ಫ್ಯಾಕ್ಟರಿಯಲ್ಲಿ ಬಾಳೆಎಲೆ ಊಟ ಕಡ್ಡಾಯ; ಮಾಜಿ ಪತ್ರಕರ್ತೆಯೊಬ್ಬರ ಸಲಹೆ ಜಾರಿಗೊಳಿಸಿದ ದೇಶದ ಪ್ರಖ್ಯಾತ ವಾಹನ ತಯಾರಿಕಾ ಕಂಪನಿ

banana leaves
Published on

ನವದೆಹಲಿ: ದಕ್ಷಿಣ ಭಾರತದಲ್ಲಿ ಬಾಳೆ ಎಲೆ ಮೇಲೆ ಊಟ ಮಾಡುವುದು ಅತ್ಯಂತ ಶ್ರೇಷ್ಠ ಎಂದು ಹೇಳಲಾಗುತ್ತದೆ. ಆದ್ದರಿಂದ, ಮದುವೆ, ಮುಂಜಿ ಕಾರ್ಯಕ್ರಮಗಳು ಸೇರಿ ಶುಭ ಕಾರ್ಯಕ್ರಮಗಳು ಸೇರಿ ಯಾವುದೇ ಕಾರ್ಯಕ್ರಮವಾದರೂ ಬಾಳೆ ಎಲೆ ಊಟಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಕರೊನಾ ವೈರಸ್​ ಸೋಂಕಿನ ಹಿನ್ನೆಲೆಯಲ್ಲಿ ಈ ಅಂಶ ಉತ್ತರ ಭಾರತೀಯರಿಗೂ ಮನವರಿಕೆಯಾದಂತಿದೆ.

ದೇಶದ ಪ್ರಖ್ಯಾತ ವಾಹನ ತಯಾರಿಕಾ ಕಂಪನಿ ಮಹೀಂದ್ರಾದಲ್ಲಿ ಪೇಪರ್​ ಪ್ಲೇಟ್​ಗಳ ಬದಲು ಬಾಳೆ ಎಲೆ ಮೇಲೆ ಊಟ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ಕಂಪನಿಯ ಈ ಕ್ರಮದ ಹಿಂದೆ ಮಾಜಿ ಪತ್ರಕರ್ತೆಯೊಬ್ಬರ ಸಲಹೆಯೂ ಇದೆ.

ಆಗಿದ್ದೇನೆಂದರೆ, ನಿವೃತ್ತ ಪತ್ರಕರ್ತೆ ಪದ್ಮಾ ರಾಮನಾಥ್​ ಎಂಬುವರು ಮಹೀಂದ್ರ ಸಮೂಹ ಸಂಸ್ಥೆಗಳ ಮುಖ್ಯಸ್ಥ ಆನಂದ್​ ಮಹೀಂದ್ರಾ ಅವರಿಗೆ ಇ-ಮೇಲ್​ ಸಂದೇಶ ರವಾನಿಸಿ, ಕೋವಿಡ್​ 19 ಪಿಡುಗಿನ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ಲಾಕ್​ಡೌನ್​ ಘೋಷಿಸಲಾಗಿದೆ. ಬಾಳೆಹಣ್ಣು ಬೆಳೆಯುವ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಹಾಗಾಗಿ, ಅವರಿಂದ ಬಾಳೆ ಎಲೆಗಳನ್ನು ಖರೀದಿಸಿ, ಅದರ ಮೇಲೆ ಊಟ ಮಾಡುವುದರಿಂದ ಆರೋಗ್ಯಕ್ಕೂ ಒಳ್ಳೆಯದು. ರೈತರಿಗೂ ಆರ್ಥಿಕವಾಗಿ ಸಹಾಯವಾಗುತ್ತದೆ ಎಂದು ಸಲಹೆ ನೀಡಿದರಂತೆ.

ಇದನ್ನು ತಕ್ಷಣವೇ ಒಪ್ಪಿಕೊಂಡ ಆನಂದ್​ ಮಹೀಂದ್ರಾ ತಮ್ಮ ಸಮೂಹದ ಎಲ್ಲಾ ಫ್ಯಾಕ್ಟರಿಗಳಲ್ಲಿ ಬಾಳೆ ಎಲೆ ಊಟವನ್ನು ಕಡ್ಡಾಯಗೊಳಿಸಿ ಆದೇಶಿಸಿದರು. ಅಲ್ಲದೆ, ಬಾಳೆ ಎಲೆಗಳನ್ನು ಖರೀದಿಸಿ ಫ್ಯಾಕ್ಟರಿಯ ಕ್ಯಾಂಟೀನ್​ಗೆ ತಲುಪಿಸಲೂ ಮುಂದಾದರು.

ಈ ವಿಷಯವನ್ನು ಆನಂದ್​ ಮಹೀಂದ್ರಾ ಟ್ವೀಟ್​ ಮೂಲಕ ಹಂಚಿಕೊಂಡಿದ್ದು, ಕೇವಲ ಒಂದು ಗಂಟೆ ಅವಧಿಯಲ್ಲಿ 13 ಸಾವಿರಕ್ಕೂ ಹೆಚ್ಚು ಶೇರ್​ ಆಗಿದೆ. ಒಟ್ಟಾರೆ, ಆನಂದ್​ ಮಹೀಂದ್ರಾ ಅವರು ಸಂಕಷ್ಟದಲ್ಲಿರುವ ಬಾಳೆ ಬೆಳೆಗಾರರಿಗೆ ಆರ್ಥಿಕವಾಗಿ ನೆರವಾಗಿದ್ದಲ್ಲದೆ, ತಮ್ಮ ಸಮೂಹದ ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಆರೋಗ್ಯದಾಯಕ ರೀತಿಯಲ್ಲಿ ಬಾಳೆ ಎಲೆ ಮೇಲೆ ಊಟ ಮಾಡುವ ಸೌಭಾಗ್ಯವನ್ನೂ ಕರುಣಿಸಿ, ಅವರ ಆರೋಗ್ಯ ಕಾಪಾಡಲು ಮುಂದಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net