

ವಿಶಾಖಪಟ್ಟಣಂ: ಆಂಧ್ರ ಪ್ರದೇಶದ ಶ್ರೀಕಾಕುಳಂನ ಉಪ ಪೊಲೀಸ್ ವರಿಷ್ಠಾಧಿಕಾರಿ (ವಿಶೇಷ ವಿಭಾಗ) ಕೃಷ್ಣ ವರ್ಮಾ ಅವರು ವಿಶಾಖಪಟ್ಟಣಂ ತಮ್ಮ ನಿವಾಸದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿರುವುದು ಕಂಡುಬಂದಿದೆ.
ಡಿಎಸ್ಪಿ ವರ್ಮಾ ಮಗನಿಗೆ ಆರೋಗ್ಯದಲ್ಲಿ ಸಮಸ್ಯೆಯಿದ್ದುದ್ದರಿಂದ ಪತ್ನಿ ಮತ್ತು ಮಗ ಡಿಎಸ್ಪಿಯನ್ನು ಮನೆಯಲ್ಲೇ ಬಿಟ್ಟು ಆಸ್ಪತ್ರೆಗೆ ಹೋಗಿದ್ದರು. ಮರಳಿ ಬಂದು ನೋಡಿದಾಗ ಡಿಎಸ್ಪಿ ನೆಲದ ಮೇಲೆ ಶವವಾಗಿ ಬಿದ್ದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮುವಾಲಾ ವಾಣಿ ಪಲೇಮ್ (ಎಂವಿಪಿ) ಪೊಲೀಸ್ ಠಾಣೆಯ ಪ್ರಾಥಮಿಕ ತನಿಖೆ ಪ್ರಕಾರ ಶುಕ್ರವಾರ ಬೆಳಗ್ಗೆ 10:30 ರಿಂದ ಮಧ್ಯಾಹ್ನ 1:30ರ ನಡುವೆ ಸಾವು ಸಂಭವಿಸಿರಬಹುದೆಂದು ತಿಳಿಸಿದ್ದಾರೆ. ಸಾವಿನ ಬಗ್ಗೆ ಪೊಲೀಸರಿಗೆ ಮಧ್ಯಾಹ್ನ 2 ಗಂಟೆಗೆ ಮಾಹಿತಿ ತಿಳಿದಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಕೆಲವು ವರದಿಗಳ ಪ್ರಕಾರ ಡಿಎಸ್ಪಿ ಆತ್ಮಹತ್ಯೆಗೆ ಶರಣಾಗಿರಬಹುದೆಂದು ಹೇಳಲಾಗಿದೆ.
ಅಪರಾಧದ ಸನ್ನಿವೇಶವನ್ನು ವಿವರಿಸಿರುವ ಎಂವಿಪಿ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಷಣ್ಮುಖ ರಾವ್, ಮನೆಯಲ್ಲಿ ನೇಣು ಹಾಕಿಕೊಳ್ಳಲು ಹಗ್ಗ ಕಟ್ಟುವಾಗ ಕುರ್ಚಿ ಅಥವಾ ಟೇಬಲ್ನಿಂದ ಕೆಳಗೆ ಬಿದ್ದಂತೆ ಕಾಣುತ್ತದೆ. ಅಲ್ಲದೆ, ಕತ್ತಿನಲ್ಲಿ ಹಗ್ಗದು ಗುರುತು ಸಹ ಇದೆ. ಪ್ರಕರಣ ಕುರಿತು ತನಿಖೆ ನಡೆಯುತ್ತಿದೆ. ಇದು ಆತ್ಮಹತ್ಯೆಯೋ ಎಂಬುದು ತನಿಖಾ ನಂತರವಷ್ಟೇ ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.
ಮೃತದೇಹವನ್ನು ಕಿಂಗ್ ಜಾರ್ಜ್ ಆಸ್ಪತ್ರೆಗೆ ಶವಪರೀಕ್ಷೆಗಾಗಿ ಕಳುಹಿಸಲಾಗಿದೆ. ಅನಾರೋಗ್ಯದಿಂದ ಕೆಲ ದಿನಗಳಿಂದ ವರ್ಮಾ ಅವರು ರಜೆಯಲ್ಲಿದ್ದರು. ಅವರು ಶ್ವಾಸಕೋಸ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಷಣ್ಮುಖ ರಾವ್ ಹೇಳಿದ್ದಾರೆ.
ವರದಿ ಪ್ರಕಾರ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಕೆಲಸ ಶುರು ಮಾಡಿದ ವರ್ಮಾ, ವೈಜಾಗ್ ಮೂರು ಠಾಣೆಗಳಲ್ಲಿ ಇನ್ಸ್ಪೆಕ್ಟರ್ ಆಗಿದ್ದರು. ಶ್ರೀಕಾಕುಳಂಗೆ ವರ್ಗಾವಣೆ ಆಗುವ ಮುನ್ನ ವೈಜಾಗ್ನಲ್ಲಿ ಸಹಾಯಕ ಪೊಲೀಸ್ ಆಯುಕ್ತರಾಗಿ (ಸಂಚಾರಿ) ಸೇವೆ ಸಲ್ಲಿಸಿದ್ದರು. (ಏಜೆನ್ಸೀಸ್)