ಭಾರತ ಮೂಲದ ಅನಿತಾ ಕೆನಡಾ ಸಚಿವೆ

3-6824d4de29649 (1)
Published on

ಒಟ್ಟಾವಾ: ಭಾರತ ಮೂಲದ ರಾಜಕಾರಣಿ ಅನಿತಾ ಆನಂದ್, ಕೆನಡಾದ ನೂತನ ವಿದೇಶಾಂಗ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಪ್ರಧಾನಿ ಮಾರ್ಕ್ ಕಾರ್ನಿಯವರ ಸಚಿವ ಸಂಪುಟದ ಪುನಾರಚನೆ ವೇಳೆ ಅನಿತಾ ಅವರಿಗೆ ಮಹತ್ವದ ಖಾತೆಯ ಹೊಣೆಗಾರಿಕೆ ಸಿಕ್ಕಿದೆ. ಇದಕ್ಕೂ ಮುನ್ನ ಅವರು ಕೆನಡಾದ ರಕ್ಷಣೆ ಹಾಗೂ ಇತರ ಖಾತೆಗಳ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಆಳುವ ಲಿಬರಲ್ ಪಕ್ಷದ ಹಿರಿಯ ಸದಸ್ಯರಲ್ಲಿ ಒಬ್ಬರಾಗಿರುವ 58 ವರ್ಷದ ಅನಿತಾ, ಭಗವದ್ಗೀತೆ ಮೇಲೆ ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸಿದರು. ಹಿಂದೆ ಸಚಿವರಾದಾಗಲೂ ಅವರು ಹೀಗೇ ಮಾಡಿದ್ದರು. ಕಾರ್ನಿ ನೇತೃತ್ವದ 28 ಸದಸ್ಯರ ಸಂಪುಟದಲ್ಲಿ ಅರ್ಧದಷ್ಟು ಮಹಿಳೆಯರಿರುವುದು ಗಮನಾರ್ಹವಾಗಿದೆ.

ಭಾರತೀಯ ಮೂಲ: ಭಾರತದಿಂದ ವಲಸೆ ಬಂದಿದ್ದ ಸರೋಜ ಡಿ. ರಾಮ್ ಮತ್ತು ಎಸ್.ವಿ. ಆನಂದ್ ವೈದ್ಯ ದಂಪತಿಯ ಪುತ್ರಿಯಾಗಿ ಅನಿತಾ 1967 ಮೇ 20ರಂದು ನೊವಾ ಸ್ಕೋಟಿಯಾದ ಕೆಂಟ್​ವಿಲ್ಲೆಯಲ್ಲಿ ಜನಿಸಿದ್ದರು. ಅವರ ಹೆತ್ತವರು 1960ರ ದಶಕದಲ್ಲಿ ಭಾರತದಿಂದ ಕೆನಡಾಕ್ಕೆ ವಲಸೆ ಬಂದಿದ್ದರು. ತಾಯಿ ಪಂಜಾಬಿ ಹಾಗೂ ತಂದೆ ತಮಿಳುನಾಡಿನವರು. ಅನಿತಾಗೆ ಗೀತಾ ಮತ್ತು ಸೋನಿಯಾ ಎಂಬಿಬ್ಬರು ಸಹೋದರಿಯರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net