

ಮಹಾರಾಷ್ಟ್ರ: ನಿಮ್ಮ ಗ್ರಾಮವನ್ನು ಸುಟ್ಟು ಹಾಕಿದ ಹೈದರಾಬಾದ್ ನಿಜಾಮರ ಮೇಲೆ ನಿಮ್ಮ ಸಿಟ್ಟು ತೋರಿಸಿ ಎಂದು ಸಿಎಂ ಯೋಗಿ ಆದಿತ್ಯನಾಥ್(CM Yogi Adityanath) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದರು.
ಮಹಾರಾಷ್ಟ್ರದ ಅಚಲಪುರದಲ್ಲಿ ಮಂಗಳವಾರ(ನ.12) ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, '' ಇತ್ತೀಚಿನ ದಿನಗಳಲ್ಲಿ ಮಲ್ಲಿಕಾರ್ಜುನ್ ಖರ್ಗೆ ಅವರು ನನ್ನ ಮೇಲೆ ಕೋಪಗೊಳ್ಳುತ್ತಿದ್ದಾರೆ. ಖರ್ಗೆ ಜಿ, ನಾನು ನಿಮ್ಮ ವಯಸ್ಸಿಗೆ ಗೌರವ ನೀಡುತ್ತೇನೆ. ನನ್ನ ಮೇಲೆ ಕೋಪಗೊಳ್ಳಬೇಡಿ, ಒಂದು ವೇಳೆ ಕೋಪಗೊಳ್ಳುವುದಿದ್ದರೆ ರಜಾಕರ ಮೇಲೆ ಸಿಟ್ಟಾಗಿ'' ಎಂದರು.
ನಿಜಾಮರು ನಿಮ್ಮ ಗ್ರಾಮವನ್ನು ಸುಟ್ಟು ಹಾಕಿದರು, ಹಿಂದುಗಳನ್ನು ಕ್ರೂರವಾಗಿ ಕೊಂದರು. ನಿಮ್ಮ ತಂದೆ, ತಾಯಿ, ಸಹೋದರಿ ಮತ್ತು ಕುಟುಂಬದ ಸದಸ್ಯರನ್ನು ಸುಟ್ಟರು. ಆದರೆ, ಖರ್ಗೆ ಅವರು ಇದನ್ನು ಹೇಳುವುದಿಲ್ಲ, ಈ ಮಾತುಗಳಾಡಿದರೆ ಮುಸ್ಲಿಂ ವೋಟ್ಗಳು ನುಣುಚಿಕೊಳ್ಳುತ್ತವೆ. ಮತ ಬ್ಯಾಂಕ್ ಗಾಗಿ ಖರ್ಗೆ ಅವರು, ತಮ್ಮ ಕುಟುಂಬದ ತ್ಯಾಗವನ್ನೇ ಮರೆತ್ತಿದ್ದಾರೆ ಎಂದು ಹರಿಹಾಯ್ದರು.
'ಕೆಲ ರಾಜಕಾರಣಿಗಳು ಕೇಸರಿ ಬಟ್ಟೆಗಳನ್ನು ಧರಿಸಿ ಸಾಧುಗಳ ವೇಷದಲ್ಲಿ ಬದುಕುತ್ತಿದ್ದಾರೆ. ಅಲ್ಲದೇ, ದ್ವೇಷ ಹರಡುತ್ತಿದ್ದಾರೆ ಮತ್ತು ಜನರನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ' ಎಂದು ಸಿಎಂ ಯೋಗಿ ಹೆಸರು ಹೇಳದೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದರು,(ಏಜೆನ್ಸೀಸ್).