ತರಕಾರಿ ಸೇವನೆಯಿಂದ ಪೌಷ್ಟಿಕಾಂಶ ಲಭ್ಯ

17 nrp 3 anganavaadi
ಎನ್.ಆರ್.ಪುರದ ಅಂಗನವಾಡಿಯಲ್ಲಿ ಪೋಷಣ್ ಮಾಸಾಚರಣೆ ಕಾರ್ಯಕ್ರಮವನ್ನು ಪಪಂ ಅಧ್ಯಕ್ಷೆ ಸುರೈಯಾಭಾನು ಉದ್ಘಾಟಿಸಿದರು. ಜುಬೇದಾ, ಆಸ್ಮಾ, ಕಾವ್ಯಾ, ಅನಿತಾ ಇತರರಿದ್ದರು.
Published on

ಎನ್.ಆರ್.ಪುರ: ತರಕಾರಿಯಲ್ಲಿ ಹೆಚ್ಚು ಪೌಷ್ಟಿಕಾಂಶ ಇದೆ. ಗರ್ಭಿಣಿಯರು, ಬಾಣಂತಿಯರು, ಮಕ್ಕಳು ತರಕಾರಿ ಹೆಚ್ಚು ಸೇವಿಸಬೇಕು ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುರೈಯಾ ಭಾನು ತಿಳಿಸಿದರು.
ಮಂಗಳವಾರ ಪಟ್ಟಣದ ಎನ್.ಆರ್.ಪುರ - 2 ಅಂಗನವಾಡಿ ಕೇಂದ್ರದಲ್ಲಿ ಏರ್ಪಡಿಸಿದ್ದ ಪೋಷಣ್ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತರಕಾರಿಯಲ್ಲಿ ಹೆಚ್ಚು ಪೌಷ್ಟಿಕಾಂಶ ಇರುವುದರಿಂದ ದಿನನಿತ್ಯದ ಆಹಾರದಲ್ಲಿ ಹೆಚ್ಚಾಗಿ ತರಕಾರಿಗಳನ್ನು ಉಪಯೋಗಿಸಬೇಕು ಎಂದು ಸಲಹೆ ನೀಡಿದರು.
ಪಪಂ ಸದಸ್ಯೆ ಜುಬೇದಾ ಮಾತನಾಡಿ, ತಾಯಂದಿರು, ಗರ್ಭಿಣಿಯರು ಪೋಷಕಾಂಶಯುಕ್ತ ತರಕಾರಿ, ಕಾಳುಗಳನ್ನು ಹೆಚ್ಚಾಗಿ ತಿನ್ನಬೇಕು. ಮಹಿಳೆಯರಿಗೆ ಆರೋಗ್ಯ ಸಮಸ್ಯೆ ಉಂಟಾದರೆ ಇಡೀ ಕುಟುಂಬದವರ ಮೇಲೆ ಪರಿಣಾಮ ಬೀರುತ್ತದೆ ಎಂದರು.
ಆರೋಗ್ಯ ಇಲಾಖೆಯ ಆಸ್ಮಾ ಮಾತನಾಡಿ, ಪೌಷ್ಟಿಕ ಆಹಾರದ ಕೊರತೆಯಾದಲ್ಲಿ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತದೆ. ಅಲ್ಲದೆ ಮಗುವಿನ ದೈನಂದಿನ ಚಟುವಟಿಕೆಗಳ ಮೇಲೂ ಪರಿಣಾಮ ಬೀರುತ್ತದೆ ಎಂದು ಹೇಳಿದರು.
ಅಂಗನವಾಡಿ ಮೇಲ್ವಿಚಾರಕಿ ಕಾವ್ಯಾ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಪೋಷಣ್ ಮಾಸಾಚರಣೆ ಕಾರ್ಯಕ್ರಮವನ್ನು ಪ್ರತಿ ಅಂಗನವಾಡಿಯಲ್ಲೂ ಆಯೋಜನೆ ಮಾಡಲಾಗುತ್ತದೆ. ಮೊದಲನೇ ವಾರದಲ್ಲಿ ಕಿಶೋರಿಯರು, ಗರ್ಭಿಣಿಯರು, ಬಾಣಂತಿಯರ ರಕ್ತ ಪರೀಕ್ಷೆ ಮಾಡಲಾಗುವುದು. 2ನೇ ವಾರದಲ್ಲಿ ಪೌಷ್ಟಿಕ ಆಹಾರದ ಮಾಹಿತಿ ನೀಡಲಾಗುವುದು. 3ನೇ ವಾರದಲ್ಲಿ ಪಾಲಕರೇ ಪೌಷ್ಟಿಕ ಆಹಾರ ತಯಾರಿಸಿ ಪ್ರಾತ್ಯಕ್ಷಿಕೆಯೊಂದಿಗೆ ಪ್ರದರ್ಶನ ಮಾಡಬಹುದು ಎಂದರು.
ಅಂಗನವಾಡಿ ಕಾರ್ಯಕರ್ತೆಯರಾದ ಅನಿತಾ, ಶ್ಯಾಮಲಾ, ಶೈಲಾ, ಜಯಂತಿ, ಲಕ್ಷ್ಮೀದೇವಿ, ಆಶಾ, ಆರೋಗ್ಯ ಇಲಾಖೆಯ ಡೈಸಿ, ಆರೋಗ್ಯ ಇಲಾಖೆಯ ಅನಿತಾ, ಆಶಾ ಕಾರ್ಯಕರ್ತೆ ಕುಸುಮಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net