ಅನಂತ ಮತ ಅನಂತ ಪಥ

ramakrishna Paramahamsa
Published on
ಪರಮಹಂಸ ನುಡಿದೀಪ
ಈ ಜಗತ್ತಿನಲ್ಲಿ ನಾವು ಸಾಮಾನ್ಯವಾಗಿ ಕಾಣುವುದು ಅನಂತವಾದ ಮತಗಳು ಹಾಗೆಯೇ ಅನಂತ ರೀತಿಯ ಪಥಗಳನ್ನು. ಯಾರೊಬ್ಬರೂ ಒಂದೇ ಮತ-ಪಥದಲ್ಲಿ ಪಥಿಸುತ್ತಿರುವುದು ವಿರಳ ಎನ್ನಬಹುದು. ಜನರು ಕಂಡ ಕಂಡ ದೇವಾಲಯ, ತೀರ್ಥಕ್ಷೇತ್ರ, ಇತ್ಯಾದಿಗಳಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಆದರೆ ಅವರ ಆಂತರ್ಯದಲ್ಲಿ ಒಂದು ನಿರ್ದಿಷ್ಟವಾದ ಗುರಿ, ರೀತಿ, ನೀತಿ, ಮಾರ್ಗವಿರದೆ ಗಾಳಿ ಬಂದಂತೆಲ್ಲಾ ತೂರಿಕೊಂಡು ಇಡೀ ಜೀವನವನ್ನು ಈ ತೆರನಾಗಿ ಸಾಗಿಸಿ ಅಂತ್ಯದಲ್ಲಿ ಯಾವುದೇ ಗುರಿ ತಲುಪದೆ ನಿರಾಶಾವಾದಿಗಳಾಗುತ್ತಾರೆ.

ಇಲ್ಲಿ ಮತ್ತೊಂದು ಗುಂಪಿನ ಜನರಿರುತ್ತಾರೆ. ಅವರು ಸೋಮವಾರ ಶಿವ, ಮಂಗಳವಾರ ದುರ್ಗೆ, ಬುಧವಾರ ಕೃಷ್ಣ, ಗುರುವಾರ ರಾಯರ ಮಠ, ಶುಕ್ರವಾರ ಚೌಡೇಶ್ವರಿ, ಶನಿವಾರ ವೆಂಕಟೇಶ, ಭಾನುವಾರ ಇನ್ಯಾವುದೋ ಮಂದಿರ ಎಂದು ಪೂರ್ಣ ವಾರವೆಲ್ಲಾ ಅಲೆಯುತ್ತಲೇ ಇರುತ್ತಾರೆ. ಇವರಲ್ಲಿ ನಿಶ್ಚಿತವಾದ ಒಂದು ಗುರಿ, ವಿಚಾರ, ಚಿಂತನೆ ಕಾಣುವುದು ದುರ್ಲಭ. ಈ ತೆರನಾಗಿ ದೇವಾಲಯಗಳಿಗೆ,

ತೀರ್ಥಕ್ಷೇತ್ರಗಳಿಗೆ ಹೋಗುವುದು ತಪ್ಪು ಎಂದಲ್ಲ, ಬದಲಾಗಿ ಒಂದು ನಿಶ್ಚಿತ ಮನಃಸ್ಥಿತಿಯಿಂದ ಆ ಪರಮಾತ್ಮ ಒಬ್ಬನೇ, ಆ ದಿವ್ಯ ಶಕ್ತಿ ಒಂದೇ ಎಂಬ ಮನೋ ಸ್ಥಿತಿಯಲ್ಲಿ ಭೇಟಿ ನೀಡಿದರೆ ಒಳಿತು. ಭಗವದ್ ಶಕಿ ಒಂದೇ ಎಂಬ ನಿಶ್ಚಲ ಮನಸ್ಸಿನಿಂದ ಪೂಜೆಗೈದಾಗ ಮಾತ್ರ ಮಾನವ ದೈವತ್ವದೆಡೆಗೆ ಪಥಿಸಲು ಸಾಧ್ಯ! ಸನಾತನ ಧರ್ಮದಲ್ಲಿ ಒಂದು ಶ್ರೇಷ್ಠತಮವಾದ ಶ್ಲೋಕವಿದೆ. ಆ ಶ್ಲೋಕದ ಅರ್ಥವೂ ಅದ್ಭುತವಾಗಿದೆ.

ಯಂ ಶೈವಾಃ ಸಮುಪಾಸತೇ ಶಿವ ಇತಿ ಬ್ರಹ್ಮೇತಿ ವೇದಾಂತಿನೋ| ಬೌದ್ದಾ ಬುದ್ದ ಇತಿ ಪ್ರಮಾಣಪಟವಃ ಕರ್ತೆತಿ ನೈಯಾಯಿಕಾಃ| ಅರ್ಹನ್ನಿತ್ಯಥ್ ಜೈನ ಶಾಸನರತಾಃ ಕಮೇತಿ ಮೀಮಾಂಸಕಾಃ| ಸೊà—ಯಂ ನೋ ವಿದಧಾತು ವಾಂಛಿತಫಲಂ ತೈಲೋಕ್ಯನಾಥೋ ಹರಿಃ |

ಶೈವರು ಶಿವನೆಂದೂ, ವೇದಾಂತಿಗಳು ಬ್ರಹ್ಮವೆಂದೂ, ಬೌದ್ದರು ಬುದ್ದನೆಂದೂ, ವಿಚಾರಪಟುಗಳಾದ ನೈಯಾಯಕರು ಕರ್ತೃವೆಂದೂ, ಜೈನ ಶಾಸನವನ್ನು ಅನುಸರಿಸುವವರು ಅರ್ಹತ್ ಎಂದೂ, ಮೀಮಾಂಸಕರು ಕರ್ಮವೆಂದೂ ಯಾರನ್ನು ಉಪಾಸಿಸುವರೋ, ಅಂತಹ ತ್ರೈಲೋಕ್ಯನಾಥನಾದ ಹರಿಯು ನಿಮ್ಮ ಇಷ್ಟ ಫಲಂಗಳನ್ನು ಕರುಣಿಸಲಿ. ಇದು ಪ್ರತಿಯೊಬ್ಬರಿಗೂ ಅನ್ವಯವಾಗುವಂತಹ ಅದ್ಭುತ ಶ್ಲೋಕ.

ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರು ಈ ಯುಗಕ್ಕೆ ನೀಡಿದ ಸಂದೇಶದ ಸಾರವೇ ಇದು. (ಜತೋ ಮತ್, ತತೋ ಪಥ್) ಎಂದರೆ ಅನಂತಮತ ಅನಂತ ಪಥ. ಯಾರೊಬ್ಬರೂ ಈ ಜಗತ್ತಿನಲ್ಲಿ ನನ್ನ ಮತವೇ, ಪಥವೇ ಹಿರಿಯದು, ಅದ್ಭುತ ಹಾಗೂ ಏಕೈಕ ಎಂದು ಹೇಳುವಂತಿಲ್ಲ. ಅವರು ಹೇಳುತ್ತಿದ್ದರು: ಜನರು ಅನೇಕ ರೀತಿಯವರಿದ್ದಾರೆ. ಸರೋವರದ ದಡಕ್ಕೆ ಬಂದಾಗ ಅಲ್ಲಿರುವ ಜಲವನ್ನು ಪಾನಿ, ನೀರು, ಅಕ್ವಾ, ವಾಟರ್ ಎಂದೆಲ್ಲಾ ಕರೆಯುತ್ತಾರೆ. ಆದರೆ ಅವರೆಲ್ಲಾ ಕರೆದಂತೆ ನೀರು ಬದಲಾಗುವುದಿಲ್ಲ. ನೀರು ನೀರಾಗಿಯೇ ಉಳಿದುಕೊಂಡಿರುತ್ತದೆ. ಹಾಗೆಯೇ ಆ ದಿವ್ಯ ಅನಂತ ಶಕ್ತಿಯನ್ನು ಜನರು ನಾನಾ ರೀತಿಯಲ್ಲಿ ಕರೆಯುವುದು ಸಾಮಾನ್ಯ. ಹಾಗೆಂದಾಕ್ಷಣಕ್ಕೆ ಆ ಅನಂತ ಶಕ್ತಿ ತನ್ನ ಸ್ವರೂಪವನ್ನಾಗಲೀ, ಶಕ್ತಿಯನ್ನಾಗಲೀ ಬದಲಿಸುವುದಿಲ್ಲ. ದೇವನೊಬ್ಬ ನಾಮ ಹಲವು. ಈ ಹಿನ್ನೆಲೆಯಲ್ಲಿ ಕ್ರಿ.ಶ.1500ರ ಸುಮಾರಿಗೆ ಜೀವಿಸಿದ್ದ ಮುಪ್ಪಿನ ಷಡಕ್ಷರಿ ಅವರ ತತ್ವಪದವೊಂದು ಹೀಗಿದೆ.

ಸಕಲಕೆಲ್ಲಕೆ ನೀನು ಅಕಲಂಕ ಗುರುವೆಂದು/ ನಿಖಿಲ ಶಾಸ್ತ್ರಗಳು ಪೇಳುತಿಹವು/ಅವರವರ ಭಾವಕ್ಕೆ ಅವರವರ ಭಕುತಿಗೆ/ಅವರವರಿಗೇ ದೇವ ನೀನೊಬ್ಬನೇ ...| - ಈ ತತ್ವ ಪದವನ್ನು ಈ ವಿಶ್ವವೇನಾದರೂ ಅರಿತೊಡೆ ಇಡೀ ವಿಶ್ವವೇ ಆನಂದವನವಾಗಿ ಬದಲಾಗುವುದರಲ್ಲಿ ಸಂದೇಹವಿಲ್ಲ.

ರಾಮಕೃಷ್ಣರು ತಮ್ಮ ಭಕ್ತರೊಂದಿಗೆ ಈ ಸಂಬಂಧ ನಡೆಸಿದ ಸಂಭಾಷಣೆ ಗಮನಿಸಿ: ರಾಮಕೃಷ್ಣರು: ನೋಡಿದೆಯಾ ಎಷ್ಟೊಂದು ಮತಗಳಿವೆ? ಪ್ರತಿ ಮತವೂ ಒಂದೊಂದು ಪಥ. ಭಕ್ತ: ಹಾಗಾದರೆ ನಮಗೆ ಮಾರ್ಗ? ರಾಮಕೃಷ್ಣರು: ಯಾವುದಾದರೊಂದನ್ನು ಬಲವಾಗಿ ಹಿಡಿದುಕೊಳ್ಳಬೇಕು. ಮನೆಯ ಛಾವಣಿಗೆ ಹತ್ತಿ ಹೋಗಬೇಕಾದರೆ ಕಲ್ಲಿನ ಮೆಟ್ಟಿಲು ಸಾಲಿನಿಂದಾಗಲಿ, ಏಣಿಯಿಂದಾಗಲೀ, ಹಗ್ಗದಿಂದಾಗಲಿ ಹತ್ತಿ ಹೋಗಿಬಿಡಬಹುದು. ಆದರೆ ಇದರ ಮೇಲೆ ಒಂದಷ್ಟು ದೂರ, ಅದರ ಮೇಲೆ ಒಂದಷ್ಟು ದೂರ ಬದಲಾಯಿಸುತ್ತಾ ಹತ್ತುತ್ತಿದ್ದರೆ ಛಾವಣಿಯನ್ನು ಮುಟ್ಟಲಾಗುವುದಿಲ್ಲ. ಯಾವುದಾದರೂ ಒಂದನ್ನು ಹಿಡಿದು ಬಿಡದೆ ಹತ್ತಬೇಕು. ಹಾಗೆ ಭಗವಂತನ ಸಾಕ್ಷಾತ್ಕಾರ ದೊರೆಯಬೇಕಾಗಿದ್ದರೆ ಯಾವುದಾದರೊಂದು ಮಾರ್ಗವನ್ನು ಹಿಡಿದು ಮುಂದುವರಿಯಬೇಕು.- ಇದೇ ಪರಮಹಂಸರು ಈ ಯುಗಕ್ಕೆ ನೀಡಿದ ಅದ್ಭುತ ಸತ್ಯಮಾರ್ಗ.

                                                          (ಲೇಖಕರು ಶ್ರೀ ರಾಮಕೃಷ್ಣ ಸೇವಾಶ್ರಮ, ಪಾವಗಡದ ಅಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net