ಷೇರುಪೇಟೆಯಿಂದ ಅನಿಲ್ ಅಂಬಾನಿಗೆ 5 ವರ್ಷ ನಿಷೇಧ

Anil Ambani
Published on

ಮುಂಬೈ: ಉದ್ಯಮಿ ಅನಿಲ್ ಅಂಬಾನಿ ಒಡೆತನದ ‘ರಿಲಯನ್ಸ್ ಹೋಮ್ ಫೈನಾನ್ಸ್’ನಿಂದ ಹಣವನ್ನು ಬೇರೆಡೆಗೆ ಅಕ್ರಮವಾಗಿ ವರ್ಗಾಯಿಸಿದ ಪ್ರಕರಣದಲ್ಲಿ ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿ ಮಹತ್ವದ ನಿರ್ಧಾರ ತಳೆದಿದ್ದು, ಅನಿಲ್ ಅಂಬಾನಿ ಅವರನ್ನು ಷೇರು ಮಾರುಕಟ್ಟೆಯಿಂದ ಐದು ವರ್ಷಗಳ ಕಾಲ ನಿಷೇಧ ಹೇರಿದೆ. ಅಲ್ಲದೆ, 25 ಕೋಟಿ ರೂ.ಗಳ ದಂಡವನ್ನು ವಿಧಿಸಿದೆ. ಇದಲ್ಲದೆ, ನಿಯಮ ಉಲ್ಲಂಘಿಸಿದ ರಿಲಯನ್ಸ್​ನ

ಇತರ ಕಂಪನಿಗಳ ಮೇಲೂ ಸೆಬಿ ಗದಾಪ್ರಹಾರ ನಡೆಸಿದೆ. ಅನಿಲ್ ಅಂಬಾನಿ ಸೇರಿದಂತೆ ನಾಲ್ವರು ಉದ್ಯಮಿಗಳನ್ನು, 24 ಕಂಪನಿಗಳನ್ನು 5 ವರ್ಷಗಳ ಕಾಲ ಸೆಕ್ಯೂರಿಟೀಸ್ ಮಾರುಕಟ್ಟೆಯಿಂದ (ಷೇರುಪೇಟೆ) ನಿಷೇಧಿಸಲಾಗಿದೆ. ಒಟ್ಟಾರೆ 624.06 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ. ಈ ಹಿಂದೆ 2022ರ ಫೆಬ್ರವರಿಯಲ್ಲಿ ಅನಿಲ್ ಅಂಬಾನಿ ಹಾಗೂ ಇತರರ ವಿರುದ್ಧ ಮುಂದಿನ ಆದೇಶದವರೆಗೆ ಸೆಕ್ಯುರಿಟೀಸ್ ಮಾರುಕಟ್ಟೆಯಲ್ಲಿ ಭಾಗವಹಿಸದಂತೆ ಸೆಬಿ ನಿರ್ಬಂಧ ಹೇರಿತ್ತು. ಶುಕ್ರವಾರ ಅಂತಿಮ ಆದೇಶವನ್ನು ನೀಡಿದೆ.

ಸೆಬಿ ಕಟ್ಟಪ್ಪಣೆ: ಅನಿಲ್ ಅಂಬಾನಿ 5 ವರ್ಷಗಳ ಕಾಲ ಸೆಕ್ಯುರಿಟೀಸ್ ಮಾರುಕಟ್ಟೆಯೊಂದಿಗೆ ಯಾವುದೇ ರೀತಿಯಲ್ಲಿ ಸಂಬಂಧ ಹೊಂದಬಾರದು ಎಂದು ಸೆಬಿ ಕಟ್ಟಪ್ಪಣೆ ಹೊರಡಿಸಿದೆ. ಯಾವುದೇ ಪಟ್ಟಿ ಮಾಡಲಾದ ಕಂಪನಿಯ ನಿರ್ದೇಶಕ ಅಥವಾ ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿ (ಕೆಎಂಪಿ) ಹುದ್ದೆ ಹೊಂದುವುದಾಗಲಿ ಅಥವಾ ಸೆಬಿಯಲ್ಲಿ ನೋಂದಾಯಿಸಲಾದ ಯಾವುದೇ ಮಧ್ಯವರ್ತಿ ಜೊತೆ ಸಂಪರ್ಕ ಸಾಧಿಸುವುದಾಗಲಿ ಮಾಡಬಾರದು ಎಂದು ಹೇಳಿದೆ. ರಿಲಯನ್ಸ್ ಹೋಮ್ ಫೈನಾನ್ಸ್​ನ್ನೂ ಸೆಕ್ಯೂರಿಟೀಸ್ ಮಾರುಕಟ್ಟೆಯಿಂದ 6 ತಿಂಗಳ ಕಾಲ ನಿರ್ಬಂಧಿಸಲಾಗಿದ್ದು, ಕಂಪನಿ ಮೇಲೆ 6 ಲಕ್ಷ ರೂ. ದಂಡ ವಿಧಿಸಲಾಗಿದೆ.

ಅಂಬಾನಿಗೆ 25 ಕೋಟಿ ರೂ. ದಂಡ ವಿಧಿಸಿದ್ದರೆ, ಆರ್​ಎಚ್​ಎಫ್​ಎಲ್​ನ ಮಾಜಿ ಅಧಿಕಾರಿಗಳಾದ ಅಮಿತ್ ಬಾಪ್ನಾಗೆ 27 ಕೋಟಿ ರೂ, ರವೀಂದ್ರ ಸುಧಾಲ್ಕರ್​ಗೆ 26 ಕೋಟಿ ರೂ., ಪಿಂಕೇಶ್ ಷಾಗೆ 21 ಕೋಟಿ ರೂ. ದಂಡ ವಿಧಿಸಲಾಗಿದೆ. ಇದಲ್ಲದೆ ರಿಲಯನ್ಸ್ ಯೂನಿಕಾರ್ನ್ ಎಂಟರ್​ಪ್ರೖೆಸಸ್, ರಿಲಯನ್ಸ್ ಎಕ್ಸ್​ಚೇಂಜ್ ನೆಕ್ಸ್ ್ಟ ಲಿಮಿಟೆಡ್, ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ ಲಿಮಿಟೆಡ್, ರಿಲಯನ್ಸ್ ಕ್ಲೀನನ್ ಲಿಮಿಟೆಡ್, ರಿಲಯನ್ ಬಿಜಿನೆಸ್ ಬ್ರಾಡ್​ಕಾಸ್ಟ್ ನ್ಯೂಸ್ ಹೋಲ್ಡಿಂಗ್ಸ್ ಲಿಮಿಟೆಡ್ ಮತ್ತು ರಿಲಯನ್ಸ್ ಬಿಗ್ ಎಂಟರ್​ಟೈನ್​ವೆುಂಟ್ ಪ್ರೖೆವೇಟ್ ಲಿಮಿಟೆಡ್ ಸೇರಿದಂತೆ 21 ಘಟಕಗಳಿಗೆ ತಲಾ 25 ಕೋಟಿ ರೂ. ದಂಡ ವಿಧಿಸಲಾಗಿದೆ. ಅಕ್ರಮ ಹಣ ವರ್ಗಾವಣೆಗೆ ಸಾಲ ಪಡೆದ ಅಥವಾ ಹಣವನ್ನು ವರ್ಗಾವಣೆ ಮಾಡುವಲ್ಲಿ ಕೈ ಜೋಡಿಸಿದ್ದಕ್ಕಾಗಿ ಈ ದಂಡ ವಿಧಿಸಲಾಗಿದೆ.

ಕಾರಣವೇನು?

ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಹೋಮ್ ಫೈನಾನ್ಸ್ ಕಂಪನಿಯಿಂದ ಹಣವನ್ನು ಬೇರೆಡೆಗೆ ಅಕ್ರಮವಾಗಿ ವರ್ಗಾ ಯಿಸಿದ ಪ್ರಕರಣದಲ್ಲಿ ಸೆಬಿ ಈ ಮಹತ್ವದ ಆದೇಶ ನೀಡಿದೆ. 222 ಪುಟಗಳ ಅಂತಿಮ ಆದೇಶದಲ್ಲಿ ಸೆಬಿಯು, ಆರ್​ಎಚ್​ಎಫ್​ನ ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿ ಸಹಾಯದಿಂದ ಅನಿಲ್ ಅಂಬಾನಿ ಆರ್​ಎಚ್​ಎಫ್​ಎಲ್​ನಿಂದ ಹಣವನ್ನು ಬೇರೆಡೆಗೆ ವರ್ಗಾಯಿಸುವ ವಂಚನೆಯ ಯೋಜನೆ ರೂಪಿಸಿದ್ದರು. ಸಾಲ ಎಂದು ಹೇಳಿ ಅವರು ತಮಗೆ ಸಂಬಂಧಿಸಿದ ಕಂಪನಿಗಳಿಗೆ ಹಣ ವರ್ಗಾಯಿಸಿಕೊಂಡಿದ್ದರು ಎಂದು ಹೇಳಿದೆ.

ಏರಿಕೆ ಕಂಡ ಸೆನ್ಸೆಕ್ಸ್, ನಿಫ್ಟಿ: ವಾರದ ಕೊನೆಯ ವಹಿವಾಟು ದಿನವಾದ ಶುಕ್ರವಾರದಂದು ಷೇರುಪೇಟೆ ಏರಿಕೆಯೊಂದಿಗೆ ವಹಿವಾಟು ಕೊನೆಗೊಳಿಸಿತು. ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್​ಇ) ಸೆನ್ಸೆಕ್ಸ್ 33 (0.04%) ಅಂಶ ಏರಿಕೆ ಕಂಡು, 81,086ಕ್ಕೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್​ಎಸ್​ಇ) ನಿಫ್ಟಿ 11 ಅಂಶ (0.05) ಅಂಶ ಏರಿಕೆಯಾಗಿ, 24,823ಕ್ಕೆ ತಲುಪಿತು. ಬಿಎಸ್​ಇ ಮಿಡ್​ಕ್ಯಾಪ್ 321 ಅಂಶ ಕುಸಿದು (0.66%) 48,321ಕ್ಕೆ ಸ್ಥಿರಗೊಂಡಿತು. ಬಿಎಸ್​ಇ ಸ್ಮಾಲ್​ಕ್ಯಾಪ್ 83 ಅಂಶ (0.15%) ಏರಿಕೆಯಾಗಿ, 55,681 ಅಂಶಗಳಿಗೆ ವಹಿವಾಟು ಕೊನೆಗೊಳಿಸಿತು.

ಸೆನ್ಸೆಕ್ಸ್​ನ 30 ಷೇರುಗಳಲ್ಲಿ 15 ಲಾಭ, 15 ನಷ್ಟ ಅನುಭವಿಸಿದವು. ನಿಫ್ಟಿಯ 50 ಷೇರುಗಳಲ್ಲಿ 22 ಲಾಭ, 28 ನಷ್ಟ ಕಂಡವು. ನಿಫ್ಟಿಯಲ್ಲಿ ಬಜಾಜ್ ಆಟೋ (4.74%), ಕೋಲ್ ಇಂಡಿಯಾ (1.70%), ಭಾರ್ತಿ ಏರ್​ಟೆಲ್ (1.59%) ಷೇರುಗಳು ಉತ್ತಮ ಲಾಭ ಗಳಿಸಿದವು. ಎಲ್​ಟಿಐ ಮೈಂಡ್​ಟ್ರೀ (1.27%), ವಿಪ್ರೋ (1.16%), ಒಎನ್​ಜಿಸಿ (1.01%) ಕಂಪನಿಯ ಷೇರುಗಳು ನಷ್ಟ ಅನುಭವಿಸಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net