ತೆಲುಗು ರಾಜ್ಯಗಳಲ್ಲಿ ಪ್ರವಾಹ.. ಕೋಟಿ ದೇಣಿಗೆ ನೀಡಿದ ಮೆಗಾಸ್ಟಾರ್ ಚಿರಂಜೀವಿ

chiranjeevi
Published on

ಹೈದರಾಬಾದ್: ಉಭಯ ತೆಲುಗು ರಾಜ್ಯಗಳಲ್ಲಿ ಪ್ರವಾಹದ ಹಿನ್ನೆಲೆಯಲ್ಲಿ ಮೆಗಾಸ್ಟಾರ್ ಚಿರಂಜೀವಿ ಮತ್ತೊಮ್ಮೆ ತಮ್ಮ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ಎರಡೂ ರಾಜ್ಯಗಳಿಗೆ 1ಕೋಟಿ ರೂಪಾಯಿ ನೆರವು ಘೋಷಿಸಿದ್ದಾರೆ.

ಕೇರಳದ ವಯನಾಡ್ ಭೂಕುಸಿತದ ಹಿನ್ನೆಲೆಯಲ್ಲಿ ಹೆಚ್ಚು ನೆರವು ನೀಡಿದ್ದ ಟಾಲಿವುಡ್ ಮಂದಿ ಈಗ ತಮ್ಮದೇ ನೆಲದಲ್ಲಿ ಜಲತಾಂಡವವಾಡುತ್ತಿದ್ದು, ಜನ-ಜಾನುವಾರು ಪ್ರಾಣ ಕಳೆದುಕೊಂಡಿದ್ದು, ಸಂತ್ರಸ್ತರಿಗೆ ಸಹಾಯ ಮಾಡಲು ಮುಂದೆ ಬಂದು ದೇಣಿಗೆಯನ್ನು ಘೋಷಿಸುತ್ತಿದ್ದಾರೆ. ವಯನಾಡ್​ ಸಂತ್ರಸ್ತರ ನೆರವಿಗೆ 1 ಕೋಟಿ ನೆರವು ನೀಡಿದ್ದ ಚಿರಂಜೀವಿ ಆಂಧ್ರ, ತೆಲಂಗಾಣ ಸಂತ್ರಸ್ತರ ನೆರವಿಗಾಗಿ 1 ಕೋಟಿ ರೂ. ಕೊಟ್ಟಿದ್ದಾರೆ.

ಈ ಸಂದರ್ಭದಲ್ಲಿ ಚಿರಂಜೀವಿ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಹತ್ತಾರು ಅಮಾಯಕರು ಬಲಿಯಾಗಿರುವುದು ಅತ್ಯಂತ ದುಃಖಕರ ಸಂಗತಿಯಾಗಿದೆ. ತೆಲುಗು ರಾಜ್ಯಗಳ ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ಎರಡೂ ಸರ್ಕಾರಗಳು ಪರಿಸ್ಥಿತಿಯನ್ನು ಸುಧಾರಿಸಲು ಶ್ರಮಿಸುತ್ತಿವೆ. ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಪರಿಹಾರ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಈ ಪ್ರಕ್ರಿಯೆಯ ಭಾಗವಾಗಿ, ಎರಡೂ ರಾಜ್ಯಗಳ ಜನರ ಪರಿಹಾರಕ್ಕೆ ಸಹಾಯ ಮಾಡಲು ನಾನು ಒಂದು ಕೋಟಿ ರೂಪಾಯಿಗಳನ್ನು (ಆಂಧ್ರ ಪ್ರದೇಶ ಮತ್ತು ತೆಲಂಗಾಣ ಸಿಎಂ ಪರಿಹಾರ ನಿಧಿಗೆ ತಲಾ 50 ಲಕ್ಷ) ನೀಡುತ್ತೇನೆ ಎಂದು ಘೋಷಿಸುತ್ತಿದ್ದೇನೆ.

ಈ ಭೀಕರ ಪರಿಸ್ಥಿತಿಗಳು ಶೀಘ್ರದಲ್ಲೇ ಕೊನೆಗೊಳ್ಳಲಿ ಮತ್ತು ಎಲ್ಲಾ ಜನರು ಸುರಕ್ಷಿತವಾಗಿರಲಿ ಎಂದು ನಾನು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಘೋಷಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net