಷೆಗಾಗಿ ವರ್ಷಾನುಗಟ್ಟಲೆ ಕಾಯುವುದರಿಂದ ಶೈಕ್ಷಣಿಕ ದೃಷ್ಟಿಯಲ್ಲಿ ಲಾಭಕ್ಕಿಂತ ನಷ್ಟವೇ ಹೆಚ್ಚು. ಒಂದು ಬಾರಿ ಶಿಕ್ಷಣದಿಂದ ವಿಮುಖರಾಗಲು ನಿರ್ಧರಿಸಿದರೆ, ಮತ್ತೆ ಪರೀಕ್ಷೆಗೆ ಕರೆದುಕೊಂಡು ಬರುವುದು ಕಷ್ಟದ ವಿಷಯ. ಅಲ್ಲದೆ, ದೇಶದ ಒಟ್ಟು ದಾಖಲಾತಿ ಅನುಪಾತ (ಜಿಇಆರ್) ಕುಸಿತಕ್ಕೂ ಇದು ಕಾರಣವಾಗಲಿದೆ ಎಂಬುದು ಇಲಾಖೆ ನಿಲುವಾಗಿದೆ.