'ಯಾಕಯ್ಯಾ ರೇಗಿಸುತ್ತೀಯಾ' ಎಂದು ಕೇಳಿದ ಗೆಳೆಯನ ಎದೆಗೇ ಚಾಕು ಹಾಕಿದ ಬಾಲಕ!

juvinile crime
Published on

ಹಾವೇರಿ: ಮಕ್ಕಳ ನಡುವೆ ಗೆಳೆತನ ಬೆಳೆದಾಗ ಒಬ್ಬರಿಗೊಬ್ಬರು ಕೀಟಲೆ ಮಾಡುವುದು, ರೇಗಿಸುವುದು ಎಲ್ಲವೂ ಸಹಜ. ಆದರೆ ಇಲ್ಲೊಬ್ಬ ಬಾಲಕ, ಯಾಕೆ ಕೀಟಲೆ ಮಾಡುತ್ತಿದ್ದೀಯಾ ಎಂದು ತನ್ನ ಸ್ನೇಹಿತನಿಗೆ ಪ್ರಶ್ನಿಸಿದ್ದೇ ತಪ್ಪಾಗಿ ಹೋಗಿದೆ. ಬಾಲಕನ ಗೆಳೆಯ ಅದೆಲ್ಲಿಂದಲೋ ಚಾಕು ತಂದು ನೇರವಾಗಿ ಎದೆಗೇ ಇರಿದು ಬಿಟ್ಟಿದ್ದಾನೆ.

ಹಾವೇರಿ ಜಿಲ್ಲೆಯ ಹಿರೇಕೆರೂರು ಪಟ್ಟಣದಲ್ಲಿ ಈ ಘಟನೆ ನಡೆದಿದ್ದು ಮಹಮ್ಮದ್​ ಅಫ್​ಜಲ್​ ಎನ್ನುವ ಬಾಲಕ ಚಾಕು ಇರಿತಕ್ಕೆ ಒಳಗಾಗಿದ್ದಾನೆ. ಈತನ ಎದೆ ಭಾಗ, ಕೈ, ಬೆನ್ನಿನ ಭಾಗದಲ್ಲಿ ಚಾಕು ಇರಿಯಲಾಗಿದೆ.

ಹತ್ತನೇ ತರಗತಿಯಲ್ಲಿ ಸಾದಿಕ್ ಮತ್ತು ಮಹಮ್ಮದ್​ ಅಫ್​ಜಲ್ ಓದುತ್ತಿದ್ದರು. ಇವರಿಬ್ಬರೂ ಕೆಲವು ತಿಂಗಳುಗಳಿಂದ‌ ಗೆಳೆಯರಾಗಿದ್ದು ಒಟ್ಟಿಗೆ ಸಮಯ ಕಳೆಯುತ್ತಿದ್ದರು. ಈ ನಡುವೆ ಸಾದಿಕ್​, ಮಹಮ್ಮದ್​ ಅಫ್​ಜಲ್​ಗೆ ಪದೇ ಪದೇ ಕೀಟಲೆ ಮಾಡುವುದು, ರೇಗಿಸುವುದು ಮಾಡುತ್ತಿದ್ದ. ಸಾದಿಕ್​ ಊಟಕ್ಕೆ ಬಿಟ್ಟ ಸಮಯದಲ್ಲಿ ಶಾಲೆಯ ಹೊರಗಡೆ ರೇಗಿಸುತ್ತಾ ಕೀಟಲೆ ಮಾಡುತ್ತಾ ಇರುತ್ತಿದ್ದ. ಇದರಿಂದ ಬೇಸತ್ತ ಮಹಮ್ಮದ್​ ಅಫ್​ಜಲ್​, ಸಾದಿಕ್​ನನ್ನು 'ಯಾಕಯ್ಯಾ ನನ್ನನ್ನು ರೇಗಿಸುತ್ತಿ' ಪ್ರಶ್ನಿಸಿದ್ದಾನೆ.

ಇಷ್ಟಕ್ಕೇ ಕೋಪಗೊಂಡ ಸಾದಿಕ್​, ಚಾಕು ತಂದು ಮಹಮ್ಮದ್​ ಅಫ್​ಜಲ್​ಗೆ ಇರಿದಿದ್ದಾನೆ! ಚಾಕು ಇರಿತಕ್ಕೆ ಒಳಗಾದ ಮಹಮ್ಮದ್​ ಅಫ್​ಜಲ್​ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾನೆ. ಸಾದಿಕ್, ಅಫ್​ಜಲ್​ನ ಎದೆ, ಕೈ ಹಾಗೂ ಬೆನ್ನಿನ ಭಾಗದಲ್ಲಿ ಚಾಕು ಇರಿದಿದ್ದು, ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಹಿರೇಕೆರೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net