ಆಸ್ತಿಗಾಗಿ ತಾಯಿಯ ಕೂದಲನ್ನು ಹಿಡಿದು ಧರಧರನೇ ಎಳೆದೊಯ್ದು, ತಂದೆಗೆ ಕಪಾಳಮೋಕ್ಷ ಮಾಡಿದ ಪಾಪಿ ಮಗ

crime
Published on

ಆಂಧ್ರಪ್ರದೇಶ: ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಒಬ್ಬ ವ್ಯಕ್ತಿ ವಯಸ್ಸಾದ ಮಹಿಳೆಯ ಕೂದಲು ಹಿಡಿದು ಎಳೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಮತ್ತೊಬ್ಬ ವ್ಯಕ್ತಿಗೆ ಕಪಾಳಮೋಕ್ಷ ಮಾಡುತ್ತಿರುವುದು ಕಂಡುಬಂದಿದೆ. ಈ ವ್ಯಕ್ತಿ ಯಾರಿಗೆ ಹೊಡೆಯುತ್ತಿದ್ದಾರೋ ಅವರು ಬೇರಾರೂ ಅಲ್ಲ, ಆ ವ್ಯಕ್ತಿಯ ತಂದೆ ತಾಯಿ ಎಂದು ಹೇಳಲಾಗುತ್ತಿದೆ. ಇದೀಗ ವಿಡಿಯೋ ವೈರಲ್ ಆದ ನಂತರ ಪೊಲೀಸರು ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಆರೋಪಿಯನ್ನು ಶ್ರೀನಿವಾಸುಲು ರೆಡ್ಡಿ ಎಂದು ಗುರುತಿಸಲಾಗಿದ್ದು, ವಿಡಿಯೋದಲ್ಲಿ ಕಾಣುವ ಮಹಿಳೆ ಆತನ ತಾಯಿ ಲಕ್ಷ್ಮಮ್ಮ ಮತ್ತು ತಂದೆ ವೆಂಕಟರಾಮನ್ ಎಂದು ಗುರುತಿಸಲಾಗಿದೆ. ವರದಿ ಪ್ರಕಾರ ಆರೋಪಿ ಭೂ ವಿವಾದದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿದ್ದಾನೆ. ತನ್ನ ತಾಯಿಯ ಕೂದಲನ್ನು ಎಳೆದುಕೊಂಡು ಪದೇ ಪದೆ ಕಪಾಳಮೋಕ್ಷ ಮಾಡುವುದನ್ನು ಕಾಣಬಹುದು. ಎಳೆದೊಯ್ದ ಬಳಿಕ ತಾಯಿ ಮಗನಿಗೆ ಈ ರೀತಿ ಮಾಡಬೇಡ ಎಂದು ಅಳುತ್ತಿರುವುದು ಕೂಡ ಕಂಡು ಬಂದಿದೆ.

ಅಪ್ಪನಿಗೂ ಕಪಾಳಮೋಕ್ಷ 
ವೈರಲ್ ಆಗಿರುವ ವಿಡಿಯೋದಲ್ಲಿ ಮಗನು ತಾಯಿಯನ್ನು ಒದೆಯುತ್ತಿರುವುದನ್ನು ಸಹ ಕಾಣಬಹುದು. ಆಗ ತಾಯಿ ನೆಲದ ಮೇಲೆ ಬೀಳುತ್ತಾಳೆ. ಇದಾದ ನಂತರವೂ ಸುಮ್ಮನಾಗದ ಮಗ ಅವರ ಮೇಲೆ ಹಲ್ಲೆ ನಡೆಸುತ್ತಲೇ ಇದ್ದಾನೆ. ತಾಯಿ ಅಳಲು ಪ್ರಾರಂಭಿಸಿದಾಗ, ಅವನು ಹಿಂದೆ ತಿರುಗಿ ಅಲ್ಲಿ ನಿಂತಿದ್ದ ತನ್ನ ತಂದೆಗೆ ಬಲವಾಗಿ ಕಪಾಳಮೋಕ್ಷ ಮಾಡುತ್ತಾನೆ. ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಮಗ ತನ್ನ ತಾಯಿ ಮತ್ತು ತಂದೆಗೆ ಥಳಿಸಿದ್ದಾನೆ ಎಂದು ಹೇಳಲಾಗುತ್ತಿದೆ.

ಮಗ ಹೆತ್ತವರನ್ನು ಥಳಿಸಿದಾಗ, ಅಲ್ಲಿ ಕೆಲವರು ಇದ್ದಾರೆ, ಆದರೆ ಯಾರೂ ಅವನನ್ನು ತಡೆಯುವ ಧೈರ್ಯವನ್ನು ಮಾಡಲಿಲ್ಲ ಎಂಬುದು ವೈರಲ್ ವೀಡಿಯೊದಲ್ಲಿ ಕಂಡುಬರುತ್ತದೆ. ಪ್ರಕರಣದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಶನಿವಾರ ಆತನನ್ನು ಬಂಧಿಸಿದ್ದಾರೆ.

ಮಾಹಿತಿ ಪ್ರಕಾರ, ಆರೋಪಿ ಶ್ರೀನಿವಾಸುಲು ಅವರ ಪೋಷಕರು ಮೂರು ಎಕರೆ ಜಮೀನನ್ನು ಅವರ ಅಣ್ಣ ಮನೋಹರ್ ರೆಡ್ಡಿಗೆ ನೀಡಿದ್ದರು. ಆ ನಂತರ ಶ್ರೀನಿವಾಸುಲು ಕೋಪಗೊಂಡು ಹೆತ್ತವರಿಗೆ ಗದರಿದನು. ಆದರೆ ಕಿರಿಯ ಮಗನನ್ನು ಕೇಳಿದಾಗ ಆರಂಭದಲ್ಲಿ ಪೇಪರ್‌ಗಳಿಗೆ ಸಹಿ ಹಾಕಲು ನಿರಾಕರಿಸಿದನು ಎಂದು ದಂಪತಿಗಳು ಪೊಲೀಸರಿಗೆ ತಿಳಿಸಿದ್ದಾರೆ. ಇದೇ ವೇಳೆ ಸ್ಥಳೀಯ ಪೊಲೀಸ್ ಇನ್ಸ್ ಪೆಕ್ಟರ್ ಯುವರಾಜು ಮಾತನಾಡಿ, ತಂದೆ-ತಾಯಿಯ ಜೊತೆ ಅನುಚಿತವಾಗಿ ವರ್ತಿಸುವ ವ್ಯಕ್ತಿ ಶಿಕ್ಷೆಗೆ ಅರ್ಹ. ಇಂತಹ ಘಟನೆ ನಡೆದರೆ ಪೋಷಕರು ಮತ್ತು ಹಿರಿಯರು ವರದಿ ಮಾಡಬೇಕು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net