

ಬೆಂಗಳೂರು: ರಾಜ್ಯದ ಅಭಿವೃದ್ಧಿಗೆ ಪಕ್ಷ ಭೇದ ಮರೆತು ಕಾರ್ಯ ನಿರ್ವಹಿಸುತ್ತಿದ್ದ ನಾಯಕ ಅನಂತಕುಮಾರ್, ಅವರು ರಾತ್ರಿ ಹಗಲೆನ್ನದೆ ರಾಜ್ಯದ ಅಭಿವೃದ್ಧಿಯ ಬಗ್ಗೆ ಚಿಂತಿಸುತ್ತಿದ್ದ ವ್ಯಕ್ತಿಯನ್ನು ರಾಜ್ಯ ಕಳೆದುಕೊಂಡಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.
ಗವಿಪುರದ ಮಗಜಿ ಧೋಂಡುಸಾ ಸಭಾಂಗಣದಲ್ಲಿ ಆಯೋಜಿಸಿದ್ದ ‘ಅನಂತ ನಮನ ೬೪’ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ಹಸಿರು ಭಾನುವಾರ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ದೇವರು ಅನಂತಕುಮಾರ್ ಅವರ ವಿಷಯದಲ್ಲಿ ಕ್ರೂರಿ ಎನ್ನುವುದು ನನ್ನ ಭಾವನೆ. ಯಾವುದೇ ದುರಭ್ಯಾಸ ಇಲ್ಲದೆ ಇರುವ ಅವರನ್ನು ಇಷ್ಟು ಬೇಗ ಕರೆದು ಕೊಂಡಿದ್ದು ಸರಿಯಲ್ಲ. ಅವಕಾಶ ಇದ್ದಾಗ ಎಲ್ಲರಿಗೂ ಒಳ್ಳೆಯದನ್ನು ಮಾಡುವ ಸ್ವಭಾವ ಅವರದ್ದಾಗಿತ್ತು. ಅನಂತಕುಮಾರ್ ಅವರ ಜೀವನ ನೋಡಿದರೆ ತಮ್ಮ ಸ್ವಂತಕ್ಕೆ ಏನು ಇಲ್ಲದೆ ಎಲ್ಲವನ್ನೂ ಬೇರೆಯವರಿಗೆ ಮುಡಿಪಾಗಿ ಇಟ್ಟಿದ್ದರೂ ಎಂದು ಹೇಳಿದರು.
ಚುನಾವಣೆ ಖರ್ಚಿಗೆ ಹಣ ನೀಡಿ ಪ್ರೋತ್ಸಾಹ:
೧೯೮೫ ರಲ್ಲಿ ನಾನು ಪದವಿ ಅಂತಿಮ ವರ್ಷದಲ್ಲಿ ಓದುತ್ತಿದ್ದಾಗ ನನಗೆ ವಿಧಾನ ಸಭೆಗೆ ಸ್ಪರ್ಧಿಸುವ ಅವಕಾಶ ದೊರೆಯಿತು. ವಿದ್ಯಾರ್ಥಿ ಹೋರಾಟದ ಮೂಲಕ ಪರಿಚಯವಿದ್ದ ಅನಂತಕುಮಾರ್ ಅವರು ತಮ್ಮ ಸ್ನೇಹಿತರೊಂದಿಗೆ ಸೇರಿಕೊಂಡು ಆ ದಿನಗಳಲ್ಲಿ ದೊಡ್ಡ ಮೊತ್ತವಾದ ೫ ಸಾವಿರ ರೂಪಾಯಿಗಳನ್ನು ನೀಡಿ ಪ್ರೋತ್ಸಾಹಿಸಿದ್ದರು ಎಂದು ಆ ದಿನಗಳನ್ನು ನೆನಪಿಸಿಕೊಂಡರು.
ಬೆಂಗಳೂರಿಗೆ ಮೆಟ್ರೋ ತಂದವರು:
ಮೊನೊ ರೈಲೋ ಅಥವಾ ಮೆಟ್ರೋ ರಿಲೋ ಎನ್ನುವ ಗೊಂದಲದಲ್ಲಿ ಇದ್ದ ಸಂದರ್ಭದಲ್ಲಿ ಆಗಿನ ಕೇಂದ್ರ ನಗರಾಭಿವೃದ್ಧಿ ಸಚಿವರಾಗಿದ್ದ ಅನಂತಕುಮಾರ್, ರಾಜ್ಯ ನಗರಾಭಿವೃದ್ಧಿ ಸಚಿವನಾಗಿದ್ದ ನನ್ನನ್ನು ಹಾಗೂ ಇನ್ನಿತರ ೫ ಜನ ಸಚಿವರು ಮತ್ತು ಅಧಿಕಾರಿಗಳನ್ನು ಹೊರದೇಶಗಳಿಗೆ ಅಧ್ಯಯನ ಮಾಡಲು ಕಳುಹಿಸಿ ಕೊಟ್ಟಿದ್ದರು. ಆ ಅಧ್ಯಯನ ಪ್ರವಾಸದ ನಂತರ ಹಾಗೂ ದೆಹಲಿಯ ಮೆಟ್ರೋ ನೋಡಿ ಕೊನೆಯಲ್ಲಿ ಬೆಂಗಳೂರಿಗೆ ಮೆಟ್ರೋ ರೈಲೇ ಒಳ್ಳೆಯದು ಎಂದು ನಿರ್ಧಾರಕ್ಕೆ ಬರಲಾಯಿತು. ಬೆಂಗಳೂರಿಗೆ ಮೆಟ್ರೋ ತರಲು ನೂರು ಜನರು ತಾವೇ ಕಾರಣ ಎಂದು ಹೇಳಿದರು ಅದು ತಪ್ಪು. ಅದಕ್ಕೆ ಮೂಲ ಕಾರಣ ಅನಂತಕುಮಾರ್ ಕಾರಣ ಎಂದು ಹೇಳಿದರು.
ರಾತ್ರೋ ರಾತ್ರಿ ಅಫಿಡವಿಟ್ ತಿದ್ದಿಸಿದ್ದರು:
ರಾಜ್ಯ ನಾಯಕರು ದೆಹಲಿಗೆ ಯಾವುದೇ ಕೆಲಸಕ್ಕೆ ಹೋದರು ತಮ್ಮ ಕಚೇರಿಯಲ್ಲೇ ಸಂಬಂದಪಟ್ಟ ಸಚಿವರನ್ನು ಕರೆಯಿಸಿ ಕೆಲಸ ಆಗುವಂತೆ ನಿರ್ವಹಣೆ ಮಾಡುತ್ತಿದ್ದರು. ಇದೇ ರೀತಿ ಕೆಲವು ವರ್ಷಗಳ ಹಿಂದೆ ಕಾವೇರಿ ವಿವಾದ ಆದಾಗ, ಆಗಿನ ಜಲಸಂಪನ್ಮೂಲ ಸಚಿವರಾದ ಉಮಾ ಭಾರತಿ ಅವರು ನ್ಯಾಯಾಲಯಕ್ಕೆ ಸಲ್ಲಿಸಬೇಕಾದ ಅಫಿಡವಿಟ್ ಅನ್ನು ತಿದ್ದಿಸಿ ಸಲ್ಲಿಸುವಂತೆ ಮಾಡಿದ್ದರು. ಈ ಬಾರಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಮನೆಯಲ್ಲಿ ಕುಳಿತಾಗ ಅನಂತಕುಮಾರ್ ಇದ್ದಿದ್ದರೆ ನಮಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ನೆನಪಿಸಿ ಕಂಡಿದ್ದನ್ನು ತಿಳಿಸಿದರು. ರಾಜ್ಯದ ಅಭಿವೃದ್ಧಿ ವಿಷಯ ಬಂದಾಗ ಪಕ್ಷ ಭೇದ ಮರೆತು ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿದ್ದರು. ಇಂದು ಅನಂತಕುಮಾರ್ ಇದ್ದಿದ್ದರೆ ನಮಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮಾತನಾಡಿ, ತೇಜಸ್ವಿನಿ ಅನಂತ ಕುಮಾರ್ ಅವರು ಅದಮ್ಯ ಚೇತನ ಸಂಸ್ಥೆಯ ಮೂಲಕ ಅನಂತಕುಮಾರ್ ಅವರ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಅವರಿಗೆ ಇನ್ನೂ ಹೆಚ್ಚಿನ ಶಕ್ತಿ ದೇವರು ಕೊಡಲಿ ಎಂದರು.
ಕಾರ್ಯಕ್ರಮದಲ್ಲಿ ಅದಮ್ಯ ಚೇತನ ಮುಖ್ಯಸ್ಥೆ ಡಾ.ತೇಜಸ್ವಿನಿ ಅನಂತಕುಮಾರ್, ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಕೃಷ್ಣಾ ಭಟ್, ಪದ್ಮವಿಭೂಷಣ ವಿ.ಕೆ ಅತ್ರೆ, ಮಾಜಿ ಉಮುಖ್ಯಮಂತ್ರಿ ಗೋವಿಂದ ಕಾರಜೋಳ, ಆರ್‌ಎಸ್‌ಎಸ್‌ನ ಹಿರಿಯ ಕ್ಷೇತ್ರೀಯ ಸಂಘ ಚಾಲಕರಾದ ವಿ.ನಾಗರಾಜ್, ಸೇರಿ ಇತರರು ಉಪಸ್ಥಿತರಿದ್ದರು.
ತೇಜಸ್ವಿನಿ ಅನಂತಕುಮಾರ್ ಅವರು ಉತ್ತಮ ನಾಯಕಿ. ಕಳೆದ ೪೦ ವರ್ಷಗಳಿಂದ ಅನಂತಕುಮಾರ್ ಅವರ ಹಿಂದೆ ನಿಂತು ಉತ್ತಮ ಕಾರ್ಯಗಳನ್ನು ಮಾಡಿದ್ದೀರಿ. ಧೈರ್ಯದಿಂದ ಮುಂದೆ ನುಗ್ಗಬೇಕು. ನೀವು ಜನಗಳ ಪ್ರತಿನಿಧಿ ಆಗಬೇಕು. ನಿಮ್ಮ ಹಿಂದೆ ದೊಡ್ಡ ಶಕ್ತಿ ಇದೆ. ಧೈರ್ಯ ಮಾಡಿ ಮುಂದೆ ನುಗ್ಗಿ ನಿಮ್ಮ ಜತೆ ಜನರಿದ್ದಾರೆ.
ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ
ಅನಂತಕುಮಾರ್ ಮತ್ತು ನಾನು ರಾಜ್ಯ ಸುತ್ತಿ ಪಕ್ಷವನ್ನು ಬೆಳೆಸಿದೆವು. ಇಂದು ನಮ್ಮ ಪಕ್ಷ ಈ ಹಂತಕ್ಕೆ ಬರಲು ಪ್ರಮುಖ ಕಾರಣ ಅನಂತಕುಮಾರ್. ಅವರು ಇನ್ನೂ ಹೆಚ್ಚಿನ ಕಾಲ ಇರಬೇಕಾಗಿತ್ತು. ರಾಜ್ಯಕ್ಕೆ ಹಾಗೂ ಪಕ್ಷಕ್ಕೆ ಅವರ ಮಾರ್ಗದರ್ಶನ ಅಗತ್ಯವಿತ್ತು. ನಾವು ಅವರನ್ನು ಕಳೆದುಕೊಂಡು ತಬ್ಬಲಿಗಳಾಗಿದ್ದೇವೆ.
ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ