ಒಮಿಕ್ರಾನ್ ಸೋಂಕಿಗೆ ಪ್ರಾಣಿಗಳು ಕಾರಣ?

Omricon
Published on

ವಾಷಿಂಗ್ಟನ್: ಕರೊನಾ ವೈರಸ್​ನ ಒಮಿಕ್ರಾನ್ ರೂಪಾಂತರಿ ಪ್ರಾಣಿಗಳಿಂದ ಮಾನವನಿಗೆ ಹರಡಿರುವ ಸಾಧ್ಯತೆ ಹೆಚ್ಚಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. ಅಮೆರಿಕದ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್ ಎಂಬ ಜರ್ನಲ್​ನಲ್ಲಿ ಪ್ರಕಟವಾದ ವರದಿ ಈ ವಿಚಾರ ಕುರಿತು ಬೆಳಕು ಚೆಲ್ಲಿದೆ. ಪ್ರೋಟೀನ್ ಅಂಶ ಹೆಚ್ಚಳದಿಂದ ಕರೊನಾ ವೈರಸ್ ವೇಗವಾಗಿ ಹರಡುತ್ತದೆ. ಇದರಿಂದ ಜೀವಕೋಶಗಳನ್ನು ತ್ವರಿತಗತಿಯಲ್ಲಿ ವೈರಸ್ ವ್ಯಾಪಿಸಿಕೊಳ್ಳುತ್ತದೆ. ಹೀಗಾಗಿ ಇನ್ನೊಬ್ಬ ವ್ಯಕ್ತಿಯು ಸುಲಭ ವಾಗಿ ವೈರಸ್​ಗೆ

ತುತ್ತಾಗುತ್ತಾನೆ. ಒಬ್ಬ ವ್ಯಕ್ತಿಯ ಮೇಲೆ ಹಲವು ಬಾರಿ ಕರೊನಾ ವೈರಸ್ ಸೋಂಕು ತಗಲುವಂತೆ ಮಾಡಿ, ಆಗ ಉಂಟಾದ ಬದಲಾವಣೆ ಹಾಗೂ ಪ್ರಕ್ರಿಯೆ ಕುರಿತು ತಜ್ಞರ ತಂಡ ಅಧ್ಯಯನ ನಡೆಸಿದೆ. ಒಮಿಕ್ರಾನ್​ನ ವಿವಿಧ ರೂಪಾಂತರಿಗಳನ್ನು ಇಲಿಗಳ ಮೇಲೆ ಪ್ರಯೋಗ ಮಾಡಲಾಗಿದೆ. ಇದಕ್ಕೂ ಮಾನವನಲ್ಲಿನ ರೂಪಾಂತರಿಗೂ ಹೋಲಿಕೆ ಹಾಗೂ ಪ್ರಸರಣ ಸಾಧ್ಯತೆ ಕುರಿತು ಹೆಚ್ಚಿನ ಅಧ್ಯಯನ ನಡೆಸಲಾಗಿದೆ. ಈ ವೇಳೆ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ. ಒಮಿಕ್ರಾನ್ ಮೊದಲ ಬಾರಿಗೆ ಮಾನವನಲ್ಲಿ ಉತ್ಪನ್ನ ಆಗಿಲ್ಲ. ಯಾವುದೋ ಪ್ರಾಣಿಯ ಮೂಲಕ ಮಾನವನಿಗೆ ಹರಡಿರುವ ಸಾಧ್ಯತೆ ಹೆಚ್ಚಿದೆ ಎಂದು ತಜ್ಞರ ತಂಡ ಹೇಳಿದೆ.

ಮಾಸ್ಕ್ ಕಡ್ಡಾಯ ನಿಯಮ ರದ್ದು

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ಮಾಸ್ಕ್ ಧರಿಸದ ವ್ಯಕ್ತಿಗಳಿಗೆ 500 ರೂ. ದಂಡ ವಿಧಿಸುವ ನಿಯಮವನ್ನು ಸರ್ಕಾರ ವಾಪಸ್ ಪಡೆದಿದೆ. ಕರೊನಾ ಸೋಂಕಿನ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿರುವುದು, ಬಹುತೇಕ ಜನರು ಎರಡು ಡೋಸ್ ಲಸಿಕೆಯನ್ನು ಪಡೆದಿರುವ ಕಾರಣ ತಜ್ಞರ ಸಮಿತಿ ಶಿಫಾರಸಿನಂತೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ದೀಪಾವಳಿ ಹಿನ್ನೆಲೆಯಲ್ಲಿ ಜನರು ಗುಂಪುಗೂಡುವ ಸಾಧ್ಯತೆ ಇರುವ ಕಾರಣ ಸೋಂಕು ಮತ್ತೆ ಹರಡುವ ಸಾಧ್ಯತೆ ಇದೆ. ಇನ್ನು ಎರಡು ತಿಂಗಳ ಬಳಿಕ ನಿಯಮ ಸಡಿಲ ಮಾಡುವುದು ಸೂಕ್ತ ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ.

ಗರ್ಭಿಣಿಯರ ಸಾವು ಏರಿಕೆ

ಕರೊನಾ ಬಳಿಕ ಅಮೆರಿಕದಲ್ಲಿ ಗರ್ಭಿಣಿಯರ ಸಾವಿನ ಪ್ರಮಾಣದಲ್ಲಿ ಶೇ. 80 ಏರಿಕೆ ಕಂಡುಬಂದಿದೆ ಎಂದು ಅಲ್ಲಿನ ಸರ್ಕಾರಿ ವರದಿಯೊಂದು ಹೇಳಿದೆ. ಮಹಿಳೆಯರು ಖಿನ್ನತೆಗೆ ಒಳಗಾಗುವುದು, ಕಡಿಮೆ ತೂಕದ ಮಕ್ಕಳ ಜನನ, ಹೆರಿಗೆ ಸಂದರ್ಭದಲ್ಲಿ ತೊಂದರೆ ಕಂಡುಬಂದ ಪ್ರಕರಣಗಳಲ್ಲೂ ಗಮನಾರ್ಹ ಏರಿಕೆ ಕಂಡುಬಂದಿದೆ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಗರ್ಭಿಣಿಯಾದ ವೇಳೆ ಕರೊನಾ ವೈರಸ್​ಗೆ ತುತ್ತಾಗಿರುವುದು, ದೇಶಾದ್ಯಂತ ವಿಧಿಸಲಾಗಿರುವ ಲಾಕ್​ಡೌನ್, ಖಿನ್ನತೆ ಇನ್ನಿತರ ಕಾರಣಗಳಿಂದ ಸಾವಿನ ಪ್ರಮಾಣ ಏರಿಕೆ ಆಗಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಕಳೆದ ವರ್ಷ ಜುಲೈನಿಂದ ಡಿಸೆಂಬರ್ ವರೆಗೆ ಡೆಲ್ಟಾ ರೂಪಾಂತರಿ ತೀವ್ರ ಪ್ರಮಾಣದಲ್ಲಿ ಪ್ರಸರಣವಾದ ಸಮಯದಲ್ಲಿ ಸಾವಿನ ಸಂಖ್ಯೆ ಅತ್ಯಧಿಕ ಪ್ರಮಾಣದಲ್ಲಿ ದಾಖಲಾಗಿದೆ. ಪ್ರತಿ 10 ಲಕ್ಷ ಕಪು್ಪ ಮಹಿಳೆಯರಲ್ಲಿ ಸುಮಾರು 44 ಮಂದಿಗೆ ಹೆರಿಗೆ ಸಂದರ್ಭದಲ್ಲಿ ಸಮಸ್ಯೆ ಉಂಟಾಗುತ್ತದೆ. ಆದರೆ ಕರೊನಾ ಪರಿಣಾಮ ಇದು 68.9ಕ್ಕೆ ಏರಿಕೆ ಕಂಡಿದೆ. ಶ್ವೇತ ವರ್ಣೀಯರಲ್ಲಿ ಇದು 17.9ರಿಂದ 26ಕ್ಕೆ ಏರಿಕೆ ಕಂಡಿದೆ ಎಂದು ವರದಿ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net