

ದೇಶದ ಬೆನ್ನೆಲುಬು ಎಂದೇ ಗುರುತಿಸಲಾಗುವ ರೈತನನ್ನು ಕೇಂದ್ರಿಕರಿಸಿ ಹಲವು ಯೋಜನೆಗಳನ್ನು ಪ್ರಕಟಿಸುವ ಮೂಲಕ ಕೃಷಿ ವಲಯವನ್ನು ಮತ್ತಷ್ಟು ಎತ್ತರಕ್ಕೆ ಏರಿಸುವ ಸಂಕಲ್ಪವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ‘ಭಾರತದ ಪ್ರಗತಿಗೆ ಕೃಷಿಯೇ ಮೊದಲ ಇಂಜಿನ್’ ಎಂದು ಪ್ರತಿಪಾದಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೃಷಿ, ರೈತ ಕಲ್ಯಾಣ ಕ್ಷೇತ್ರಕ್ಕೆ 1,71,437 ಕೋಟಿ ರೂ. ಮೊತ್ತದ ಅನುದಾನವನ್ನು ಮೀಸಲಿಟ್ಟಿರುವುದಾಗಿ ಪ್ರಕಟಿಸಿದ್ದಾರೆ.
ಕಳೆದ ವರ್ಷ ಕೃಷಿ ವಲಯದ ಬಜೆಟ್ ಗಾತ್ರ 1.25 ಲಕ್ಷ ಕೋಟಿ ರೂ. ನೀಡಲಾಗಿತ್ತು. ಈ ಬಾರಿ ಬರೋಬ್ಬರಿ 46 ಲಕ್ಷ ಕೋಟಿ ರೂ. (ಶೇ.27) ಹೆಚ್ಚಳದೊಂದಿಗೆ ರೈತರ ಕಲ್ಯಾಣಕ್ಕೆ ವಿಶೇಷ ಒತ್ತು ನೀಡುವತ್ತ ಸರ್ಕಾರ ದೃಷ್ಟಿ ಹರಿಸಿದೆ. ಇದಕ್ಕಾಗಿ ದೇಶದ ಎಲ್ಲ ಭಾಗಗಳನ್ನು ಒಳಗೊಳ್ಳುವ ಕಾರ್ಯಕ್ರಮಗಳನ್ನು ಪ್ರಕಟಿಸಲಾಗಿದೆ. ಮುಖ್ಯವಾಗಿ ಗ್ರಾಮೀಣ ಭಾಗದ ರೈತರು ಸ್ವಾವಲಂಬನೆ ಸಾಧಿಸಲು ಬೇಕಾದ ಪೂರಕ ವಾತಾವರಣ ನಿರ್ವಿುಸುವ ವಾಗ್ದಾನವನ್ನು ನೀಡಲಾಗಿದೆ.
ಕೃಷಿ ಚಟುವಟಿಕೆಗೆ ನೆರವಾಗಲು ಸಬ್ಸಿಡಿ ಆಧಾರಿತ ಕಿಸಾನ್ ಕ್ರೆಡಿಟ್ ಕಾರ್ಡ್ನಿಂದ ನೀಡಲಾಗುವ ಸಾಲದ ಮಿತಿಯನ್ನು 3 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಏರಿಸುವುದು ಸೇರಿ 6 ಹೊಸ ಕಾರ್ಯಕ್ರಮಗಳನ್ನು ಘೋಷಿಸಲಾಗಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ‘ಪ್ರಧಾನಮಂತ್ರಿ ಧನ್-ಧಾನ್ಯ ಕೃಷಿ ಯೋಜನೆ’ ಯನ್ನು ಕಡಿಮೆ ಪ್ರಮಾಣದ ಬೆಳೆ ಇಳುವರಿ ಹೊಂದಿರುವ 100 ಜಿಲ್ಲೆಗಳಲ್ಲಿ ಅನುಷ್ಠಾನಕ್ಕೆ ತರಲಾಗುತ್ತದೆ. ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಜಾರಿಗೆ ತರಲಿರುವ ಈ ಯೋಜನೆಯನ್ನು ಒಟ್ಟು 1.7 ಕೋಟಿ ಅನ್ನದಾತರಿಗೆ ತಲುಪಿಸುವ ಗುರಿ ಹೊಂದಿದ್ದು, ಕೃಷಿ ಉತ್ಪಾದನೆ ಹೆಚ್ಚಳ, ಬೆಳೆ ವೈವಿಧ್ಯತೆ ಹಾಗೂ ಕೊಯ್ಲು ನಂತರದ ಮೂಲಸೌಕರ್ಯ ಹೆಚ್ಚಳಕ್ಕೆ ಆದ್ಯತೆ ನೀಡಲಾಗುತ್ತದೆ.
ಆಹಾರ ಮತ್ತು ಪೋಷಕಾಂಶ ಭದ್ರತೆಗಾಗಿ 10 ಲಕ್ಷ ಜೀನ್ ಪ್ಲಾಸ್ಮಲೈನ್ ಹೊಂದಿರುವ 2ನೇ ಜೀನ್ ಬ್ಯಾಂಕ್ ಸ್ಥಾಪಿಸಲು ಘೋಷಿಸಲಾಗಿದೆ. ಇದು ಸಾರ್ವಜನಿಕ ಮತ್ತು ಖಾಸಗಿ ವಲಯಗಳಿಗೆ ಜೆನೆಟಿಕ್ ಸಂಪನ್ಮೂಲಗಳ ಸಂರಕ್ಷಣೆಗೆ ಉತ್ತೇಜನ ಸಿಗಲಿದೆ. ಅಸ್ಸಾಂನಲ್ಲಿ ಯೂರಿಯಾ ಸ್ಥಾವರ: ಯೂರಿಯಾ ಪೂರೈಕೆಯನ್ನು ಮತ್ತಷ್ಟು ಹೆಚ್ಚಿಸಲು ಅಸ್ಸಾಂನ ನಮೃಪ್ನಲ್ಲಿ ವಾರ್ಷಿಕ 12.7 ಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯದ ಸ್ಥಾವರ ಸ್ಥಾಪಿಸಲಾಗುವುದು ಎಂದು ನಿರ್ಮಲಾ ತಿಳಿಸಿದ್ದಾರೆ.
8,259.85 ಕೋಟಿ ರೂ. ಪ್ರಧಾನ ಮಂತ್ರಿ ಕೃಷಿ ಸಿಂಚೈ ಯೋಜನೆ (ಪಿಎಂಕೆಎಸ್ವೈ)ಗೆ ಮೀಸಲು ಮನೆ ಮನೆಗೆ ಗಂಗೆ. ದೇಶದ ಎಲ್ಲ ಕುಟುಂಬಗಳಿಗೂ ಶುದ್ಧ ಕುಡಿಯುವ ನೀರು ಒದಗಿಸುವ ಮಹತ್ವಾಕಾಂಕ್ಷೆ ಯೋಜನೆಯಾದ ‘ಜಲ ಜೀವನ್ ಮಿಷನ್’ ಅನ್ನು 2028ರವರೆಗೆ ವಿಸ್ತರಿಸುವುದಾಗಿ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಜೆಜೆಎಂ ಮೂಲಕ ದೇಶದ 15 ಕೋಟಿ ಕುಟುಂಬಗಳಿಗೆ ನೀರು ಒದಗಿಸಲಾಗಿದೆ. ಮುಂಬರುವ ದಿನಗಳಲ್ಲಿ ಶೇ.100 ಗುರಿ ಸಾಧಿಸಲು ಯೋಜನೆ ವಿಸ್ತರಣೆ ಘೋಷಿಸಲಾಗಿದೆ.
ಕೇಂದ್ರ ಬಜೆಟ್ನಲ್ಲಿ ಕೃಷಿಗೆ ಹೆಚ್ಚಿನ ಮಣೆ ಹಾಕಿದ ಬೆನ್ನಲ್ಲೇ, ಶನಿವಾರ ಷೇರು ಮಾರುಕಟ್ಟೆಯಲ್ಲಿ ಅಗ್ರಿ ಸಂಬಂಧಿತ ಷೇರುಗಳಲ್ಲಿ ಶೇ.13 ಜಿಗಿತ ಕಂಡಿದೆ. ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಅಗ್ರಿ ಷೇರುಗಳಿಗೆ ಬೆಲೆ ಸಿಕ್ಕಿದೆ. ಮಂಗಲಮ್ ಸೀಡ್ಸ್ನ ಷೇರು ಮೌಲ್ಯ ಶೇ.7.09 ಏರಿಕೆಯೊಂದಿಗೆ ತಲಾ ಷೇರು 222 ರೂ.ಗೆ ಏರಿಕೆ ಕಂಡಿದೆ. ಕಾವೇರಿ ಸೀಡ್ಸ್ ಕಂ. ಶೇ.13.49, ನಾಥ್ ಬಯೋಜೀನೆಸ್ ಶೇ.5.77, ಧನುಕಾ ಅಗ್ರಿಟೆಕ್ ಶೇ.2.61 ಹಾಗೂ ಮಂಗಳೂರು ಕೆಮಿಕಲ್ಸ್ ಹಾಗೂ ಫರ್ಟಿಲೈಸರ್ಸ್ ಷೇರು ಶೇ.0.45 ಹೆಚ್ಚಿನ ಮೌಲ್ಯ ಪಡೆದುಕೊಂಡಿವೆ. ಇದರ ಹೊರತಾಗಿಯೂ ಒಂದೆರಡು ಕಂಪನಿಗಳ ಷೇರು ಮೌಲ್ಯ ತುಸು ಇಳಿಕೆ ಕಂಡಿದೆ.
ದೇಶವು ದ್ವಿದಳ ಧಾನ್ಯ ಉತ್ಪಾದನೆ ಯಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ 6 ವರ್ಷದ ಯೋಜನೆಯನ್ನು ಪ್ರಕಟಿಸಲಾಗಿದೆ. ತೊಗರಿ, ಉದ್ದು ಸೇರಿ ಮೂರು ಧಾನ್ಯಗಳ ಉತ್ಪಾದನೆ ಹೆಚ್ಚಿಸಲು ಬೇಕಾದ ಪೂರಕ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಸಹಕಾರಿ ರಂಗದ ‘ನಾಫೆಡ್’ ಹಾಗೂ ರಾಷ್ಟ್ರೀಯ ಸಹಕಾರ ಗ್ರಾಹಕರ ಮಹಾಮಂಡಳ (ಎನ್ಸಿಸಿಎಫ್) ಸಂಸ್ಥೆಗಳ ಮೂಲಕ 4 ವರ್ಷದ ಅವಧಿಗೆ ಒಪ್ಪಂದ ಮಾಡಿಕೊಳ್ಳುವ ರೈತರಿಂದ ಈ ಧಾನ್ಯಗಳನ್ನು ಖರೀದಿಸಲಾಗುತ್ತದೆ.
ಸಣ್ಣ ಹಾಗೂ ಮಧ್ಯಮ ಪ್ರಮಾಣದ ಕೃಷಿಕರಿಗೆ ವರ ದಾನವಾಗಿರುವ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ವಿತರಿಸಲಾಗುವ ಸಬ್ಸಿಡಿ ಆಧಾರಿತ ಸಾಲದ ಮಿತಿಯನ್ನು 3 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಏರಿಸಲಾಗಿದೆ. ರೈತರು ಪದೇಪದೆ ಪ್ರಸ್ತಾಪಿಸುತ್ತಿದ್ದ ಈ ಸೌಲಭ್ಯಕ್ಕೆ ಸರ್ಕಾರ ಮನ್ನಣೆ ನೀಡಿದೆ. ಈ ನಿಲುವಿನಿಂದ ದೇಶದ 7.7 ಕೋಟಿ ಅನ್ನದಾತರಿಗೆ ಅನುಕೂಲವಾಗಲಿದೆ.
‘ಜನ ಭಾಗಿಧಾರಿ’ ಮೂಲಕ ಗ್ರಾಮೀಣ ಕೊಳವೆ ನೀರು ಸರಬರಾಜು ಯೋಜನೆಗಳ ಕಾರ್ಯಾಚರಣೆ ಮತ್ತು ನಿರ್ವಹಣೆ, ಮೂಲಸೌಕರ್ಯಗಳ ಗುಣಮಟ್ಟದ ಕುರಿತಾಗಿ ಜೆಜೆಎಂ ಗಮನಹರಿಸಲಿದೆ. ಸುಸ್ಥಿರತೆ ಮತ್ತು ನಾಗರಿಕ ಕೇಂದ್ರಿತ ನೀರು ಸರಬರಾಜು ಖಚಿತಪಡಿಸಿಕೊಳ್ಳಲು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಪ್ರತ್ಯೇಕ ತಿಳಿವಳಿಕೆ ಪತ್ರಕ್ಕೆ (ಎಂಒಯು) ಸಹಿ ಮಾಡಲಾಗುವುದು ಎಂದು ನಿರ್ಮಲಾ ಪ್ರಸ್ತಾಪಿಸಿದ್ದಾರೆ.
ಮುಂದಿನ ವರ್ಷದಲ್ಲಿ ಆಹಾರ ಮತ್ತು ರಸಗೊಬ್ಬರಗಳ ಮೇಲಿನ ಸರ್ಕಾರದ ಸಬ್ಸಿಡಿಯನ್ನು 3.71 ಲಕ್ಷ ಕೋಟಿ ರೂ.ಗೆ ನಿಗದಿಪಡಿಸಲಾಗಿದೆ. ಈ ಮೂಲಕ ಅನ್ನದಾತರ ನೆರವಿಗೆ ಕೇಂದ್ರ ಸರ್ಕಾರ ಧಾವಿಸಿದೆ. ಇದು ಪ್ರಸಕ್ತ ಹಣಕಾಸು ವರ್ಷದಲ್ಲಿ ಅಂದಾಜು ಮಾಡಲಾದ ವೆಚ್ಚಕ್ಕಿಂತ ಶೇ.0.70 ತುಸು ಹೆಚ್ಚಿದೆ. ಮುಂದಿನ ಹಣಕಾಸು ವರ್ಷದಲ್ಲಿ ಆಹಾರ ಸಬ್ಸಿಡಿಗಾಗಿ ಬಜೆಟ್ನಲ್ಲಿ 2,03,420 ಕೋಟಿ ರೂ. ಮೀಸಲಿಡಲಾಗಿದೆ. 2024-25ರ ಸಾಲಿನ ಪರಿಷ್ಕೃತ ಅಂದಾಜಿನ 1,97, 420 ಕೋಟಿ ರೂ.ಗಿಂತ ಅಧಿಕವಾಗಿದೆ. 2023-24ರಲ್ಲಿ ಆಹಾರ ಸಬ್ಸಿಡಿ ಬಿಲ್ 2.11 ಲಕ್ಷ ಕೋಟಿ ರೂ. ದಾಟಿತ್ತು. 2025-26ನೇ ಸಾಲಿನಲ್ಲಿ ರಸಗೊಬ್ಬರ ಸಬ್ಸಿಡಿ ಹಂಚಿಕೆಗೆ 1.67 ಲಕ್ಷ ಕೋಟಿ ರೂ. ಆಗಿದೆ. ಪ್ರಸಕ್ತ ಹಣಕಾಸು ವರ್ಷಕ್ಕೆ ಹೋಲಿಸಿದರೆ 1.71 ಲಕ್ಷ ಕೋಟಿ ರೂ.ಗಿಂತ ಕಡಿಮೆಯಾಗಿದೆ. ಕಳೆದ ವರ್ಷ ರಸಗೊಬ್ಬರ ಸಬ್ಸಿಡಿಗೆ 1.88 ಲಕ್ಷ ಕೋಟಿ ರೂ.ಹಣ ಮೀಸಲಿಡಲಾಗಿತ್ತು.
‘ರಾಷ್ಟ್ರೀಯ ಆಹಾರ ತಂತ್ರಜ್ಞಾನ, ಉದ್ಯಮಶೀಲತೆ ಮತ್ತು ನಿರ್ವಹಣಾ ಸಂಸ್ಥೆ’ಯನ್ನು ಬಿಹಾರದಲ್ಲಿ ಸ್ಥಾಪಿಸುವುದಾಗಿ ಕೇಂದ್ರ ಬಜೆಟ್ನಲ್ಲಿ ಪ್ರಸ್ತಾಪಿಸಲಾಗಿದೆ. ಇದರಿಂದ ರೈತರ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮೂಲಕ ಆದಾಯ ಹೆಚ್ಚಲಿದೆ. ಕೌಶಲ, ಉದ್ಯಮಶೀಲತೆಗೆ ಉತ್ತೇಜನ ನೀಡುವುದಕ್ಕೆ ಮತ್ತು ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಲು ಸಹಾಯವಾಗಲಿದೆ.
ಹತ್ತಿ ಬೆಳೆಯುವ ಲಕ್ಷಾಂತರ ರೈತರ ಅನುಕೂಲಕ್ಕಾಗಿ, ‘ಹತ್ತಿ ಉತ್ಪಾದಕತೆ ಮಿಷನ್’ ಸ್ಥಾಪಿಸುವುದಾಗಿ ಘೋಷಿಸಲಾಗಿದೆ. ಈ ಮಿಷನ್ ಮುಂದಿನ ಐದು ವರ್ಷಗಳಲ್ಲಿ ಹತ್ತಿ ಉತ್ಪಾದಕತೆ ಮತ್ತು ಸುಸ್ಥಿರತೆಯಲ್ಲಿ ಗಮನಾರ್ಹ ಸುಧಾರಣೆಗಳನ್ನು ತರಲು ಸಹಕಾರಿಯಾಗಲಿದೆ. ರೈತರಿಗೆ ಅತ್ಯುತ್ತಮ ವಿಜ್ಞಾನ ಮತ್ತು ತಂತ್ರಜ್ಞಾನ ಬಲವನ್ನು ಈ ಮಿಷನ್ ಮೂಲಕ ಒದಗಿಸಲಾಗುವುದು. ಜವಳಿ ವಲಯಕ್ಕಾಗಿ ಸಮಗ್ರ 5ಎಫ್ ದೃಷ್ಟಿಕೋನದೊಂದಿಗೆ ಹೊಂದಾಣಿಕೆಯಾಗುವಂತೆ ರೈತರ ಆದಾಯ ಹೆಚ್ಚಿಸಲು ಸಹಾಯ ಮಾಡುತ್ತದೆ ಹಾಗೂ ಭಾರತದ ಸಾಂಪ್ರದಾಯಿಕ ಜವಳಿ ವಲಯವನ್ನು ಪುನರುಜ್ಜೀವನಗೊಳಿಸಲು ಗುಣಮಟ್ಟದ ಹತ್ತಿಯ ಸ್ಥಿರ ಪೂರೈಕೆಯನ್ನು ಖಚಿತಪಡಿಸುತ್ತದೆ.
ಆಹಾರ ಉತ್ಪನ್ನವಾಗಿ ಬಳಸುವ ತಾವರೆ ಬೀಜ (ಫಾಕ್ಸ್ನಟ್) ಉತ್ಪಾದನೆ, ಸಂಸ್ಕರಣೆ, ಮೌಲ್ಯವರ್ಧನೆ, ಮಾರುಕಟ್ಟೆ ಸುಧಾರಿಸಲು ತಾವರೆ ಬೀಜ (ಮಖಾನಾ) ಮಂಡಳಿಯನ್ನು ಬಿಹಾರದಲ್ಲಿ ಸ್ಥಾಪಿಸಲಾಗುತ್ತದೆ. ಈ ಮಂಡಳಿ ಮೂಲಕ ತಾವರೆ ಬೀಜ ಉತ್ಪಾದಿತ ರೈತರಿಗೆ ತರಬೇತಿ ನೀಡಲಾಗುವುದು. ಅಂತೆಯೇ ಸರ್ಕಾರಿ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಸಹಕಾರಿಯಾಗುತ್ತದೆ.