

ಶಿವಮೊಗ್ಗ: ತಾಲೂಕಿನ ವಿವಿಧ ರೈತರಿಗೆ ಕೆಲ ಅನಾಮಧೇಯ ಮತ್ತು ಅನಧಿಕೃತ ವ್ಯಕ್ತಿಗಳು ಕೃಷಿ ಇಲಾಖೆಯಿಂದ ಕರೆ ಮಾಡುತ್ತಿದ್ದು, ಸ್ಪ್ರಿಂಕ್ಲರ್ ಸೆಟ್ ಮತ್ತು ಟಾರ್ಪಲಿನ್ ನೀಡಲಾಗುತ್ತದೆ. ಅದಕ್ಕೆ ನೀವು ಫೋನ್‌ಪೇ ಅಥವಾ ಗೂಗಲ್ ಪೇ ಮೂಲಕ ಹಣ ಪಾವತಿಸುವಂತೆ ತಿಳಿಸಿ ವಂಚಿಸುವ ಪ್ರಯತ್ನಗಳು ನಡೆಯುತ್ತಿವೆ.
ಈ ದೂರವಾಣಿ ಸಂಖ್ಯೆ 7259260962 ಟ್ರೂ ಕಾಲರ್‌ನಲ್ಲಿ ಕೃಷಿ ಇಲಾಖೆಯ ‘ಚೀನಾ ಶರ್ನಾಗೋ ಎಂದು ತೋರಿಸುತ್ತಿದೆ. ಆದರೆ ವಾಸ್ತವವಾಗಿ ಕೃಷಿ ಇಲಾಖೆಯಿಂದ ಸವಲತ್ತು ಪಡೆಯಲು ರೈತ ಸಂಪರ್ಕ ಕೇಂದ್ರಗಳಿಗೆ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಇಲಾಖೆಯಿಂದ ಹಣ ವರ್ಗಾವಣೆಗೆ ಪತ್ರ ಪಡೆದು ರೈತರು ತಮ್ಮ ಖಾತೆಯಿಂದ ನೇರವಾಗಿ ಸಂಸ್ಥೆ ಖಾತೆಗೆ ತಮ್ಮ ಪಾಲಿನ ಮೊತ್ತವನ್ನು ಪಾವತಿಸಬೇಕು.
ಪಾವತಿಸಿದ ದಾಖಲೆ ಸಲ್ಲಿಸಿದ ನಂತರವೇ ಸೌಲಭ್ಯವನ್ನು ರೈತ ಸಂಪರ್ಕ ಕೇಂದ್ರದಲ್ಲೇ ವಿತರಿಸಲಾಗುವುದು. ಹಾಗಾಗಿ ಈ ರೀತಿಯ ಸುಳ್ಳು ಕರೆಗಳು ಬಂದಾಗ ಯಾವುದೇ ರೀತಿಯಲ್ಲೂ ಹಣ ವರ್ಗಾವಣೆ ಮಾಡಬಾರದು. ಅಂಥವರ ಕರೆಯನ್ನು ರೆಕಾರ್ಡ್ ಮಾಡಿಕೊಂಡು ಸೈಬರ್ ಕ್ರೈಮ್ ಪೊಲೀಸರಿಗೆ(ಸಂಪರ್ಕ ಸಂಖ್ಯೆ 1930) ಕರೆ ಮಾಡಿ ದೂರು ಸಲ್ಲಿಸುವಂತೆ ಕೃಷಿ ಇಲಾಖೆ ಶಿವಮೊಗ್ಗ ಸಹಾಯಕ ಕೃಷಿ ನಿರ್ದೇಶಕ ಎಸ್.ಟಿ.ರಮೇಶ್ ಸಲಹೆ ನೀಡಿದ್ದಾರೆ.