

West Bengal: ಪಶ್ಚಿಮ ಬಂಗಾಳದ ಜಲ್ಪೈಗುರಿಯಲ್ಲಿ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದ ಬಿಜೆಪಿ ನಿಯೋಗದ ಮೇಲೆ ಅಪರಿಚಿತ ದುಷ್ಕರ್ಮಿಗಳು ದಾಳಿ ನಡೆಸಿದ ಮರುದಿನವೇ ಮತ್ತೊಬ್ಬ ಬಿಜೆಪಿ ಶಾಸಕನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಮಂಗಳವಾರ(ಅ. 07) ವರದಿಯಾಗಿದೆ.
ಮಂಗಳವಾರ ಅಲಿಪುರ್ದಾರ್‌ನಲ್ಲಿ ಪ್ರವಾಹ ಪರಿಹಾರ ಸಾಮಗ್ರಿಗಳನ್ನು ವಿತರಿಸುತ್ತಿದ್ದ ಬಿಜೆಪಿ ಶಾಸಕ ಮನೋಜ್ ಕುಮಾರ್ ಒರಾನ್ ಅವರ ಮೇಲೆ ತೃಣಮೂಲ ಕಾಂಗ್ರೆಸ್ ( ಟಿಎಂಸಿ ) ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಈ ಆರೋಪವನ್ನು ಟಿಎಂಸಿ ತಳ್ಳಿ ಹಾಕಿದ್ದು ಆಧಾರರಹಿತ ಆರೋಪ ಎಂದು ಹೇಳಿದೆ.
ಈ ಕುರಿತು ಪಿಟಿಐ ಜೊತೆ ಮಾತನಾಡಿರುವ ಶಾಸಕ ಮನೋಜ್ ಕುಮಾರ್ ಒರಾನ್, ಪ್ರವಾಹ ಪೀಡಿತ ಜನರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದಾಗ, ಇದ್ದಕ್ಕಿದ್ದಂತೆ ನನ್ನನ್ನು ಸುತ್ತುವರೆದು ದಾಳಿ ಮಾಡಲಾಡಗಿದೆ. ಇದು ಟಿಎಂಸಿ ಆಡಳಿತದಲ್ಲಿರುವ ಪ್ರಜಾಪ್ರಭುತ್ವದ ಸ್ಥಿತಿ ಎಂದು ಹೇಳಿದ್ದಾರೆ.
ಘಟನೆ ಬಗ್ಗೆ ರಾಜ್ಯ ಬಿಜೆಪಿ ಘಟಕ ಎಕ್ಸ್ನಲ್ಲಿ ವಿಡಿಯೋ ಪೋಸ್ಟ್ ಹಾಕಿದ್ದು, "ಉತ್ತರ ಬಂಗಾಳದಲ್ಲಿ ಪ್ರವಾಹದಿಂದ ನಾಶವಾದ ಜನರ ಬೆಂಬಲಕ್ಕೆ ನಿಲ್ಲಲು ಪ್ರಯತ್ನಿಸಿದಾಗಲೆಲ್ಲಾ, ತೃಣಮೂಲ ಕಾಂಗ್ರೆಸ್ ತನ್ನ ಗುಂಡಾ ಸಂಸ್ಕೃತಿಯನ್ನು ತೋರಿಸುತ್ತಿದೆ. ಮಮತಾ ಬ್ಯಾನರ್ಜಿ ಆಡಳಿತದಲ್ಲಿ ಈಗ ಪ್ರವಾಹಪೀಡಿತರ ಬೆಂಬಲಕ್ಕೆ ನಿಲ್ಲುವುದು ಕೂಡ ಅಪರಾಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಬಿಜೆಪಿ ಆರೋಪವನ್ನು ತಳ್ಳಿ ಹಾಕಿರುವ ಟಿಎಂಸಿ, ಟಿಎಂಸಿ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ ಎಂಬ ಆರೋಪಗಳು ಆಧಾರರಹಿತವಾಗಿವೆ. ಶಾಸಕ ಮನೋಜ್ ಒರಾನ್ ಅವರೇ ಮೊದಲು ತಮ್ಮ ಪ್ರದೇಶದಲ್ಲಿ ವಯಸ್ಸಾದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದರು ಎಂದು ಹೇಳಿದೆ. (ಏಜೆನ್ಸೀಸ್)