

ಮಧ್ಯಪ್ರದೇಶ: ಮನೆಯವರ ಮಾತನ್ನು ವಿರೋಧಿಸಿ ಮುಸ್ಲಿಂ ಯುವಕನೊಂದಿಗೆ ಹಿಂದು ಯುವತಿ ಮದುವೆಯಾದ ಪ್ರಕರಣ ಠಾಣೆ ಮೆಟ್ಟಿಲೇರಿದೆ. ಈ ವೇಳೆ ಪಾಲಕರು, ನಮ್ಮ ಪಾಲಿಗೆ ಮಗಳು ಸತ್ತು ಹೋಗಿದ್ದಾಳೆ ಎನ್ನುತ್ತಾ, ಪೊಲೀಸರ ಮುಂದೆಯೇ ಆಕೆಗೆ ಬಿಳಿ ಬಟ್ಟೆ ಸುತ್ತಿರುವ ಘಟನೆ ಮಂಡ್‌ಸೌರ್ ಜಿಲ್ಲೆಯ ನಹರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಯುವತಿ ಆಸ್ತಾ ಎಂಬಾಕೆ ಒಂದು ವರ್ಷದ ಹಿಂದೆ ಯುವಕ ಸಾಹಿಲ್ ಎಂಬಾತನೊಂದಿಗೆ ಓಡಿ ಹೋಗಿ ಮದುವೆಯಾಗಿದ್ದಳು. ಬಳಿಕ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾಳೆ. ಕಾಲೇಜಿಗೆ ಹೋಗಿದ್ದ ಮಗಳು ನಾಪತ್ತೆಯಾದ ಬಗ್ಗೆ ಗೋವಿಂದ್ ಸೋನಿ ದೂರು ದಾಖಲಿಸಿದ್ದರು. ಪೊಲೀಸರು ತನಿಖೆ ನಡೆಸಿದಾಗ ಮಗಳ ಕೃತ್ಯ ಬಹಿರಂಗವಾಗಿತ್ತು. ಪ್ರಕರಣದ ಬಗ್ಗೆ ಹೇಳಿಕೆ ನೀಡಲು ಆಸ್ತಾ ಒಂದು ವರ್ಷದ ನಂತರ ಪತಿಯೊಂದಿಗೆ ನಹರ್‌ಗಢ ಪೊಲೀಸ್ ಠಾಣೆಗೆ ಬಂದಿದ್ದಾಳೆ.
ಈ ವೇಳೆ ಪಾಲಕರು ಮಗಳ ಮನವೋಲಿಸಲು ಪ್ರಯತ್ನಿಸಿದ್ದಾರೆ. ಆದರೆ ಆಸ್ತಾ ಮಾತ್ರ ಸಾಹಿಲ್ನನ್ನು ಬಿಟ್ಟು ಬರಲು ತಯಾರಿರಲಿಲ್ಲ. ಇದರಿಂದ ಆಕೆಯ ತಂದೆ ಮಗಳಿಗೆ ಹೆಣಕ್ಕೆ ಸುತ್ತುವ ಬಟ್ಟೆ ಸುತ್ತಿ, ಮಲಾರ್ಪಣೆ ಮಾಡಿದ್ದಾರೆ. ಅಲ್ಲದೆ, ನಮ್ಮ ಪಾಲಿಗೆ ಪುತ್ರಿ ಸತ್ತು ಹೋಗಿದ್ದಾಳೆ ಎಂದು ತಿಳಿಸಿದ್ದಾರೆ. ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಆಸ್ತಾ, ಗಂಡನೊಂದಿಗೆ ಅಲ್ಲಿಂದ ಹೊರಟು ಹೋಗಿದ್ದಾಳೆ.
ಪಾಲಕರು ಮಗಳಿಗೆ ಹೆಣದ ಬಟ್ಟೆ ಸುತ್ತುತ್ತಿರುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗದೆ. ಈ ಬಗ್ಗೆ ಆಸ್ತಾಳ ತಂದೆ ಪ್ರತಿಕ್ರಿಯಿಸಿದ್ದು, ಕಾಲೇಜಿಗೆ ಹೋಗಿದ್ದ ಮಗಳು ಬಸ್ ನಿಲ್ದಾಣದಿಂದ ಓಡಿ ಹೋಗಿದ್ದಳು. ಬಳಿಕ ಮದುವೆಯಾಗಿ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದಾಳೆ. ಇದೀಗ ಒಂದೂವರೆ ವರ್ಷದ ಬಳಿಕ ತನ್ನ ವಕೀಲರ ಜತೆ ಠಾಣೆಗೆ ಬಂದು ಹೇಳಿಕೆ ನೀಡಿದ್ದಾಳೆ. ಇದನ್ನು ನಾನು ಒಪ್ಪುವುದಿಲ್ಲ. ಹೀಗಾಗಿ ಮಗಳು ಸತ್ತಿದ್ದಾಳೆ ಎಂದು ಭಾವಿಸಿ ಅವಳಿಗೆ ಹೆಣದ ಬಟ್ಟೆ ಹೊದಿಸಿರುವುದಾಗಿ ತಿಳಿಸಿದ್ದಾರೆ.