

ಬೆಂಗಳೂರು: ರಾಜ್ಯ ಸರ್ಕಾರ ಏಳನೇ ವೇತನ ಆಯೋಗದ ಶಿಾರಸು, ವರದಿ ಪ್ರಕಾರ ವೇತನ ಹೆಚ್ಚಳವು ನೌಕರ ವರ್ಗಕ್ಕೆ ಖುಷಿ ನೀಡಿದೆ. ಅದೇ ಕಾಲಕ್ಕೆ ಹಿಂದುಳಿದ ವರ್ಗಗಳ ಅಧಿಕಾರಿಗಳು, ನೌಕರರಿಗೆ ಹೊಸ ಸಮಸ್ಯೆ ಸೃಷ್ಟಿಯಾಗಿದೆ.
ಸರ್ಕಾರದ ಎಲ್ಲ ವೃಂದದ ನೌಕರರಿಗೆ ವೇತನ ಹೆಚ್ಚಳ ಅನ್ವಯವಾಗಿದೆ. ಯಾವುದೇ ವರ್ಗಕ್ಕೆ ಸೇರಿದ ನೌಕರಿರಲಿ, ಸಿ ವೃಂದದ ನೌಕರರು ಪಡೆಯುತ್ತಿರುವ ಪರಿಷ್ಕೃತ ವೇತನದ ಪ್ರಕಾರ ವಾರ್ಷಿಕ ಆದಾಯ ಮಿತಿಯು ಸಲೀಸಾಗಿ ಒಂಬತ್ತು ಲಕ್ಷ ರೂ. ದಾಟುತ್ತದೆ.
ಆದಾಯ ಹೆಚ್ಚಳದಿಂದ ಕೆನೆಪದರ ನೀತಿ ಪ್ರಕಾರ ಹಿಂದುಳಿದ ವರ್ಗಗಳಿಗೆ ಸೇರಿದ ಎಲ್ಲ ಕೆಟಗರಿ ಅಧಿಕಾರಿಗಳು, ನೌಕರರ ಮಕ್ಕಳು ಮೀಸಲಾತಿ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ವಸತಿ ಶಾಲೆ ಹಿಡಿದು ವೃತ್ತಿಪರ ವ್ಯಾಸಂಗದವರೆಗೂ ಪ್ರವೇಶಾವಕಾಶ ಕೈತಪ್ಪುತ್ತಿದೆ ಎಂದು ಹಿಂದುಳಿದ ವರ್ಗಗಳ ನೌಕರರ ವಲಯ ಚಿಂತೆಗೀಡಾಗಿದೆ.
ನವೋದಯ, ಮುರಾರ್ಜಿ ದೇಸಾಯಿ ವಸತಿ ಶಾಲೆಗಳು, ಇಂಜಿನಿಯರಿಂಗ್, ವೈದ್ಯಕೀಯ ಇತರ ವ್ಯಾಸಂಗದ ಪ್ರವೇಶ ಸವಾಲಾಗಿದೆ. ಸಾಮಾನ್ಯ ವರ್ಗದವರ ಜತೆಗೆ ಹಿಂದುಳಿದ ವರ್ಗಗಳ ಮಕ್ಕಳು ಪೈಪೋಟಿ ಎದುರಿಸುವಂತಾಗಿದೆ ಎಂಬುದು ಒಬಿಸಿ ನೌಕರ ವರ್ಗದ ಅಳಲು.
ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ, ಆದಾಯ ತೆರಿಗೆಯಿಂದ ವಿನಾಯಿತಿ ಪಡೆಯಲು ಒಬಿಸಿಯ 2ಎ, 2ಬಿ, 3ಎ, 3ಬಿಗಳಿಗೆ ಅನ್ವಯಿಸುವಂತೆ ಕೆನೆಪದರ ನೀತಿಯನ್ನು ನಿರ್ಣಯಿಸಲು ಆದಾಯ ಮಿತಿ ಪರಿಷ್ಕರಣೆಯೊಂದೇ ಈ ಸಮಸ್ಯೆಗೆ ಇರುವ ಏಕೈಕ ಪರಿಹಾರವಾಗಿವೆ.
ಸಿಎಂ ಸಿದ್ದರಾಮಯ್ಯ ಅವರು ತಮ್ಮ ಮೊದಲ ಅಧಿಕಾರಾವಧಿಯಲ್ಲಿ ಒಬಿಸಿ ನೌಕರರ ವಾರ್ಷಿಕ ಆದಾಯಮಿತಿಯನ್ನು ಆರು ಲಕ್ಷ ರೂ.ಗಳಿಂದ ಎಂಟು ಲಕ್ಷ ರೂ.ಗಳಿಗೆ ಹೆಚ್ಚಿಸಿದ್ದರು.
ಕೆನೆಪದರಕ್ಕೆ ನಿಗದಿಪಡಿಸಿರುವ ಅಭ್ಯರ್ಥಿಗಳು, ಮತ್ತು ಅವರ ತಂದೆ-ತಾಯಿ/ಪೋಷಕರ ವಾರ್ಷಿಕ ಮಿತಿ ಹೆಚ್ಚಿಸಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ 2018ರ ಸೆಪ್ಟೆಂಬರ್ 14ರಂದು ಆದೇಶ ಹೊರಡಿಸಿತ್ತು.
ಇದರಿಂದಾಗಿ ಒಬಿಸಿಯ ಲಕ್ಷಾಂತರ ನೌಕರರು ಮತ್ತವರ ಮಕ್ಕಳಿಗೆ ಅನುಕೂಲವಾಗಿತ್ತು. ಈಗಲೂ ಸಿದ್ದರಾಮಯ್ಯ ಅವರೇ ಸಿಎಂ ಆಗಿದ್ದಾರೆ. ಒಬಿಸಿ ನೌಕರರ ಸಮಸ್ಯೆ ಏನೆಂಬುದು ತಿಳಿದವರಾಗಿದ್ದು, ಒಟ್ಟಾರೆ ವಾರ್ಷಿಕ ಆದಾಯ ಮಿತಿಯನ್ನು ಪರಿಷ್ಕರಿಸಿ ಆದೇಶ ಹೊರಡಿಸಲು ಕ್ರಮವಹಿಸುತ್ತಾರೆ ಎಂಬ ವಿಶ್ವಾಸವನ್ನು ಒಬಿಸಿ ನೌಕರರು ಹೊಂದಿದ್ದಾರೆ.