

ಪರಬ್ರಹ್ಮ ಸ್ವರೂಪವು ಮನುಷ್ಯ ರೂಪದ ಜೀವಚೈತನ್ಯವಾಗಿ ಲೋಕದಲ್ಲಿ ವಿಹರಿಸುತ್ತಿದೆ. ಈ ಜೀವವು ತನ್ನ ನಿಜ ಸ್ವರೂಪವನ್ನು, ನಿಜ ಐಕ್ಯವನ್ನೂ ಮರೆತಾಗ ಅವನನ್ನು ಎಚ್ಚರಿಸುವ ಕೆಲಸವನ್ನು ಮಾಯೆಯು ಮಾಡುತ್ತಾಳೆ. ಜೀವ ಚೈತನ್ಯವು ತನ್ನ ಪೂರ್ಣತೆಯನ್ನು ಮರಳಿ ಅರಸಲಿ ಎಂದು ಎಚ್ಚರಿಸುವುದಕ್ಕಾಗಿ ಹೆಣ್ಣುಗಂಡಿನ ನಡುವೆ ಮೋಹಪಾಶವನ್ನು ಮಾಯೆಯು ಬಿಗಿಯುತ್ತಾಳೆ. ಅದು ಅಂಕುಶದಂತೆ ಜೀವನನ್ನು ಎಚ್ಚರಿಸುತ್ತದೆ ಎನ್ನುತ್ತಾರೆ ಡಿವಿಜಿ.
ಪರಬ್ರಹ್ಮ ವಸ್ತುವು ಅನೇಕವಾಗುತ್ತೇನೆ, ಬಹುವಾಗಿ ನಾನಾ ವಿಧದಲ್ಲಿ ಕಾಣಿಸಿಕೊಳ್ಳುತ್ತೇನೆ ಎಂದು ಸಂಕಲ್ಪಿಸಿದುದರಿಂದಲೇ ಈ ಪ್ರಪಂಚವಾಗಿದೆ. ಹಾಗಾಗಿಯೇ ಸೃಷ್ಟಿಯಲ್ಲಿ ವೈವಿಧ್ಯ ಇದೆ. ಒಂದರಂತೆ ಇನ್ನೊಂದಿಲ್ಲದ ಅಸಮತೆ, ಸ್ವಂತಿಕೆ, ವೈವಿಧ್ಯಗಳು ಪ್ರಕೃತಿಯನ್ನು ಸದಾ ನಿತ್ಯನೂತನವಾಗಿ ಕಂಗೊಳಿಸುವಂತೆ ಮಾಡುತ್ತದೆ.
ಸೃಷ್ಟಿಯಲ್ಲಿ ಪ್ರತಿಯೊಂದು ಕೂಡ ಒಂದು ಇನ್ನೊಂದಕ್ಕಿಂತ ವಿಭಿನ್ನ. ಕ್ರಿಮಿಕೀಟಗಳಿಂದ ತೊಡಗಿ ಪ್ರಾಣಿ-ಪಕ್ಷಿಗಳವರೆಗೂ ಬಹಿರಾಕಾರ
ದಲ್ಲಿ ಹೆಚ್ಚುಕಮ್ಮಿ ಒಂದೇ ರೀತಿ ಕಂಡರೂ ಗುಣ-ಸ್ವಭಾವದಲ್ಲಿ ವ್ಯತ್ಯಾಸವಿ
ರುತ್ತದೆ. ಆದರೆ ಅವುಗಳೆಂದಿಗೂ ಪ್ರಕೃತಿ ವಿಧಿಸಿದ ಜೀವನ ಕ್ರಮವನ್ನು ಮೀರಿ ಹೋಗಲಾರವು. ಆದರೆ ಹೆಚ್ಚು ವಿಕಸನಕ್ಕೆ ಒಳಗಾಗಿರುವ ಮನುಷ್ಯನಲ್ಲಿ ದೈಹಿಕ ಭೇದವೂ ಇದೆ, ಸ್ವಭಾವದಲ್ಲೂ ವ್ಯತ್ಯಾಸಗಳಿವೆ.
ಏರುಪೇರಾಗುವ ಸತ್ತ್ವ, ರಜೋ, ತಮೋಗುಣಗಳು, ಕಾಡುವ ಕಾಮ, ಕ್ರೋಧವೇ ಮೊದಲಾದ ಆರು ಬಗೆಯ ಹಗೆಗಳು ಜೊತೆಗೆ ಇಂದ್ರಿಯ ಚಪಲ, ತೀರದ ಕಾಮನೆಗಳು ಮನುಷ್ಯನನ್ನು ಆಳುತ್ತವೆ. ಇವೆಲ್ಲವನ್ನೂ ನಿಯಂತ್ರಿಸಿಕೊಂಡು ಬಾಳುವುದಕ್ಕಾಗಿ ಮನುಷ್ಯನು ವಿವೇಕ ಸ್ವಾತಂತ್ರ್ಯವನ್ನು ಪಡೆದಿದ್ದರೂ ಅದನ್ನಾತನು ಬಳಸುವುದು ಕಡಿಮೆ. ಇದರಿಂದಾಗಿ ತನ್ನ ಸುತ್ತಲಿರುವ ಪ್ರಪಂಚದೆಡೆಗೆ ವ್ಯಕ್ತಿಯು ಬಹಳ ಬೇಗ ಆಕರ್ಷಿತನಾಗುತ್ತಾನೆ. ಹೀಗೆ ವ್ಯಕ್ತಿಯನ್ನು ಆಕರ್ಷಿಸುವ ವಿಚಾರಗಳಲ್ಲಿ ಗಂಡು-ಹೆಣ್ಣಿನ ನಡುವಿನ ಸೆಳೆತವು ತೀವ್ರತರವಾದುದಾಗಿದೆ. ಇಬ್ಬರಲ್ಲೂ ಇರುವುದು ಪರಬ್ರಹ್ಮದ ಚೈತನ್ಯಾಂಶವೇ ಆಗಿದ್ದರೂ ದೇಹ ಪ್ರಜ್ಞೆಯಿಂದ ವ್ಯವಹರಿಸುವ ಜೀವಚೈತನ್ಯಕ್ಕೆ ಅದು ಗೋಚರಿಸುವುದಿಲ್ಲ. ಸಹಜ ಅನುರಕ್ತಿಗೆ ಒಳಗಾದಾಗ ಮನಸ್ಸು ಹದವಾಗುತ್ತದೆ. ಪ್ರೇಮವು ಮನದ ಕಾಠಿಣ್ಯವನ್ನು ನೀಗಿಸಿ ಮೃದುಗೊಳಿಸುತ್ತದೆ. ಈ ಪ್ರೇಮವು ನಿರ್ಮಲವಾಗಿದ್ದರೆ ದೈವಿಕವಾಗುವುದುಂಟು. ತನ್ಮೂಲಕ ಜೀವೋತ್ಕರ್ಷಕ್ಕೆ ಪರಸ್ಪರ ಪ್ರೇರಕರಾಗುವುದಕ್ಕೂ ಸಾಧ್ಯವಿದೆ. ಆದರೆ ಎಲ್ಲರೂ ಈ ಎತ್ತರಕ್ಕೆ ಏರಲು ಸಾಧ್ಯವಿಲ್ಲ. ಭಾವ ಪ್ರಚೋದನೆಗೆ ಒಳಗಾಗುವ ಮನಸ್ಸು ಮತ್ತೆಮತ್ತೆ ದೇಹ, ಮನಸ್ಸುಗಳನ್ನು ತೃಪ್ತಿ ಪಡಿಸಲೆಂದು ಒದ್ದಾಡುತ್ತದೆ. ಇದುವೆ ಕುಟುಂಬ, ಸಂಸಾರ, ಸಮಾಜವೆಂದು ವಿಸ್ತರಿಸಿಕೊಂಡು ವ್ಯಕ್ತಿ ಪ್ರಜ್ಞೆಯೊಳಗೆ ಸುಖ-ಭೋಗಕ್ಕಾಗಿ ಹಪಹಪಿಸುತ್ತದೆ. ಆಸೆಗಳನ್ನು ಬೆನ್ನಟ್ಟುತ್ತಾ ಲೌಕಿಕ ಬದುಕಿನ ಥಳುಕಿನಲ್ಲಿ ಮುಳುಗಿಬಿಡುತ್ತದೆ. ಇದರಿಂದಾಗಿ ಜೀವಚೈತನ್ಯವು ತನ್ನ ನಿಜ ಸ್ವರೂಪವನ್ನು ಮರೆತುಬಿಡುತ್ತದೆ.
ಆಗ ಮಾಯೆಯು ಎಚ್ಚರಿಸುತ್ತಾಳೆ. ಅಸಹನೀಯ ನೋವು, ನಂಬಿಕೆ ದ್ರೋಹ, ಪ್ರೀತಿಯ ಹಿಂದಿನ ಸ್ವಾರ್ಥ, ನಯ ವಂಚಕ ಬುದ್ಧಿ, ಆಕಸ್ಮಿಕ ಅಗಲುವಿಕೆ, ಸಾವು-ನೋವು ಹೀಗೆ ಹಲವು ಪ್ರತಿಕೂಲ ಸಂದರ್ಭಗಳನ್ನು ಎದುರಿಗಿಟ್ಟು, ಬಾಂಧವ್ಯಗಳ ನಡುವೆ ಬಿಕ್ಕಟ್ಟನ್ನು ನಿರ್ವಿುಸಿ ಬದುಕೆಂದರೆ ಭ್ರಮೆ ಎನ್ನುವುದನ್ನು ಮನದಟ್ಟು ಮಾಡುತ್ತಾಳೆ. ವಿವಿಧ ಆಕರ್ಷಣೆಗಳನ್ನು ಒಡ್ಡಿ ಮೋಹಮಾಯೆಗೆ ಒಳಗಾಗಿಸುವ ಮಾಯೆಯೆ ಜೀವನಾನುಭವದಿಂದ ಪಾಠ ಕಲಿಯುವಂತೆ ಮಾಡುತ್ತಾಳೆ. ಭ್ರಮನಿರಸನವನ್ನು ಮಾಡಿ ಆತ್ಮಶೋಧನೆಗೆ ಹಚ್ಚುತ್ತಾಳೆ. ಮದವೇರಿದ ಆನೆಯು ತಾನು ನಡೆದದ್ದೇ ದಾರಿ ಎಂಬಂತೆ ದಾಂಧಲೆ ಎಬ್ಬಿಸತೊಡಗಿದಾಗ ಮಾವುತನು ಅಂಕುಶದಿಂದ ನಿಯಂತ್ರಿಸು
ತ್ತಾನೆ. ಅಂತೆಯೇ ಕೆರಳಿದ ಮದ್ದಾನೆಯಂತೆ ವರ್ತಿಸುವ ಜೀವಾತ್ಮನು ಲೌಕಿಕದ ಕಾಡಿನಲ್ಲಿ ಅಲೆದಾಡುವಾಗ ಮಾಯೆಯು ಜೀವಶೋಧಕವಾ ಗುವ ಕಷ್ಟ-ನಷ್ಟಗಳನ್ನು ತಂದಿಟ್ಟು, ಮನಸ್ಸನ್ನು ಮಥಿಸುವಂಥ ಸಂದರ್ಭಗಳನ್ನು ಮುಂದಿಟ್ಟು ಜೀವನನ್ನು ನಿಯಂತ್ರಿಸುತ್ತಾಳೆ. ಸೋತಾಗ, ನೋವುಂಡಾಗ ವ್ಯಕ್ತಿಯು ಆತ್ಮವಿಶ್ಲೇಷಣೆಗೆ ತೊಡಗುತ್ತಾನೆ. ತನ್ನ ಸುತ್ತ ನೆರದಿರುವ ಸಂಬಂಧಗಳು ಸುಳ್ಳು, ಸಂದರ್ಭಗಳು ಕ್ಷಣಿಕವೆನ್ನುವುದು ಅರ್ಥವಾದಾಗ, ಭೋಗ ಜೀವಿತಕ್ಕಾಗಿ ಹಂಬಲಿಸುತ್ತಿದ್ದ ಮನಸ್ಸು ತ್ಯಾಗದತ್ತ ಹೊರಳುತ್ತದೆ. ರಕ್ತಿಯು ಭಕ್ತಿಯಾಗಿ ನಿಜಸ್ವರೂಪವನ್ನು ಹೊಂದುವುದಕ್ಕೆ ಸಿದ್ಧವಾಗುತ್ತದೆ.
ಹೀಗೆ ಪರಬ್ರಹ್ಮವು ಜೀವಚೈತನ್ಯವಾಗಿ ಲೋಕದ ಬೆಡಗಿನಲ್ಲಿ ಕಳೆದುಹೋದಂತೆ ಇದ್ದಾಗ ಮಾಯೆಯು ಎಚ್ಚರಿಸಿ, ಪೂರ್ಣತೆಯನ್ನು ಸೇರುವುದಕ್ಕೆ ಪಾಶಗಳನ್ನು ಸ್ವಯಂ ನಿಗ್ರಹಿಸಿಕೊಂಡು ಮುಕ್ತನಾಗಲು ಪ್ರೇರಣೆಯನ್ನು ನೀಡುತ್ತಾಳೆ. ಜೀವನಾನುಭವಗಳಿಂದ ಅರಿವನ್ನು ಪಡೆಯುವ ಜೀವಾತ್ಮನು ತನ್ನ ನಿಜ ನೆಲೆಯನ್ನು ಅರಸಿ ಆತ್ಮೋನ್ನತಿಯ ದಾರಿಯಲ್ಲಿ ಮುನ್ನಡೆಯುತ್ತಾನೆ.