

ನವದೆಹಲಿ: ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ಮಾಜಿ ಮಹಾ ನಿರ್ದೇಶಕ ಅನೀಷ್ ದಯಾಳ್ ಸಿಂಗ್ರನ್ನು ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್ಎ) ಆಗಿ ಕೇಂದ್ರ ಸರ್ಕಾರ ಭಾನುವಾರ ನೇಮಿಸಿದೆ. 60 ವರ್ಷದ ಸಿಂಗ್, ಎನ್ಎಸ್ಎ ಅಜಿತ್ ದೋವಲ್ರ ನೇರ ಸುಪರ್ದಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ದೋವಲ್ರ ಪ್ರಮುಖ ತಂಡವನ್ನು ಬಲಪಡಿಸುವಲ್ಲಿ ಈ ನೇಮಕ ಮಹತ್ವದ ಬೆಳವಣಿಗೆ ಎಂದು ವಿಶ್ಲೇಷಿಸಲಾಗಿದೆ. ಹೆಚ್ಚುವರಿ ಎನ್ಎಸ್ಎ ಆಗಿ ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗದ (ಆರ್ಎಡಬ್ಲ್ಯು) ಮಾಜಿ ಮುಖ್ಯಸ್ಥ ರಾಜಿಂದರ್ ಖನ್ನಾ ಮತ್ತು ಡೆಪ್ಯುಟಿ ಎನ್ಎಸ್ಎಗಳಾಗಿ ಟಿ.ವಿ. ರಾಮಚಂದ್ರನ್ ಹಾಗೂ ಪವನ್ ಕಪೂರ್ರ ಸೇರ್ಪಡೆ ಸಹಿತ ರಾಷ್ಟ್ರೀಯ ಭದ್ರತಾ ಮಂಡಳಿ ಕಾರ್ಯಾಲಯಕ್ಕೆ ಹಿರಿಯ ಅಧಿಕಾರಿಗಳನ್ನು ನೇಮಿಸಿದ ಬೆನ್ನಲ್ಲೇ ಈ ನೇಮಕವಾಗಿದೆ.
ಅನುಭವಿ ಅಧಿಕಾರಿ: 1988ರ ಐಪಿಎಸ್ ಬ್ಯಾಚ್ನ ಮಣಿಪುರ ಕೇಡರ್ನ ಸಿಂಗ್, 2024ರ ಜನವರಿ 1ರಿಂದ ಡಿಸೆಂಬರ್ 31ರ ವರೆಗೆ ಭರ್ತಿ ಒಂದು ವರ್ಷ ಕಾಲ ಸಿಆರ್ಪಿಎಫ್ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದರು. ಬೇಹುಗಾರಿಕೆ ದಳ (ಐಬಿ) ಮತ್ತು ಭಾರತ ಟಿಬೆಟ್ ಗಡಿ ಪೊಲೀಸ್ (ಐಟಿಬಿಪಿ) ಪಡೆಯಲ್ಲೂ ಸಿಂಗ್ ಕಾರ್ಯನಿರ್ವಹಿಸಿದ ಅನುಭವಿಯಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರ, ಎಡಪಂಥೀಯ ಉಗ್ರಗಾಮಿತ್ವ ಮತ್ತು ಈಶಾನ್ಯ ಭಾರತದ ಬಂಡುಕೋರರ ಸಹಿತ ಆಂತರಿಕ ಭದ್ರತಾ ವ್ಯವಹಾರಗಳ ವಿಚಾರಗಳನ್ನು ನೂತನ ಡೆಪ್ಯುಟಿ ಎನ್ಎಸ್ಎ ನೋಡಿಕೊಳ್ಳಲಿದ್ದಾರೆ.