

ನವದೆಹಲಿ: ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಆಗಸ್ಟ್ 1ರೊಳಗೆ ತೆರವುಗೊಳಿಸಲಿರುವ ಪ್ರತಿಷ್ಠಿತ ಲೋಧಿ ಎಸ್ಟೇಟ್ನ ಸರ್ಕಾರಿ ಬಂಗಲೆಯನ್ನು ಪಡೆದುಕೊಳ್ಳಲಿರುವ ಅದೃಷ್ಟವಂತರು ಯಾರು ಎಂಬ ಪ್ರಶ್ನೆಗೆ ಉತ್ತರ ದೊರೆತಿದೆ. ಬಿಜೆಪಿಯ ಸಂಸತ್ ಸದಸ್ಯ ಅನಿಲ್ ಬಲೂನಿ ಅವರಿಗೆ ಈ ಬಂಗಲೆಯನ್ನು ಕೊಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಅನಿಲ್ ಬಲೂನಿ ಬಿಜೆಪಿಯ ವಕ್ತಾರರಾಗಿದ್ದಾರೆ. ಎಸ್ಪಿಜಿ ಭದ್ರತೆ ಹೊಂದಿರುವ ಮುಖಂಡರಿಗೆ ಮಾತ್ರವೇ ಕೊಡಲಾಗುವ 6B ದರ್ಜೆಯ ಈ ಬಂಗಲೆಯನ್ನು ಇವರಿಗೆ ಕೊಟ್ಟು ಕೇಂದ್ರ ವಸತಿ ಮತ್ತು ನಗರಾಡಳಿತ ಸಚಿವಾಲಯ ಆದೇಶ ಹೊರಡಿಸಿದೆ.
ಯಾವುದಾದರೂ ಬಂಗಲೆಯನ್ನು ತೆರವುಗೊಳಿಸುವಂತೆ ಯಾರಿಗಾದರೂ ನೋಟಿಸ್ ಜಾರಿ ಮಾಡಿದ ಎರಡು ತಿಂಗಳೊಳಗಾಗಿ ಆ ಬಂಗಲೆಯನ್ನು ಬೇರೆಯವರಿಗೆ ಹಂಚಿಕೆ ಮಾಡಬಹುದಾಗಿದೆ. ಆ ಬಂಗಲೆ ಹಂಚಿಕೆ ಮಾಡಿ ಆದೇಶ ಹೊರಡಿಸಿದ ದಿನದಿಂದಲೇ ಆ ಮುಖಂಡರು ಬಾಡಿಗೆ ಪಾವತಿಸಬೇಕಾಗುತ್ತದೆ. ಅಲ್ಲದೆ, ಆದೇಶ ಹೊರಟ ಎರಡು ತಿಂಗಳೊಳಗಾಗಿ ಆ ಬಂಗಲೆಗೆ ಸ್ಥಳಾಂತರಗೊಳ್ಳಬಹುದಾಗಿದೆ. ಏನಾದರೂ ದುರಸ್ತಿ ಕಾರ್ಯ ಇದ್ದಲ್ಲಿ ಅದನ್ನು ಕೇಂದ್ರೀಯ ಲೋಕೋಪಯೋಗಿ ಇಲಾಖೆ ವತಿಯಿಂದ ದುರಸ್ತಿ ಮಾಡಿಸಲಾಗುವುದು ಎಂದು ವಸತಿ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಎಸ್ಪಿಜಿ ಭದ್ರತೆ ಹೊಂದಿದ್ದ ಹಿನ್ನೆಲೆಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು 35, ಲೋಧಿ ಎಸ್ಟೇಟ್ ಸರ್ಕಾರಿ ಬಂಗಲೆಯಲ್ಲಿ ಪತಿ ಹಾಗೂ ಇಬ್ಬರು ಮಕ್ಕಳೊಂದಿಗೆ ಅನೇಕ ವರ್ಷಗಳಿಂದ ವಾಸವಾಗಿದ್ದರು. ಆದರೆ, ಕೇಂದ್ರ ಸರ್ಕಾರ ಇತ್ತೀಚೆಗೆ ಅವರಿಗೆ ನೀಡಿದ್ದ ಎಸ್ಪಿಜಿ ಭದ್ರತೆಯನ್ನು ಹಿಂಪಡೆದು, ಸಿಆರ್ಪಿಎಫ್ ಯೋಧರ Z+ ಭದ್ರತೆಗೆ ಇಳಿಸಿತ್ತು. ಈ ಹಿನ್ನೆಲೆಯಲ್ಲಿ ಈ ಬಂಗಲೆಯನ್ನು ತೆರವುಗೊಳಿಸುವಂತೆ ಕೇಂದ್ರ ವಸತಿ ಮತ್ತು ನಗರಾಡಳಿತ ಸಚಿವಾಲಯ ಪ್ರಿಯಾಂಕಾ ಅವರಿಗೆ ನೋಟಿಸ್ ಜಾರಿ ಮಾಡಿತ್ತು.