ಅನಂತಕುಮಾರ ಹೆಗಡೆ ಮಾತಿನ ಕಿಡಿ; ಬಿಜೆಪಿ ಸಿಡಿಮಿಡಿ

Congress BJP
Published on

ಬೆಂಗಳೂರು: ಭಟ್ಕಳ ಮಸೀದಿ ಹಾಗೂ ಸಿಎಂ ಸಿದ್ದರಾಮಯ್ಯ ಕುರಿತ ಸಂಸದ ಅನಂತಕುಮಾರ್ ಹೆಗಡೆ ಹೇಳಿಕೆ ವಿವಾದ ಹುಟ್ಟಿಹಾಕುತ್ತಿದ್ದಂತೆಯೇ ಬಿಜೆಪಿ ದೂರ ಅಂತರ ಕಾಯ್ದುಕೊಂಡಿದೆ. ಅಲ್ಲದೆ, ಹೆಗಡೆಯವರ ಮಾತಿನ ಕಿಡಿಗೆ ಕೇಸರಿಪಡೆ ನಾಯಕರು ಒಳಗೊಳಗೆ ಸಿಡಿಮಿಡಿಗೊಂಡಿದ್ದಾರೆ.

ಹೆಗಡೆ ಧಾಟಿಯಲ್ಲೇ ನೇರವಾಗಿ ಪ್ರತಿಕ್ರಿಯಿಸಲು ನಿರಾಕರಿಸಿದರು. ಆದರೆ ಹೆಗಡೆ ಮಾತು ಅವರ ಸಂಸ್ಕೃತಿ ತೋರಿಸುತ್ತದೆ ಎಂದ ಸಿಎಂ ಸಿದ್ದರಾಮಯ್ಯಗೆ ಭಾನುವಾರ ತಿರುಗೇಟು ನೀಡಿ, ಪ್ರಧಾನಿ ಬಗ್ಗೆ ಅವರ ಆಡಿದ ಮಾತುಗಳನ್ನು ನೆನಪಿಸಿದರು.

ರಾಮಮಂದಿರದ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರ ನಡವಳಿಕೆ ಖಂಡಿಸುವುದನ್ನು ಒಪ್ಪಿಕೊಳ್ಳುವೆ. ಆದರೆ ವೈಯಕ್ತಿಕ ನಿಂದನೆಯನ್ನು ನಮ್ಮ ಪಕ್ಷವೂ ಸೇರಿ ಯಾವುದೇ ರಾಜಕೀಯ ಪಕ್ಷ ಸಹಸುವುದಿಲ್ಲ ಎಂದು ಆರ್.ಅಶೋಕ್ ಹೇಳಿದರು.

ಏಕವಚನದಲ್ಲಿ ಮಾತುಗಳನಾಡುವುದರಲ್ಲಿ ಸಿದ್ದರಾಮಯ್ಯ ಸದಾ ಮುಂದು. ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಏಕವಚನವನ್ನು ಬಳಸಿದ ಉದಾಹರಣೆಗಳಿವೆ. ಹಾಗಿದ್ದರೆ ಸಿದ್ದರಾಮಯ್ಯಅವರದು ಯಾವ ಸಂಸ್ಕೃತಿ ? ಎಂದು ಕೇಳಿದರು.

ಮೋದಿ ಸಲಹೆ ನೆನಪು

ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಪ್ರತಿಕ್ರಿಯಿಸಿ, ಭಟ್ಕಳ ಚಿನ್ನದಪಳ್ಳಿ ಮಸೀದಿ ನಿರ್ನಾಮ ಆಗುತ್ತದೆ ಎನ್ನುವುದು ಹೆಗಡೆಯವರ ವೈಯಕ್ತಿಕ ಹೇಳಿಕೆ. ಸಾಮರಸ್ಯ, ಏಕತೆ, ಎಲ್ಲ ಧರ್ಮಗಳನ್ನು ಗೌರವಿಸಬೇಕು ಎಂಬ ಪ್ರಧಾನಿ ಮೋದಿಯವರ ಸಲಹೆ ನೆನಪಿಸ ಬಯಸುವೆ.

ದೇವಸ್ಥಾನಗಳು ಮಸೀದಿಗಳಾಗಿರುವ ನೋವಿದೆ. ಇತಿಹಾಸದಲ್ಲಿ ಈ ತರಹದ ನೋವಿನ ಸಂಗತಿಗಳಿವೆ. ಆದರೆ ಈ ವಿಚಾರ ಕೈಗೆತ್ತಿಕೊಳ್ಳುವ ಸಂದರ್ಭವಿದಲ್ಲ, ಪಕ್ಷದ ಮುಂದೆಯೂ ಇಲ್ಲವೆಂದು ತಳ್ಳಿಹಾಕಿದರು.

ಸಿಎಂ ಬಗ್ಗೆ ಏಕವಚನದ ಪ್ರಯೋಗ ಒಪ್ಪಿತವಲ್ಲ. ಪ್ರತಿಯೊಬ್ಬರಿಗೂ ಗೌರವ ಕೊಡಬೇಕು, ಇಂತಹ ತಪ್ಪುಗಳಾದಾಗ ಸರಿಪಡಿಸಿಕೊಳ್ಳಬೇಕು.ಆದರೆ ರಾಜಕೀಯದಲ್ಲಿ ಮಾತು ಹಿಡಿತ ತಪ್ಪಿ ಹೋಗುವುದು ಸಹಜ.

ಸಿದ್ದರಾಮಯ್ಯ ಸೇರಿ ಹಲವರು ಹೀಗೆ ಮಾತನಾಡಿದ್ದಾರೆ. ಸದನದ ಒಳ-ಹೊರಗೆ ತೊಡೆ ತಟ್ಟಿದವರೂ ಇದ್ದಾರೆ. ಹೆಗಡೆಯವರ ಹೇಳಿಕೆ ಸಮರ್ಥಿಸಿಕೊಳ್ಳುತ್ತಿಲ್ಲ. ಆದರೆ ಅನಂತಕುಮಾರ್ ಹೆಗಡೆ ವಿರುದ್ಧ ಕೇಸ್ ಹಾಕುವುದಾದರೆ ಮೊದಲಿಗೆ ಕಾಂಗ್ರೆಸ್ ನಾಯಕರ ವಿರುದ್ಧ ಕೇಸ್ ಹಾಕಲಿ ಎಂದು ಡಾ.ಅಶ್ವತ್ಥ ನಾರಾಯಣ ಸವಾಲೆಸೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net