ಆಂಧ್ರಪ್ರದೇಶ: ಸೈನೈಡ್ ಮಿಶ್ರಿತ ಜ್ಯೂಸ್ ಕುಡಿಸಿ ಸುಲಿಗೆ ಮಾಡುತ್ತಿದ್ದ ಲೇಡಿ ಗ್ಯಾಂಡ್ ಅರೆಸ್ಟ್!

fea
Published on

ಅಮರಾವತಿ: ಅಪರಿಚತರೊಂದಿಗೆ ಸ್ನೇಹ ಬೆಳೆಸಿಕೊಂಡು ಅವರ ಚಿನ್ನಾಭರಣ, ನಗದು ಹಾಗೂ ಅಮೂಲ್ಯ ವಸ್ತುಗಳನ್ನು ಲೂಟಿ ಮಾಡುತ್ತಿದ್ದ ಖತರ್​ನಾಕ್​ ಮಹಿಳಾ ಗ್ಯಾಂಗ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಾದ ಮುನಗಪ್ಪ ರಜಿನಿ (40), ಮಡಿಯಾಲ ವೆಂಕಟೇಶ್ವರಿ (32), ಗುಲ್ರ ರಮಣಮ್ಮ (60) ಅವರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಆಂಧ್ರಪ್ರದೇಶದ ತೆನಾಲಿ ಜಿಲ್ಲೆಯಲ್ಲಿ ಸಕ್ರಿಯರಾಗಿದ್ದ ಈ ನಾಲ್ವರು ಮಹಿಳಾ ಗ್ಯಾಂಗ್​ ಪೊಲೀಸರ ಬಲೆಗೆ ಬಿದ್ದಿದೆ.

ಪೊಲೀಸರ ಪ್ರಕಾರ, ಅಪರಿಚತರೊಂದಿಗೆ ಸ್ನೇಹ ಬೆಳಸಿಕೊಂಡು, ಅವರ ಜೊತೆ ಸಲುಗೆಯಿಂದ ವರ್ತಿಸಿ ಅವರಿಗೆ ಆತ್ಮೀಯರಾಗುತ್ತಿದ್ದಂತೆ ಅವರಿಗೆ ತಂಪುಪಾನಿಯಗಳಲ್ಲಿ ಸೈನೈಡ್​ ಬೆರೆಸಿ ನೀಡುತ್ತಿದ್ದರು. ಇದನ್ನು ಕುಡಿದ ಕೂಡಲೇ ಅವರು ಪ್ರಾಣ ಕಳೆದುಕೊಳ್ಳುತ್ತಾರೆ. ಬಳಿಕ ಅವರ ಮೈ ಮೇಲಿದ್ದ ಚಿನ್ನಾಭರಣ, ನಗದು ಹಾಗೂ ಬೆಲೆಬಾಳುವ ವಸ್ತುಗಳನ್ನು ಕಸಿದು ಈ ಖತರ್​​ ನಾಕ್ ಗ್ಯಾಂಗ್ ಪರಾರಿಯಾಗುತ್ತಿತ್ತು.

ಈ ವರ್ಷದ ಜೂನ್‌ ತಿಂಗಳಿನಲ್ಲಿ ನಾಗೂರ್ ಬಿ ಎಂಬ ಮಹಿಳೆ ಸೈನೈಡ್ ಮಿಶ್ರಿತ ಜ್ಯೂಸ್ ನೀಡಿದ್ದರು. ಮಹಿಳೆ ಆ ಜ್ಯೂಸ್​ ಕುಡಿದ ಕೂಡಲೇ ಮೃತಪಟ್ಟಿದ್ದರು. ಈ ಸರಣಿ ಹಂತಕರು ಇತರ ನಾಲ್ವರನ್ನು ಕೊಲ್ಲಲು ಪ್ರಯತ್ನಿಸಿದ್ದರು, ಆದರೆ ಅವರು ಬದುಕುಳಿದಿದ್ದಾರೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

ಈ ಖತರ್​ನಾಕ್ ಗ್ಯಾಂಗ್ ಯಾರ ಬಳಿ ಚಿನ್ನಾಭರಣ ಅಥವಾ ನಗದು ಹೊಂದಿರುತ್ತಾರೋ ಅಂಥವರನ್ನೇ ಗುರಿಯಾಗಿಸಿಕೊಂಡು ಕೃತ್ಯವೆಸಗುತ್ತಿದ್ದರು ಎನ್ನಲಾಗಿದೆ.

ಈ ಗ್ಯಾಂಗ್ ನಾಲ್ವರ ಕೊಲೆಯಲ್ಲಿ ಭಾಗಿಯಾಗಿದ್ದು, ನಾಗೂರ್ ಬಿ ಎನ್ನುವ ಮಹಿಳೆಯ ಕೊಲೆ ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು ತನಿಖೆ ನಡೆಸಿ ಕೃತ್ಯವನ್ನು ಬಯಲು ಮಾಡಿದ್ದಾರೆ. ಪ್ರಮುಖ ಆರೋಪಿ ವೆಂಕಟೇಶ್ವರಿ ಈ ಹಿಂದೆ ನಾಲ್ಕು ವರ್ಷಗಳ ಕಾಲ ಸ್ವಯಂಸೇವಕಿಯಾಗಿ ಕೆಲಸ ಮಾಡಿದ್ದು, ಕಾಂಬೋಡಿಯಾಗೆ ತೆರಳಿದ್ದು, ಅಲ್ಲಿ ಸೈಬರ್ ಅಪರಾಧಗಳಲ್ಲಿ ಭಾಗಿಯಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಆರೋಪಿಗಳಿಂದ ಸೈನೈಡ್ ಮತ್ತು ಇತರ ದೋಷಾರೋಪಣೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಅವರಿಗೆ ವಿಷವನ್ನು ಪೂರೈಸಿದ ವ್ಯಕ್ತಿಯನ್ನು ಸಹ ಬಂಧಿಸಿದ್ದಾರೆ. ಮಹಿಳೆಯರು ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಮತ್ತು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಬಂಧಿಸಲಾಗಿದೆ ಎಂದು ಗುಂಟೂರು ಪೊಲೀಸ್ ಅಧೀಕ್ಷಕ ಸತೀಶ್ ಕುಮಾರ್ ಹೇಳಿದ್ದಾರೆ. ಅಪರಿಚಿತರೊಂದಿಗೆ ಸುಲಭವಾಗಿ ಸ್ನೇಹ ಬೆಳೆಸಬೇಡಿ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net