ಮುನಿರತ್ನ ವಿರುದ್ಧ ಮತ್ತೊಂದು ಕೇಸ್

munirathna-640x381
Published on

ಬೆಂಗಳೂರು: ರಾಜರಾಜೇಶ್ವರಿನಗರದ ಶಾಸಕ ಮುನಿರತ್ನ ನಾಯ್ಡುಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಜೆಡಿಎಸ್ ಮುಖಂಡ ಮತ್ತು ಅವರ ಪತ್ನಿಯ ಕೊಲೆಗೆ ಯತ್ನಿಸಿರುವ ಆರೋಪದ ಮೇಲೆ ನಂದಿನಿ ಲೇಔಟ್ ಪೊಲೀಸರು, ಮುನಿರತ್ನ ವಿರುದ್ಧ ಪ್ರಕರಣ ದಾಖಲಾಗಿದ್ದು, ಸಿಐಡಿಗೆ ವರ್ಗಾವಣೆ ಆಗುವ ಸಾಧ್ಯತೆಗಳಿವೆ.

ಲಗ್ಗೆರೆಯ ನರಸಿಂಹಸ್ವಾಮಿ ಲೇಔಟ್ ನಿವಾಸಿ ಜೆಡಿಎಸ್ ನಾರಾಯಣಸ್ವಾಮಿ, ಈ ಕುರಿತು ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ಮುನಿರತ್ನ, ಜೆ.ಪಿ.ಪಾರ್ಕ್‌ನ ಸುನಂದಮ್ಮ, ಯಶವಂತಪುರದ ವೆಂಕಟೇಶ್, ಲಕ್ಷ್ಮಮ್ಮ, ಜಯಮ್ಮ, ಲತಾ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಬಿಬಿಎಂಪಿ ಮಾಜಿ ಸದಸ್ಯೆ ಮಂಜುಳಾ ಎನ್. ಸ್ವಾಮಿ ಅವರ ಖಾಸಗಿ ವಿಡಿಯೋ ರೆಕಾರ್ಡ್ ಮಾಡಿ ಕೊಡಲು ಖಾಸಗಿ ಚಾನಲ್‌ಗೆ ಸುಪಾರಿ ಕೊಟ್ಟಿದ್ದರು. ಇದಲ್ಲದೆ, 2018ರಿಂದ ನಿರಂತರವಾಗಿ ಮಂಜುಳಾ ಮತ್ತ ನನ್ನ ಕೊಲೆಗೆ ಯತ್ನಿಸಿದ್ದಾರೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ಕೊಟ್ಟರೂ ಬೆದರಿಸಿ ವಾಪಸ್ ತೆಗೆದುಕೊಳ್ಳುವಂತೆ ಮಾಡಿದ್ದಾರೆ. ಈ ಎಲ್ಲದಕ್ಕೂ ಸಾಕ್ಷ್ಯಗಳು ಇವೆ ಎಂದು ನಾರಾಯಣಸ್ವಾಮಿ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ.

2018ರಲ್ಲಿ ನನ್ನ ಪತ್ನಿ ಮೇಲೆ ಅವರ ಬೆಂಬಲಿಗರನ್ನು ಬಿಟ್ಟು ಹಲ್ಲೆ ಮಾಡಿಸಿ ಮಾನಸಿಕ ಹಿಂಸೆ ಕೊಟ್ಟಿದ್ದರು. ಕೊಲಂಬಿಯಾ ಆಸ್ಪತ್ರೆ ಮತ್ತು ಎಸ್‌ಡಿಎಂ ಆಸ್ಪತ್ರೆಯಲ್ಲಿ ಪಂಚಕರ್ಮ ಚಿಕಿತ್ಸೆ ಪಡೆದರೂ ಇನ್ನೂ ನನ್ನ ಪತ್ನಿ ಸರಿಹೋಗಿಲ್ಲ. ಕಾರಿನಲ್ಲಿ ಕದಿರಿ ನರಸಿಂಹಸ್ವಾಮಿ ದೇವಸ್ಥಾನಕ್ಕೆ ಹೋಗಬೇಕಾದರೆ ಹಿಂದೆಯೇ ಬೆಂಬಲಿಗರನ್ನು ಕಳುಹಿಸಿ ಕೊಲೆ ಮಾಡುವಂತೆ ಸೂಚಿಸಿದ್ದರು. ಅಂದಿನ ಎಂಎಲ್‌ಎ ಸಿದ್ದೇಗೌಡ ಅವರ ಪುತ್ರನನ್ನು ಬಳಸಿಕೊಂಡಿದ್ದರು. ಈ ಬಗ್ಗೆ ಎಂಎಲ್‌ಎ ಗಮನಕ್ಕೆ ತಂದು ಬಚಾವ್ ಆಗಿ ಬಂದಿರುವುದಾಗಿ ಆರೋಪಿಸಿದ್ದಾರೆ.

ಪೊಲೀಸ್ ಇನ್‌ಸ್ಪೆಕ್ಟರ್ ಸಹಾಯದಿಂದ ನಾನು ಓಡಾಡುವ ಲೊಕೇಷನ್‌ಗಳನ್ನು ಪಡೆದು ಕೊಲೆ ಮಾಡುವಂತೆ ರೌಡಿಗಳು ಬಿಟ್ಟಿದ್ದರು. ಸುಖಾಸುಮ್ಮನೆ ನನ್ನ ಮೇಲೆ ಸುಳ್ಳು ದೂರುಗಳನ್ನು ದಾಖಲಿಸಿ ರೌಡಿಪಟ್ಟಿಯನ್ನು ತೆರೆದಿದ್ದರು. 9 ವರ್ಷಗಳ ಕಾಲ ಮುಚ್ಚಿಟ್ಟಿದ್ದ ಪೊಲೀಸರು 2023ರ ವಿಧಾನಸಭಾ ಚುನಾವಣೆ ವೇಳೆ ರಾಜರಾಜೇಶ್ವರಿನಗರ ಕ್ಷೇತ್ರಕ್ಕೆ ಸ್ಪಂಧಿಸಿದ್ದ ಕುಸುಮ ಹನುಮಂತರಾಯಪ್ಪ ಪರವಾಗಿ ಪ್ರಚಾರಕ್ಕೆ ಹೋದಾಗ ಪೊಲೀಸರು ಬಂದು ತಡೆದಿದ್ದರು. ರೌಡಿಶೀಟರ್ ಆಗಿರುವ ಕಾರಣಕ್ಕೆ ಪ್ರಚಾರದಲ್ಲಿ ಭಾಗವಹಿಸದಂತೆ ಎಚ್ಚರಿಕೆ ನೀಡಿದಾಗ ನನ್ನ ಗಮನಕ್ಕೆ ಬಂದಿತ್ತು.

2024ರ ಅಕ್ಟೋಬರ್ 10ರಂದು ಪೀಣ್ಯ ಪೊಲೀಸರು ಮನೆಗೆ ಬಂದು ಮುನಿರತ್ನ ಅವರ ಒತ್ತಡದಿಂದ ರೌಡಿಪಟ್ಟಿ ತೆರೆಯಲಾಗಿತ್ತು. ಇದೀಗ ಕೈಬಿಡುವುದಾಗಿ ಹೇಳಿ ಹೋಗಿದ್ದಾರೆ. ಮುನಿರತ್ನ ಅವರು ನನ್ನ ಮತ್ತು ನನ್ನ ಪತ್ನಿಯ ವಿರುದ್ಧ ಮಾಡಿದ ಕುತಂತ್ರದಿಂದ ಸಾರ್ವಜನಿಕವಾಗಿ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಅಪರಿಚಿತರು ನೋಡಿದರೇ ಭಯ ಆಗುತ್ತಿದೆ. ಈ ಕೂಡಲೇ ಮುನಿರತ್ನ ಮತ್ತು ಇತರರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ನಾರಾಯಣಸ್ವಾಮಿ, ಮನವಿ ಮಾಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net