

ನವದೆಹಲಿ: ವೈಎಸ್ಆರ್ ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸದಸ್ಯರಾದ ಆರ್. ಕೃಷ್ಣಯ್ಯ ಅವರು ಮಂಗಳವಾರ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. Andhra Pradesh ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳಲ್ಲಿ ವೈಎಸ್ಆರ್ಸಿಪಿ ಸೋಲಿನ ಬಳಿಕ ಹಲವು ಮುಖಂಡರು ಪಕ್ಷ ತೊರೆದಿದ್ದರು.
ಆರ್.ಕೃಷ್ಣಯ್ಯ ಅವರು ರಾಜ್ಯಸಭೆಯ ಸಭಾಪತಿ ಜಗದೀಪ್ ಧನಕರ್ ಅವರಿಗೆ ತಮ್ಮ ರಾಜೀನಾಮೆ ಪತ್ರಗಳನ್ನು ಸಲ್ಲಿಸಿದರು. ಅವರ ರಾಜೀನಾಮೆಯನ್ನು ಸಭಾಪತಿ ಅಂಗೀಕರಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಈ ಮೂಲಕ ರಾಜ್ಯಸಭೆಯಲ್ಲಿ ವೈಎಸ್ಆರ್ ಕಾಂಗ್ರೆಸ್ ಸದಸ್ಯರ ಸಂಖ್ಯೆ 8ಕ್ಕೆ ಇಳಿದಿದೆ. ಸಂಖ್ಯಾಬಲ ಹೊಂದಿರುವ ಟಿಡಿಪಿ-ಜನಸೇನಾ-ಬಿಜೆಪಿ ಪಕ್ಷಗಳ ಒಕ್ಕೂಟವು ಈ ಒಂದು ಸ್ಥಾನವನ್ನು ಉಪ ಚುನಾವಣೆಯಲ್ಲಿ ಗೆಲ್ಲುವ ನಿರೀಕ್ಷೆಯಿದೆ.
ಇತ್ತೀಚೆಗೆ, ಬೀಡಾ ಮಸ್ತಾನ್ ರಾವ್ ಜಾಧವ್ ಮತ್ತು ಎಂ ವೆಂಕಟರಮಣ ರಾವ್ ಮೋಪಿದೇವಿ ಅವರು ವೈಎಸ್ಆರ್ ಕಾಂಗ್ರೆಸ್ ಪಕ್ಷನ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಅವರು ಸಿಎಂ ಎನ್ ಚಂದ್ರಬಾಬು ನಾಯ್ಡು ಅವರ ನೇತೃತ್ವದ ಟಿಡಿಪಿ ಸೇರಲಿದ್ದಾರೆ ಎನ್ನಲಾಗಿತ್ತು.
ವೈಎಸ್ಆರ್ ಕಾಂಗ್ರೆಸ್ ಪಕ್ಷ ಸದನದಲ್ಲಿ ಒಟ್ಟು 11 ರಾಜ್ಯಸಭಾ ಸದಸ್ಯರನ್ನು ಹೊಂದಿದ್ದರೆ, ಅವರಲ್ಲಿ ಮೂವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ರಾಜ್ಯಸಭೆಯಲ್ಲಿ ವೈಸಿಪಿ ಪಕ್ಷದ ಸದಸ್ಯರ ಸಂಖ್ಯೆ 8ಕ್ಕೆ ಕುಸಿದಿದೆ. ಪ್ರಸ್ತುತ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಸಂಸದರಾದ ವೈವಿ ಸುಬ್ಬಾರೆಡ್ಡಿ, ಗೊಲ್ಲ ಬಾಬುರಾವ್, ವಿ. ವಿಜಯಸಾಯಿ ರೆಡ್ಡಿ, ನಿರಂಜನ್ ರೆಡ್ಡಿ, ಮೇದಾ ರಘುನಾಥ ರೆಡ್ಡಿ, ಅಲ್ಲಾ ಅಯೋಧ್ಯಾ ರಾಮಿರೆಡ್ಡಿ, ಸುಭಾಷ್ ಚಂದ್ರಬೋಸ್ ಪಿಲ್ಲಿ ಮತ್ತು ನಾಥವಾನಿ ಪರಿಮಳ್ ಇದ್ದಾರೆ.