ಭಾರಿ ಮಳೆಗೆ ತತ್ತರಿಸಿದ ಆಂಧ್ರ, ತೆಲಂಗಾಣ: 19 ಮಂದಿ ಸಾವು, 17 ಸಾವಿರಕ್ಕೂ ಅಧಿಕ ಜನರ ಸ್ಥಳಾಂತರ

TLG Rain
Published on

ಹೈದರಾಬಾದ್​: ನೆರೆಯ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಸುರಿದ ಭಾರಿ ಮಳೆಗೆ ಸುಮಾರು 19 ಮಂದಿ ಸಾವಿಗೀಡಾಗಿದ್ದು, 17 ಸಾವಿರಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ವರುಣನ ಅಬ್ಬರ ಮುಂದುವರಿದಿದ್ದು, ಉಭಯ ರಾಜ್ಯಗಳಲ್ಲಿ ಅಲ್ಲಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ ಮತ್ತು 140ಕ್ಕು ಹೆಚ್ಚು ರೈಲು ಸೇವೆಗಳು ಸ್ಥಗಿತಗೊಂಡಿವೆ ಮತ್ತು ಕೆಲ ರೈಲುಗಳ ಮಾರ್ಗಗಳನ್ನು ಬದಲಾಯಿಸಲಾಗಿದೆ.

ಭಾರಿ ಮಳೆಯಿಂದ ಅನೇಕ ರಸ್ತೆಗಳು ಜಲಾವೃತಗೊಂಡಿದ್ದು, ಹಲವಾರು ಪ್ರದೇಶಗಳ ಸಂಪರ್ಕ ಕಡಿತಗೊಂಡಿದೆ ಮತ್ತು ಸಾವಿರಾರು ಜನರು ಪ್ರವಾಹದ ನಡುವೆ ಸಿಲುಕಿಕೊಂಡಿದ್ದು, ಪ್ರಾಣ ಭೀತಿ ಎದುರಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರೊಂದಿಗೆ ಮಾತುಕತೆ ನಡೆಸಿದ್ದು, ಉಭಯ ರಾಜ್ಯಗಳ ಪರಿಸ್ಥಿತಿಯನ್ನು ವಿಚಾರಿಸಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ನಿರೀಕ್ಷೆ ಇರುವುದರಿಂದ ಕೇಂದ್ರದಿಂದ ಸಾಧ್ಯವಿರುವ ಎಲ್ಲ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.

ಮೃತಪಟ್ಟ 19 ಜನರಲ್ಲಿ ಒಂಬತ್ತು ಮಂದಿ ಆಂಧ್ರಪ್ರದೇಶದವರಾಗಿದ್ದರೆ, ತೆಲಂಗಾಣದಲ್ಲಿ 10 ಸಾವುಗಳು ಸಂಭವಿಸಿವೆ. ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಆಂಧ್ರದಲ್ಲಿ ಮೂರು ಜನರು ಪ್ರವಾಹದಲ್ಲಿ ಕೊಚ್ಚಿಹೋಗಿದ್ದಾರೆ ಮತ್ತು ತೆಲಂಗಾಣದಲ್ಲಿ ಒಬ್ಬರು ನಾಪತ್ತೆಯಾಗಿದ್ದಾರೆ. ದಕ್ಷಿಣ ಕೇಂದ್ರ ರೈಲ್ವೆ (SCR) 140 ರೈಲು ಸೇವೆಗಳನ್ನು ರದ್ದುಗೊಳಿಸಿದೆ ಮತ್ತು 97 ರೈಲುಗಳ ಮಾರ್ಗಗಳನ್ನು ಬದಲಾಯಿಸಲಾಗಿದೆ. 6,000ಕ್ಕೂ ಅಧಿಕ ಪ್ರಯಾಣಿಕರು ವಿವಿಧ ನಿಲ್ದಾಣಗಳಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.

ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ಪರಿಹಾರ ತಂಡಗಳು ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರೆಸಿದ್ದು, ಆಂಧ್ರಪ್ರದೇಶದಲ್ಲಿ 17,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ತೀವ್ರ ಪ್ರವಾಹವನ್ನು ಅನುಭವಿಸಿದ ವಿಜಯವಾಡ ಒಂದರಲ್ಲೇ 2.76 ಲಕ್ಷಕ್ಕೂ ಹೆಚ್ಚು ಜನರು ಸಂತ್ರಸ್ತರಾಗಿದ್ದಾರೆ. ಹೈದರಾಬಾದ್‌ನಲ್ಲಿ ಭಾರೀ ಮಳೆಯಾಗುತ್ತಿದ್ದು, ರಾತ್ರಿಯಿಡೀ ಸುರಿದ ಮಳೆಯಿಂದಾಗಿ ನಗರದ ಹಲವೆಡೆ ಜಲಾವೃತವಾಗಿದೆ. ಹೈದರಾಬಾದ್ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 2ರಂದು ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ರಸ್ತೆಗಳು ಪ್ರವಾಹದಲ್ಲಿ ಮುಳುಗಿದ್ದರಿಂದ ಎರಡೂ ರಾಜ್ಯಗಳ ಹಲವಾರು ಪ್ರದೇಶಗಳು ಸಂಪರ್ಕ ಕಡಿತಗೊಂಡಿವೆ. ಪ್ರವಾಹದಿಂದಾಗಿ ಆಂಧ್ರ-ತೆಲಂಗಾಣ ಗಡಿಯಲ್ಲಿ ಸೇತುವೆಗೆ ಹಾನಿಯಾಗಿದ್ದು, ಎರಡು ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯ ಸಂಚಾರವೂ ಅಸ್ತವ್ಯಸ್ತವಾಗಿದೆ.

ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಪ್ರವಾಹ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗಾಗಿ ಗಾಳಿ ತುಂಬಬಹುದಾದ ದೋಣಿಗಳು, ಕಂಬಗಳು ಮತ್ತು ಮರಗಳನ್ನು ಕತ್ತರಿಸುವ ಯಂತ್ರಗಳು ಮತ್ತು ಮೂಲ ವೈದ್ಯಕೀಯ ನೆರವು ಸಾಧನಗಳನ್ನು ಹೊಂದಿದ ಇಪ್ಪತ್ತಾರು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡಗಳನ್ನು ನಿಯೋಜಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ 12 ತಂಡಗಳನ್ನು ನಿಯೋಜಿಸಲಾಗಿದ್ದು, ಇನ್ನೂ 14 ತಂಡಗಳನ್ನು ಎರಡು ನೆರೆಯ ರಾಜ್ಯಗಳಿಗೆ ವಿಮಾನದಲ್ಲಿ ರವಾನಿಸಲಾಗುತ್ತಿದೆ.

ರಕ್ಷಣಾ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಸಮನ್ವಯಗೊಳಿಸುವಂತೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರು ಸಚಿವರು ಮತ್ತು ಉನ್ನತ ಅಧಿಕಾರಿಗಳನ್ನು ನಿರ್ದೇಶಿಸಿದ್ದಾರೆ. ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಒಂದಾದ ಖಮ್ಮಂನಲ್ಲಿ ಸಿಲುಕಿರುವ ಹಲವಾರು ಜನರು ತಮಗೆ ಯಾವುದೇ ನೆರವು ಸಿಕ್ಕಿಲ್ಲ ಎಂದು ಸರ್ಕಾರ ವಿರುದ್ಧ ಆರೋಪಿಸಿದ್ದಾರೆ. ಸ್ಥಳೀಯರ ಪ್ರಕಾರ, ಈ ಪ್ರದೇಶದ ವಿವಿಧ ಕಟ್ಟಡಗಳಲ್ಲಿ ಹಲವರು ಸಿಲುಕಿಕೊಂಡಿದ್ದಾರೆ.

ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಭಾರೀ ಮಳೆಯಿಂದಾಗಿ ವಿಜಯವಾಡದ ಬುಡಮೇರು ವಾಗು ನದಿ ಸೇರಿದಂತೆ ಹಲವು ನದಿಗಳು ಉಕ್ಕಿ ಹರಿಯುತ್ತಿವೆ. ಸಮೀಪದ ಪ್ರದೇಶಗಳ ಜನರನ್ನು ಎರಡೂ ರಾಜ್ಯಗಳ ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಸೆಪ್ಟೆಂಬರ್ 2 ರಿಂದ 5 ರವರೆಗೆ ನಾಲ್ಕು ದಿನಗಳ ಕಾಲ ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ ಗುಡುಗು-ಮಿಂಚು ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ತೆಲಂಗಾಣದಲ್ಲಿಯೂ ಸಹ ಇದೇ ರೀತಿಯ ಹವಾಮಾನ ಪರಿಸ್ಥಿತಿ ಇದ್ದು, ಭಾರಿ ಮಳೆಯಾಗಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net