

ಹೈದರಾಬಾದ್: ವಿಧಾನ ಪರಿಷತ್ತನ್ನು ರದ್ದುಗೊಳಿಸುವ ನಿರ್ಣಯವನ್ನು ಆಂಧ್ರ ಪ್ರದೇಶದ ಸಚಿವ ಸಂಪುಟ ಸೋಮವಾರ ಅನುಮೋದನೆ ನೀಡಿದೆ.
ಆಂಧ್ರ ಸರ್ಕಾರದ ಮೂರು ರಾಜಧಾನಿ ಮಸೂದೆಯನ್ನು ತಮ್ಮ ವಿವೇಚಾನಾಧಿಕಾರ ಬಳಸಿ ವಿಧಾನ ಪರಿಷತ್ತಿನ ಮುಖ್ಯಸ್ಥರು ಆಯ್ಕೆ ಸಮಿತಿಗೆ ಶಿಫಾರಸ್ಸು ಮಾಡಿದ್ದರು. ಇದರ ಬೆನ್ನಲ್ಲೇ ಆಂಧ್ರ ಸರ್ಕಾರ ಈ ನಿರ್ಧಾರ ಕೈಗೊಂಡಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.
ವಿಧಾನ ಪರಿಷತ್ತಿನಲ್ಲಿ ಎರಡು ದಿನಗಳ ಕಾಲ ನಡೆದ ಚರ್ಚೆಯ ಮೇಲೆ ಗುರುವಾರ ಆಂಧ್ರದ ವಿಧಾನಸಭೆಯಲ್ಲಿ ಚರ್ಚೆ ನಡೆಸಲಾಗಿತ್ತು. ಈ ವೇಳೆ ಸಿಎಂ ಜಗನ್ ಮೋಹನ್ ರೆಡ್ಡಿ ಅವರು ಸ್ಪೀಕರ್ ಬಳಿ ವಿಧಾನ ಪರಿಷತ್ತನ್ನು ಉಳಿಸಿಕೊಳ್ಳಬೇಕೋ ಅಥವಾ ಬೇಡವೋ ಎಂಬುದರ ಬಗ್ಗೆ ಚರ್ಚಿಸಲು ಸೋಮವಾರ ಅವಕಾಶ ಕೇಳಿದ್ದರು.
ಇದೀಗ ವಿಧಾನ ಪರಿಷತ್ತನ್ನು ತೆಗೆದು ಹಾಕಲು ಸಂಪುಟ ಅನುಮೋದನೆ ನೀಡಿದೆ ಎಂದು ವೈಎಸ್ಆರ್ಸಿಪಿಯ ಶಾಸಕ ಗುಡಿವಡ ಅಮರನಾಥ್ ತಿಳಿಸಿದ್ದಾರೆ. ಸರ್ಕಾರದ ನಿರ್ಣಯ ಬಗ್ಗೆ ಪ್ರತಿಪಕ್ಷಗಳಿಂದ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದು, ಈ ಬಗ್ಗೆ ಮಾತನಾಡಿರುವ ತೆಲುಗು ದೇಶಂ ಪಕ್ಷದ(ಟಿಡಿಪಿ) ಸಂಸದ ಕನಕಮೇದಾಳ ರವೀಂದ್ರ ಕುಮಾರ್, ಸಂವಿಧಾನದ ಮೌಲ್ಯಗಳನ್ನು ಆಂಧ್ರ ಸರ್ಕಾರ ಹಿಂಬಾಲಿಸುತ್ತದೆ ಎಂಬ ನಿರೀಕ್ಷೆ ಇತ್ತು. ಆದರೆ, ದುರಾದೃಷ್ಟವಶಾತ್ ದೋಷಯಕ್ತ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ ಎಂದಿದ್ದಾರೆ.
ವಿಧಾನ ಪರಿಷತ್ತನ್ನು ಬೇರೆ ಕಾರಣಗಳಿಗೆ ತೆಗೆದುಹಾಕಬಹುದು. ಆದರೆ, ಮೂರು ರಾಜಧಾನಿ ಮಸೂದೆಯನ್ನು ಆಯ್ಕೆ ಸಮಿತಿಗೆ ಕಳಹಿಸಿದ್ದಕ್ಕೆ ಪರಿಷತ್ತನ್ನು ತೆಗೆದುಹಾಕುವ ನಿರ್ಧಾರ ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. (ಏಜೆನ್ಸೀಸ್)