

ಮುಂಬೈ: ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಉದ್ಯಮಿ ಹಾಗೂ ಮಹೀಂದ್ರಾ ಗ್ರೂಪ್ ಆಫ್ ಚೇರ್ಮನ್ ಆನಂದ್ ಮಹೀಂದ್ರಾ ತಮ್ಮ ಕಣ್ಣಿಗೆ ಬಿದ್ದಂತಹ ವಿಶೇಷತೆಗಳನ್ನು ಪರಿಚಯಿಸುತ್ತಿರುತ್ತಾರೆ. ಅದರಂತೆ ಇಂದು ಬೆಳಗ್ಗೆ ಮಹೀಂದ್ರಾ ಅವರು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿರುವ ಫೋಟೋ ನೆಟ್ಟಿಗರಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಮಹೀಂದ್ರ ಅವರು ರೆಸ್ಟೋರೆಂಟ್ ಒಂದರ ಮೆನು ಕಾರ್ಡ್ ಅನ್ನು ತಮ್ಮ ಟ್ವಿಟರ್ನಲ್ಲಿಂದು ಶೇರ್ ಮಾಡಿಕೊಂಡಿದ್ದಾರೆ. ಆದರೆ, ಮೆನ್ ಕಾರ್ಡ್ನಲ್ಲಿರುವ ವಿಚಾರ ಬಹಳ ವಿಶೇಷತೆಯಿಂದ ಕೂಡಿದ್ದು, ನೋಡಿಗರ ಮುಖದಲ್ಲಿ ನಗು ಮೂಡಿಸುವಂತಿದೆ. ಇದೊಂದು ಪರಿಶುದ್ಧವಾದ ಸಸ್ಯಹಾರಿ ರೆಸ್ಟೋರೆಂಟ್ ಆಗಿದ್ದು, ಅದರ ಆಹಾರದ ಪಟ್ಟಿಗೆ ಹೀಗಿದೆ ಎಂದು ಹೇಳಿ, ವೆಜ್ ಫಿಶ್ ಫ್ರೈ, ವೆಜ್ ಚಿಕನ್ ರೈಸ್ ಮತ್ತು ವೆಜ್ ಮಟನ್ ದೋಸಾ ಎಂದು ಬರೆಯಲಾಗಿದೆ.
ಭಾರತ ಹೇಗೆ ವಿಸ್ಮಯಕಾರಿ ಎಂಬುದಕ್ಕೆ ನಿಜವಾಗಿಯೂ ಇದೊಂದು ಉದಾಹರಣೆಯಾಗಿದೆ. ವಿಚಾರವೊಂದರ ಕುರಿತಾಗಿ ನಮ್ಮ ಮನಸ್ಸಿನ ಶಕ್ತಿಯನ್ನು ಹೇಗೆ ನಿಯಂತ್ರಣದಲ್ಲಿಡಬೇಕೆಂಬುದನ್ನು ಸಾವಿರಾರು ವರ್ಷಗಳಿಂದ ತಿಳಿದಿದ್ದೇವೆ. ವೆಜ್ ಮತ್ತು ನಾನ್ವೆಜ್ನಲ್ಲಿ ವ್ಯತ್ಯಾಸವೇನಿದೆ? ಇದೆಲ್ಲ ನಮ್ಮ ಮನಸ್ಸಿನಲ್ಲಿದೆ ಎಂದು ಮಹೀಂದ್ರಾ ಅವರು ಫೋಟೋ ಕುರಿತು ಬರೆದುಕೊಂಡಿದ್ದಾರೆ.
ಇಂದು ಬೆಳಗ್ಗೆ ಪೋಟೋ ಪೋಸ್ಟ್ ಮಾಡಿದ್ದು, ಈವರೆಗೂ 5 ಸಾವಿರಕ್ಕೂ ಹೆಚ್ಚು ಲೈಕ್ಸ್ಗಳು ಬಂದಿವೆ. ಈ ಮೆನುವಿನಲ್ಲಿರುವ ಆಹಾರದ ರುಚಿ ಹೇಗಿರುತ್ತದೋ ಎಂದು ಕೆಲ ನೆಟ್ಟಿಗರು ನಗೆಚಟಾಕಿ ಹಾರಿಸಿದ್ದರೆ, ಇನ್ನು ಕೆಲವರು ಈ ಆಹಾರದಲ್ಲಿ ಪದಾರ್ಥಗಳೇನಿರಬಹುದೆಂದು ಗೊಂದಲಕ್ಕೀಡಾಗಿದ್ದಾರೆ. (ಏಜೆನ್ಸೀಸ್)