

| ಪ್ರೊ. ಸುಬ್ರಾಯ ವಿ. ಭಟ್ಟ ಗುಂಜಗೋಡು
ಸುಖವನ್ನು ಹೊಂದಬೇಕು ಎಂಬುದು ಮನುಷ್ಯಸಹಜ ಇಚ್ಛೆ. ಭಾರತೀಯ ಸಂಸ್ಕೃತಿಯ ಮೂಲವಾದ ವೇದಗಳು ಹಾಗೂ ಅವನ್ನಾಶ್ರಯಿಸಿ ಹೊರಟ ಶಾಸ್ತ್ರಗಳು, ಸ್ಮೃತಿ, ಪುರಾಣಗಳೆಲ್ಲ ಮಾನವನ ಇಹ ಹಾಗೂ ಪರಲೋಕದ ಸುಖವನ್ನು ಹೊಂದಲು ಅನೇಕ ಮಾರ್ಗಗಳನ್ನು ತಿಳಿಸಿಕೊಟ್ಟಿವೆ. ಅವುಗಳಲ್ಲಿ ಎಲ್ಲರಿಗೂ ಎಟಕುವ ಸಾಧನಗಳಲ್ಲಿ ಮುಖ್ಯವಾದದ್ದು ದಾನ. ಇದನ್ನೇ ವೇದವು ‘ದಾನೇ ಸರ್ವಂ ಪ್ರತಿಷ್ಠಿತಂ, ತಸ್ಮಾದ್ದಾನಂ ಪರಮಂ ವದಂತಿ |’ ಇತ್ಯಾದಿಯಾಗಿ ತಿಳಿಸುತ್ತಿದೆ. ಇನ್ನೂ ಅನೇಕ ಉಪನಿಷತ್ತಿನ ವಚನಗಳೂ ಅನ್ನದಾನದ ಮಹತ್ವವನ್ನು ತಿಳಿಸುತ್ತದೆ. ದಾನದಲ್ಲಿ ಐಹಿಕವು ಹಾಗೂ ಪಾರಲೌಕಿಕ ಎಲ್ಲ ಸುಖವು ಹುದುಗಿದೆ. ಪರಾಶರ ಸ್ಮೃತಿಯಲ್ಲಿಯೂ ಸಹ ಬೇರೆ ಬೇರೆ ಯುಗದಲ್ಲಿ ತಪಸ್ಸು, ಜ್ಞಾನ, ಯಜ್ಞ ಇವುಗಳು ಶೇಯಃ ಸಾಧನಗಳು ಎಂದು ತಿಳಿಸಿ, ಕಲಿಯುಗದಲ್ಲಿ ದಾನವನ್ನೇ ಶ್ರೇಯಃ ಸಾಧನೆಗೆ ಪ್ರಧಾನ ಮಾರ್ಗವಾಗಿ ತಿಳಿಸಿಕೊಟ್ಟಿದ್ದಾರೆ. ಗೋದಾನ, ಭೂದಾನ, ಸುವರ್ಣದಾನ, ವಸ್ತ್ರದಾನ, ಹಿರಣ್ಯದಾನ ಹೀಗೆ ಹಲವಾರು ವಿಧದ ದಾನಗಳ ಪಟ್ಟಿಯೇ ಧರ್ಮಶಾಸ್ತ್ರದಲ್ಲಿದೆ. ಆದರೆ ಈ ಎಲ್ಲ ದಾನಗಳಲ್ಲೂ ಬಹಳ ಶೇಷ್ಠವಾದದ್ದು ಅನ್ನದಾನ. ನಮ್ಮ ಸಂಸ್ಕೃತಿಯ ಹಿನ್ನೆಲೆಯಲ್ಲಿ ಇದರ ಮಹತ್ವವೇನೆಂದು ತಿಳಿಯುವುದು ಇಂದಿನ ಕರೊನಾದಂತಹ ಕಲುಷಿತ ವಾತಾವರಣದ ಸ್ಥಿತಿಯಲ್ಲಿ ಪ್ರಾಸಂಗಿಕವೇ ಆಗಿದೆ.
ವ್ಯಾಸವಿರಚಿತ ಶಿವಮಹಾಪುರಾಣದಲ್ಲಿ ಹನ್ನೊಂದನೇ ಅಧ್ಯಾಯದಲ್ಲಿ ಅನ್ನದಾನದ ಮಹತ್ವವನ್ನು ಔಚಿತ್ಯಪೂರ್ಣವಾಗಿ ವಿವರಿಸಿದ್ದಾರೆ. ಅಲ್ಲಿ ಮೊದಲಿಗೆ ಗೋದಾನ, ಭೂದಾನ, ಸುವರ್ಣದಾನ ಹೀಗೆ ಅನೇಕ ದಾನಗಳನ್ನು ತಿಳಿಸಿ ಕೊನೆಯಲ್ಲಿ ‘ಸರ್ವೆಷಾಮೇವ ದಾನಾನಾಂ ಅನ್ನದಾನಂ ಪರಂ ಸ್ಮ ೃತಂ |’ ಎಂದು, ಎಲ್ಲ ದಾನಗಳಲ್ಲೂ ಅನ್ನದಾನವೇ ಶ್ರೇಷ್ಠ ಎಂದು ತಿಳಿಸಿ ಅದಕ್ಕೆ ಕಾರಣಗಳನ್ನೂ ವಿವರಿಸಿದ್ದಾರೆ.
ಉಳಿದ ಎಲ್ಲ ದಾನಗಳಲ್ಲೂ ಮನುಷ್ಯನನ್ನು ತೃಪ್ತಿಪಡಿಸುವುದು ತುಂಬ ಕಷ್ಟ. ಇನ್ನೂ ಸ್ವಲ್ಪ ಕೊಡಬಹುದಿತ್ತು ಎಂಬ ಭಾವನೆ ಬರಬಹುದು. ಅಥವಾ ಇನ್ನೂ ಸ್ವಲ್ಪ ಕೊಟ್ಟರೆ ಬೇಡ ಎಂಬುದಿಲ್ಲ. ಆದರೆ ಅನ್ನದಾನದಲ್ಲಿ ಮಾತ್ರ ಒಂದು ಕ್ಷಣ ಕಾಲ ತೃಪ್ತಿ ಎಂಬುದಿದೆ. ಸಾಕು ಎಂಬ ಶಬ್ದ ಆತ್ಮಸಾಕ್ಷಿಯಾಗಿ ಹೊರಬರುತ್ತದೆ. ಅನ್ನದಿಂದಲೇ ಈ ಪ್ರಪಂಚದ ಜೀವ-ಜಂತುಗಳು ಹುಟ್ಟುತ್ತವೆ. ಅನ್ನವಿಲ್ಲದಿದ್ದರೆ ಸಾಯುತ್ತವೆ. ಹಾಗಾಗಿಯೇ ಭೋಜನಪದ್ಧತಿಯಲ್ಲಿ ಊಟಕ್ಕೆ ಮೊದಲು ‘ಅನ್ನಪೂರ್ಣಾ ಪರಮೇಶ್ವರೀ’ ಎಂದು ಅನ್ನವನ್ನು ದೇವತಾಸ್ವರೂಪವಾಗಿ ಸ್ಮರಿಸಿ, ನಮಸ್ಕರಿಸಿ ಊಟ ಮಾಡುವ ಸಂಪ್ರದಾಯ ಬಂದಿದೆ. ಇಲ್ಲಿ ಅನ್ನ ಶಬ್ದಕ್ಕೆ ಆಹಾರ ಎಂದರ್ಥ.
ತಿನ್ನುವ ಎಲ್ಲ ವಸ್ತುಗಳೂ ‘ಅನ್ನ’ವೇ ಆಗಿದೆ. ಲೋಕರೂಢಿಯಲ್ಲಿ ‘ಅನ್ನ’ ಎಂಬುದು ಆಹಾರವಿಶೇಷ ವಾಚಕ. ಗರ್ಭದಲ್ಲಿರುವ ಶಿಶುಗಳು, ಬಾಲರು, ವೃದ್ಧರು ಎಲ್ಲರೂ ಅನ್ನವನ್ನು ಬಯಸುತ್ತಾರೆ. ಹಸಿವಿಗೆ ಸಮನಾದ ದುಃಖವೇ ಇಲ್ಲ. ಹಸಿವಿಗೆ ಸಮನಾದ ರೋಗವೂ ಇಲ್ಲ. ನಿರೋಗ(ರೋಗ ಇಲ್ಲದಿರುವಿಕೆ)ಕ್ಕೆ ಸರಿಯಾದ ಸುಖವೂ ಇಲ್ಲ. ಅನ್ನವು ಪ್ರಾಣವನ್ನು ಉಳಿಸುವುದರಿಂದ ಅನ್ನದಾನವು ಪ್ರಾಣದಾನಕ್ಕೆ ಸಮಾನ. ಪ್ರಾಣವಿದ್ದರೆ ತಾನೇ ಜೀವನ, ಪುಣ್ಯಕಾರ್ಯದ ಅನುಷ್ಠಾನ. ಹಾಗಾಗಿಯೇ ಅನ್ನದಾನವು ಎಲ್ಲ ದಾನದ ಫಲವನ್ನೂ ಕೊಡುವಂತಹದು ಎಂಬುದಾಗಿ ಸೂಕ್ಷ್ಮವಾಗಿ ತಿಳಿಸಿಕೊಟ್ಟಿದ್ದಾರೆ. ಎಷ್ಟರ ಮಟ್ಟಿಗೆ ಅನ್ನದಾನದ ಬಗ್ಗೆ ತಿಳಿಸಿದ್ದಾರೆಂದರೆ - ಒಬ್ಬ ವ್ಯಕ್ತಿ ಮಾಡಿದ ಅನ್ನದಾನದಿಂದ ಹಸಿವೆ ಇಂಗಿಸಿಕೊಂಡು ಬದುಕಿ ಪುಣ್ಯಕಾರ್ಯವನ್ನು ಮಾಡಿದರೆ ಅದರಲ್ಲಿ ಅರ್ಧ ಪುಣ್ಯ ಮಾಡಿದವನಿಗೆ, ಉಳಿದರ್ಧ ಅನ್ನದಾನಿಗೆ ಎಂಬುದಾಗಿ ಧರ್ಮಸೂಕ್ಷ್ಮವನ್ನು ತಿಳಿಸಿದ್ದಾರೆ. ‘ಯಸ್ಯಾನ್ನಪಾನ ಪುಷ್ಟಾಂಗಃ ಕುರುತೇ ಪುಣ್ಯಸಂಚಯಂ | ಅನ್ನ ಪ್ರದಾತುಃ ತಸ್ಯಾರ್ಧಂ ಕರ್ತಶ್ಚಾರ್ಧಂ ನ ಸಂಶಯಃ ||’ ಇದು ಧರ್ಮಶಾಸ್ತ್ರಸಿದ್ಧ ವಿಷಯ. ಹಾಗಾಗಿ ಭಾರತೀಯ ಪರಂಪರೆಯಲ್ಲಿ ಹಿಂದಿನಿಂದಲೂ ಅನ್ನದಾನದ ಪರಂಪರೆ ಬೆಳೆದುಬಂದಿದೆ.
ಯಾರಿಗೆ ಅನ್ನದಾನ ಮಾಡಬೇಕು ಎಂಬ ವಿಷಯದಲ್ಲೂ - ‘ಅನ್ನಸ್ಯ ಕ್ಷುಧಿತಂ ಪಾತ್ರಂ’ - ಹಸಿದವನೇ ಅನ್ನದಾನಕ್ಕೆ ಪಾತ್ರನು ಎಂದು ಉಪನಿಷತ್ತು ತಿಳಿಸಿದೆ. ಅನ್ನದಾನ ಮಾಡುವಾಗ ಜಾತಿ-ಮತ-ಧರ್ಮ-ಪಂಥ, ವಿದ್ಯೆ, ವಯಸ್ಸು, ಲಿಂಗ, ಸ್ವಕೀಯ, ಪರಕೀಯ, ಬಂಧುತ್ವ ಯಾವುದನ್ನೂ ನೋಡದೆ ಕೇವಲ ಹಸಿದವನು ಎಂದಾದರೆ ಅವನಿಗೆ ದಾನ ಮಾಡಬೇಕು. ಇದು ಶಾಸ್ತ್ರದ ವಿಧಿ. ಹಾಗಾಗಿಯೇ ಕಣ್ಣು ಕೈಕಾಲುಗಳಿಲ್ಲದವರು, ಕೆಲಸ ಮಾಡಲಾಗದವರು, ವೃದ್ಧರು, ಅಸಹಾಯಕರು ಇಂಥವರ ಬಗ್ಗೆ ವಿಶೇಷ ಕಾಳಜಿಯಿಂದ ದಾನ ಮಾಡುವ ರೂಢಿ ಬೆಳೆದುಬಂದಿದೆ. ಇಂದಿನ ಕರೊನಾ ಪೀಡೆಯಂಥ ವಿಷಮ ಪರಿಸ್ಥಿತಿಯಲ್ಲಿ ದೇಶವೇ ಮುಳುಗಿಹೋಗಿರುವಾಗ ಎಷ್ಟೋ ಜನ ಕೂಲಿ ಕಾರ್ವಿುಕರು / ವಲಸಿಗರು / ಆಯಾ ದಿನ ದುಡಿದು ತಮ್ಮ ಹಾಗೂ ಕುಟುಂಬದ ಹೊತ್ತಿನ ಗಂಜಿಯನ್ನು ಕುಡಿಯುವವರು / ಅಸಹಾಯಕರು ಇಂಥ ಲಕ್ಷಲಕ್ಷ ಸಂಖ್ಯೆಯ ಜೀವಾತ್ಮರಿಗೆ ಸರ್ಕಾರ ಪ್ರಾಮಾಣಿಕವಾಗಿ ಅನ್ನ ನೀಡಿ ಜೀವ ಉಳಿಸಿದೆ. ಇದು ದೇಶವನ್ನು ನಡೆಸುವ ವಿವೇಕಿಯಾದ ಪ್ರಧಾನಿ / ಮುಖ್ಯಮಂತ್ರಿಗಳ ಜವಾಬ್ದಾರಿಯುತ ವ್ಯಕ್ತಿತ್ವಕ್ಕೆ ಕನ್ನಡಿ. ಇದಕ್ಕೆ ನಾಡಿನ ಸಹಸ್ರಾರು ಉದಾರಿಗಳು, ಆಸ್ತಿಕರು, ಧರ್ಮಬುದ್ಧಿಯವರು, ಮಾನವೀಯ ಮೌಲ್ಯಗಳನ್ನು ತಿಳಿದ ದೇಶಾಭಿಮಾನಿಗಳೂ ಆದ ಉಳ್ಳವರು ತಮ್ಮ ಶಕ್ತಿ ಮೀರಿ ಈ ಅನ್ನದಾನ / ದಾಸೋಹ ಕೈಂಕರ್ಯದಲ್ಲಿ ಸಹಕರಿಸಿದ್ದಾರೆ. ಎಷ್ಟೆಷ್ಟೋ ಧರ್ಮಪೀಠಗಳು, ಸಂಘ-ಸಂಸ್ಥೆಗಳು ಸ್ವಸಹಾಯ ಸಂಘಗಳು ಹೀಗೆ ಸಹಸ್ರಾರು ಸಂಘಟನೆಗಳೂ ತಮ್ಮನ್ನು ಸಾಕ್ಷಾತ್ತಾಗಿ ಅಥವಾ ಬೇರೆ ಬೇರೆ ರೀತಿಯಲ್ಲಿ ತೊಡಗಿಸಿಕೊಂಡಿವೆ.
ಅನ್ನದಾನವೆಂದರೆ ಸಾಕ್ಷಾತ್ತಾಗಿ ಹಣ, ದವಸಧಾನ್ಯ ಕೊಡುವುದು ಮಾತ್ರವಲ್ಲ. ಅನ್ನ ಸಿದ್ಧಪಡಿಸುವುದು / ವಿತರಿಸುವುದು, ಇವುಗಳಿಗೆ ಸಹಾಯ ಸಲ್ಲಿಸುವುದು - ಹೀಗೆ ಯಾವುದಾದರೂ ಒಂದು ಬಗೆಯಲ್ಲಿ ಈ ಅನ್ನದಾನ ಯಜ್ಞದಲ್ಲಿ ಪ್ರಾಮಾಣಿಕವಾಗಿ ಸಹಕರಿಸುವುದೂ ಅನ್ನದಾನವೇ. ಅವರವರ ಸೇವೆಗನುಗುಣವಾಗಿ ಅವರೆಲ್ಲ ಅದರ ಫಲವನ್ನು (ಪುಣ್ಯ) ಹೊಂದುತ್ತಾರೆ. ವ್ಯಾಸ-ವಾಲ್ಮೀಕಿ ಮೊದಲಾದ ಮಹರ್ಷಿಗಳು ದಾರ್ಶನಿಕರಾದ ಆಚಾರ್ಯರು, ತತ್ತ ್ವ್ಞಾನಿಗಳು, ದಾಸಶ್ರೇಷ್ಠರು ಉಪದೇಶಿಸಿ / ಬೋಧಿಸಿ ಹಾಡಿ ಹೊಗಳಿದ ಈ ಅನ್ನದಾನವನ್ನು ನಡೆಸುವುದು ಉಳ್ಳವರಿಗೆ ಸದವಕಾಶ ಹಾಗೂ ಕರ್ತವ್ಯ. ಅದು ಇಂದಿನ ಸ್ಥಿತಿಯಲ್ಲಿ ಅನಿವಾರ್ಯವೂ ಹೌದು. ಪ್ರತಿಫಲಾಪೇಕ್ಷೆ ಇಲ್ಲದೆ ಅನ್ನದಾನ ಮಾಡಿದರೂ, ಅದರ ಪುಣ್ಯದ ಫಲ ಅವರಿಗೆ ನಿಶ್ಚಿತವಾಗಿ ಸಲ್ಲುತ್ತದೆ ಎಂಬುದು ಭಾರತೀಯ ದರ್ಶನ ಶಾಸ್ತ್ರಗಳ ನಿಲುವು.