

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಅಂಗನವಾಡಿ ಕಾರ್ಯಕರ್ತೆಯರು ಗ್ರಾಚ್ಯುವಿಟಿ ಹಾಗೂ ಕೆಲವು ಇತರೆ ಬೇಡಿಕೆಗಳಿಗಾಗಿ ಬೆಂಗಳೂರು ನಗರಕ್ಕೆ ಬಂದು ಉಗ್ರವಾಗಿ ಹೋರಾಟ ನಡೆಸುತ್ತಿದ್ದರು. ಇದೀಗ ಅವರ ಹೋರಾಟ ಕೊನೆಗೊಂಡಿದ್ದು ರಾಜ್ಯ ಸರ್ಕಾರದ ಪರವಾಗಿ ಸಚಿವ ಹಾಲಪ್ಪ ಮಾಡಿದ್ದ ಸಂಧಾನಯಶಸ್ವಿ ಆಗಿದೆ ಎಂದೇ ಹೇಳಬಹುದು.
ಈ ಹಿನ್ನೆಲೆಯಲ್ಲಿ ಸಚಿವ ಹಾಲಪ್ಪ ಆಚಾರ್ ಸುದ್ದಿಗೋಷ್ಟಿ ನಡೆಸಿದ್ದು 'ಅಂಗನವಾಡಿ ಕಾರ್ಯಕರ್ತರ ಬಹುತೇಕ ಬೇಡಿಕೆ ಈಡೇರಿಸುವುದಕ್ಕೆ ಒಪ್ಪಿಗೆ ಕೊಟ್ಟಿದ್ದೇವೆ. 10 ರಿಂದ 1 ಗಂಟೆವರೆಗೆ ಕಾರ್ಯಕರ್ತರನ್ನು ಇತರೆ ಯಾವುದೇ ಕೆಲಸಕ್ಕೆ ನಿಯೋಜನೆ ಮಾಡೋ ಹಾಗಿಲ್ಲ ಎನ್ನುವ ಬೇಡಿಕೆಗೂ ನಾವು ಒಪ್ಪಿದ್ದೇವೆ. ಸಿಎಂ ಕೂಡ ಗ್ರಾಚ್ಯುವಿಟಿ ನೀಡಲು ಒಪ್ಪಿಗೆ ಕೊಟ್ಟಿದ್ದು
ಎಲ್ಲವನ್ನೂ ಹಂತ ಹಂತವಾಗಿ ಜಾರಿ ಮಾಡುತ್ತೇವೆ. ಪ್ರತಿಭಟನೆ ಕೈ ಬಿಡುವುದಾಗಿ ಕಾರ್ಯಕರ್ತರು ಕೂಡ ಒಪ್ಪಿದ್ದು ಇಂದು ರಾತ್ರಿ ಮತ್ತೆ ಗ್ರಾಚ್ಯುವಿಟಿ ವಿಚಾರವಾಗಿ ಸಭೆ ನಡೆಸಿ ವಿಆರವನ್ನು ಕಾರ್ಯರೂಪಕ್ಕೆ ತರುತ್ತೇವೆ. ಪಿಯುಸಿ ಅರ್ಹತೆ ಇಲ್ಲದೇ ಇರುವ ಕಾರ್ಯಕರ್ತೆಯರಿಗೂ ಒಂದು ಬಾರಿ ಬಡ್ತಿ ನೀಡಲು ಸರ್ಕಾರ ಒಪ್ಪಿಗೆ ನೀಡಿದೆ' ಎಂದು ಹೇಳಿಕೆ ನೀಡಿದ್ದಾರೆ.
ರಾಜ್ಯದ ಚಳವಳಿಯ ಇತಿಹಾಸದಲ್ಲಿ ಹತ್ತು ದಿನಗಳ ಕಾಲ ಹಗಲು ರಾತ್ರಿ ಇಷ್ಡೊಂದು ಮಹಿಳೆಯರು ಪ್ರತಿಭಟನೆ ಮಾಡಿದ್ದು ಇದೇ ಮೊದಲಾಗಿದ್ದು ತಮ್ಮ ಹೋರಾಟದ ಯಶಸ್ಸಿನ ಬಗ್ಗೆ ಮಾತನಾಡಿರುವ ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ವರಲಕ್ಷ್ಮಿ ಕೂಡ ಹೇಳಿಕೆ ನೀಡಿದ್ದು 'ನಮ್ಮ ಎಲ್ಲಾ ಬೇಡಿಕೆಗಳಿಗೂ ಹೆಚ್ಚು ಕಡಿಮೆ ಈಡೇರಿವೆ. 45 ವರ್ಷದ ಹೋರಾಟಕ್ಕೆ ಈ ಕ್ಷಣ ನಮಗೆ ಪ್ರತಿಫಲ ಸಿಕ್ಕಿದೆ. ನಾಳೆ ಈ ಬಗ್ಗೆ ಸರ್ಕಾರ ಅಧಿಕೃತ ಆದೇಶ ಮಾಡುತ್ತದೆ ಎಂದಯ ಹೇಳಿದ್ದಾರೆ. ಇದು ನಮ್ಮ ಹೋರಾಟಕ್ಕೆ ಸಿಕ್ಕ ಅತಿ ದೊಡ್ಡ ಜಯ.
ಅಂಗನವಾಡಿ ಮಕ್ಕಳಿಗೆ ದೃಢೀಕರಣ ಪತ್ರೆ ಕೊಡುವುದಕ್ಕೂ ಸರ್ಕಾರ ಒಪ್ಪಿದೆ. ಹೆಚ್ಚುವರಿ ಕೆಲಸದ ಬಗೆಗಿನ ಸಮಸ್ಯೆಯನ್ನು ಬಗೆಹರಿಸಲು ನಾಲ್ಕು ತಿಂಗಳ ಅವಧಿ ಕೇಳಿದ್ದಾರೆ. ಕೇಂದ್ರ ಚುನಾವಣೆ ಆಯೋಗದ ಜೊತೆ ಮಾತನಾಡಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳೋಣ ಅಂತ ಹೇಳಿದ್ದಾರೆ. ಅಂಗನವಾಡಿ ಕೇಂದ್ರದ ಮೂಲಕ ಅನೌಪಚಾರಿಕ ಶಿಕ್ಷಣ ಕೊಡುವುದಕ್ಕೂ ಸರ್ಕಾರ ಒಪ್ಪಿದೆ' ಎಂದು ಮಾಹಿತಿ ನೀಡಿದ್ದಾರೆ. ಹೀಗೆ ಅಂಗನವಾಡಿ ಕಾರ್ಯಕರ್ತೆಯರ ಹೋರಾಟಕ್ಕೆ ತೆರೆ ಬಿದ್ದಿದೆ ಎಂದೇ ಹೇಳಬಹುದು.