

ಬೆಂಗಳೂರು: ನೆರೆಯ ಆಂಧ್ರಪ್ರದೇಶ ಮತ್ತು ಕೇರಳ ಮಾದರಿಯಲ್ಲಿ ಗ್ರಾಮ ಪಂಚಾಯಿತಿಗಳ ಸಬಲೀಕರಣ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ವ್ಯವಸ್ಥೆ ಸುಧಾರಣೆಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಭೆ ನಡೆದಿದ್ದು, ತಾಲೂಕು, ಜಿಲ್ಲಾ ಪಂಚಾಯಿತಿಗಿಂತ ಗ್ರಾ.ಪಂ. ವ್ಯವಸ್ಥೆ ಮೇಲೆ ಸಭೆ ಹೆಚ್ಚಿನ ಗಮನ ಕೇಂದ್ರೀಕರಿಸಿತು.
ಸಭೆಯಲ್ಲಿದ್ದ ವಿಧಾನ ಪರಿಷತ್ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಈ ಬಗ್ಗೆ ರ್ಚಚಿಸಿ, ಹಲವು ಸಲಹೆ-ಸೂಚನೆ ನೀಡಿದರು. ಆಂಧ್ರ ಮತ್ತು ಕೇರಳ ಮಾದರಿ ವ್ಯವಸ್ಥೆ ಅರಿಯಲು ಉನ್ನತಮಟ್ಟದ ನಿಯೋಗ ಕಳುಹಿಸಲು ನಿರ್ಧರಿಸಲಾಯಿತು.
ಆಸಕ್ತ ಪರಿಷತ್ ಸದಸ್ಯರು ಹಾಗೂ ಇಲಾಖೆಯ ಉನ್ನತಾಧಿಕಾರಿಗಳನ್ನು ಒಳಗೊಂಡ ನಿಯೋಗವು ಇಷ್ಟರಲ್ಲೇ ಅಧ್ಯಯನ ಪ್ರವಾಸ ಕೈಗೊಳ್ಳಲಿದ್ದು, 2 ರಾಜ್ಯಗಳ ಪಂಚಾಯಿತಿ ವ್ಯವಸ್ಥೆ ಹಾಗೂ ಇಲಾಖೆ ಕಾರ್ಯವಿಧಾನ ಅರಿತುಕೊಂಡು ವರದಿ ಸಲ್ಲಿಸಲಿದೆ.
ಸಬಲೀಕರಣ ಪ್ರತಿಪಾದನೆ: ಗ್ರಾ.ಪಂ.ಗಳಿಗೆ ಹೆಚ್ಚಿನ ಅನುದಾನ, ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದ ಹಲವಾರು ಯೋಜನೆಗಳ ಅನುಷ್ಠಾನದ ಜವಾಬ್ದಾರಿಯಿದ್ದು, ಹೆಚ್ಚಿನ ಅಧಿಕಾರ ಕೊಟ್ಟು ಬಲವರ್ಧಿಸಬೇಕಾಗಿದೆ ಎಂದು ಹಲವು ಸದಸ್ಯರು ಸಲಹೆ ನೀಡಿದ್ದಾರೆ. ಆಂಧ್ರಪ್ರದೇಶದಲ್ಲಿ ಕೃಷಿ, ತೋಟಗಾರಿಕೆ, ಆರೋಗ್ಯ, ಶಿಕ್ಷಣ, ಕಂದಾಯ, ಲೋಕೋಪಯೋಗಿ ಸೇರಿ 15ಕ್ಕೂ ಹೆಚ್ಚು ಇಲಾಖೆಗಳ ಸಿಬ್ಬಂದಿಯನ್ನು ಪಂಚಾಯಿತಿಗಳಿಗೆ ನೇಮಿಸಲಾಗಿದೆ. ಇದರಿಂದಾಗಿ ಅನುದಾನ ಸಮರ್ಪಕ ಬಳಕೆ, ಯೋಜನೆಗಳ ಪರಿಣಾಮಕಾರಿ ಜಾರಿಯೊಂದಿಗೆ ಉತ್ತರದಾಯಿತ್ವ ನಿಗದಿಯಾಗಿದೆ. ಅಭಿವೃದ್ಧಿಯ ಫಲ ಸಕಾಲಕ್ಕೆ ಅರ್ಹರಿಗೆ ಲಭಿಸಿ ಉದ್ದೇಶ ಸಫಲವಾಗಿದೆ ಎಂಬ ಮಾಹಿತಿಯನ್ನು ಸಭೆಯಲ್ಲಿ ಹಂಚಿಕೊಳ್ಳಲಾಗಿದೆ.
ಸಮಸ್ಯೆಗಳ ಆಗರ: ರಾಜ್ಯದ ಈಗಿನ ಗ್ರಾ.ಪಂ. ವ್ಯವಸ್ಥೆಯಲ್ಲಿ ಆಡಳಿತ, ಆರ್ಥಿಕ, ತಾಂತ್ರಿಕ, ನಿರ್ವಹಣೆ ಮತ್ತು ಮೇಲ್ವಿಚಾರಣೆ ಎಲ್ಲವೂ ಸಮಸ್ಯೆಗಳ ಆಗರವಾಗಿದ್ದು, ವ್ಯಯಿಸಿದ ಅನುದಾನಕ್ಕೆ ತಕ್ಕಂತೆ ಅಭಿವೃದ್ಧಿ ಕಾರ್ಯಗಳಾಗುತ್ತಿಲ್ಲ. ಪಿಡಿಒ ಹಾಗೂ ಬೇಕಾದ ಸಿಬ್ಬಂದಿ ಕೊರತೆಯಿಂದ ಕ್ರಿಯಾ ಯೋಜನೆ ರೂಪಿಸಲು ಮತ್ತು ಅನುಮೋದಿಸಲು ಹೆಚ್ಚಿನ ಕಾಲಾವಕಾಶ ವಿನಿಯೋಗವಾಗುತ್ತಿದೆ ಎಂಬ ಕಳವಳ ಸಭೆಯಲ್ಲಿ ವ್ಯಕ್ತವಾಗಿದೆ.
ಕೆಲಸಕ್ಕೆ ಅನುಗುಣವಾಗಿ ಡಾಟಾ ಎಂಟ್ರಿ ಆಪರೇಟರ್ಸ್ ಇಲ್ಲದಿರುವುದು, ನೆಟ್ವರ್ಕ್ ಸಮಸ್ಯೆ ಗ್ರಾ.ಪಂ.ಗಳನ್ನು ಕಟ್ಟಿ ಕಾಡುತ್ತಿದ್ದು, ಆದ್ಯತೆ ಮೇಲೆ ಬಗೆಹರಿಸಬೇಕೆಂಬ ಸಲಹೆ ಬಂದಿದೆ.
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ವಿರೋಧ ಪಕ್ಷದ ಮುಖ್ಯ ಸಚೇತಕರಾದ ಎಂ.ನಾರಾಯಣಸ್ವಾಮಿ, ಅಪ್ಪಾಜಿಗೌಡ, ಸದಸ್ಯರಾದ ಕೆ.ಸಿ.ಕೊಂಡಯ್ಯ, ಬಸವರಾಜ ಪಾಟೀಲ್ ಇಟಗಿ, ಎಸ್.ರವಿ, ವಿಜಯ್ಸಿಂಗ್, ಎಂ.ಕೆ.ಪ್ರಾಣೇಶ್, ಸುನಿಲ್ ಸುಬ್ರಮಣ್ಯ, ರಮೇಶ ಗೌಡ, ಪ್ರದೀಪಶೆಟ್ಟರ್, ರಘು ಆಚಾರ್, ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಇದ್ದರು.