ಇಸ್ರೋದಿಂದ ಅನಲಾಗ್ ಸ್ಪೇಸ್ ಮಿಷನ್; ಲಡಾಖ್​ನ ಲೇಹ್​ನಲ್ಲಿ ಹ್ಯಾಬ್-1 ಯೋಜನೆಗೆ ಚಾಲನೆ

ವಿಜಯವಾಣಿ (3)
Published on

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಪ್ರಥಮ ಅನಲಾಗ್ ಸ್ಪೇಸ್ ಮಿಷನ್ ಆರಂಭವನ್ನು ಶುಕ್ರವಾರ ಘೊಷಿಸಿದೆ. ಮುಂದಿನ ಬಾಹ್ಯಾಕಾಶ ಮಿಷನ್​ಗಳಿಗೆ ನೆರವಾಗುವಂಥ ಭೂಮ್ಯಾತೀತ (ಎಕ್ಸ್​ಟ್ರಾಟೆರೆಸ್ಟರಿಯಲ್) ಪರಿಸ್ಥಿತಿಗಳ ಸವಾಲುಗಳ ಅಧ್ಯಯನಕ್ಕೆಂದು ಇಸ್ರೋ ಅನಲಾಗ್ ಸ್ಪೇಸ್ ಮಿಷನ್​ಗೆ ಚಾಲನೆ ನೀಡಿದೆ. ಈ ಮಿಷನ್​ನಲ್ಲಿ ಹ್ಯಾಬ್-1 ಎಂಬ ಹೆಸರಿನ ಒಂದು ಸಾಂದ್ರವಾದ, ಊದಿ ಉಬ್ಬಿಸಬಹುದಾದ (ಇನ್​ಫ್ಲಾಟೇಬಲ್) ವಸತಿಯೋಗ್ಯ ವ್ಯವಸ್ಥೆ ಇರಲಿದ್ದು ಅನ್ಯ ಗ್ರಹಗಳಲ್ಲಿ ಜೀವನವನ್ನು ಸ್ಟಿಮ್ಯುಲೇಟ್ ಮಾಡಬಲ್ಲದಾಗಿದೆ. ಈ ಪ್ರಕ್ರಿಯೆಯನ್ನು ಲಡಾಖ್​ನ ಲೇಹ್​ನಲ್ಲಿ ನಡೆಸಲಾಗುತ್ತದೆ.

ಹಲವು ಬಾಹ್ಯಾಕಾಶ ಯೋಜನೆಗಳು: ಹಲವು ಸ್ಪೇಸ್ ಮಿಷನ್​ಗಳನ್ನು ಭಾರತ ಯೋಜಿಸಿರುವುದರಿಂದ ಭವಿಷ್ಯದಲ್ಲಿ ಭೂಮಿಯಾಚೆಗಿನ ಮಿಷನ್​ಗಳಲ್ಲಿ ಗಗನಯಾನಿಗಳು ಎದುರಿಸಬಹುದಾದ ಸವಾಲುಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ಅವುಗಳನ್ನು ಅರ್ಥೈಸಲು ಹೊಸ ಮಿಷನ್ ನೆರವಾಗಲಿದೆ. ‘ಭಾರತದ ಪ್ರಥಮ ಅನಲಾಗ್ ಸ್ಪೇಸ್ ಮಿಷನ್ ಲೇಹ್​ನಲ್ಲಿ ಆರಂಭವಾಗಿದೆ!’ ಎಂದು ಎಕ್ಸ್ ಪೋಸ್ಟ್​ನಲ್ಲಿ ಇಸ್ರೋ ಪ್ರಕಟಿಸಿದೆ.

ಅಗತ್ಯ ಸರಕುಗಳು

ಹೈಡ್ರೋಪೋನಿಕ್ಸ್ ಹೊಲ, ಅಡುಗೆ ಮನೆ, ನೈರ್ಮಲ್ಯ ವ್ಯವಸ್ಥೆ ಮೊದಲಾದ ಅಗತ್ಯ ಸರಕುಗಳು ಹ್ಯಾಬ್-1ರಲ್ಲಿ ಇವೆ. ಅವುಗಳು ಸ್ವಯಂ-ಸುಸ್ಥಿರ ಪರಿಸರವನ್ನು ಒದಗಿಸಲಿವೆ. ಆ ಮೂಲಕ ಭಾರತಕ್ಕೆ ಅಮೂಲ್ಯವಾದ ದತ್ತಾಂಶಗಳು (ಡೇಟಾ) ಸಿಗಲಿವೆ. ಚಂದ್ರ, ಮಂಗಳ ಮತ್ತು ಅದರಾಚೆಗೂ ಹಲವು ಬಾಹ್ಯಾಕಾಶ ಮಿಷನ್​ಗಳನ್ನು ಭಾರತ ಯೋಜಿಸಿರುವುದರಿಂದ ಈ ಡೇಟಾಗಳು ನೆರವಾಗಲಿವೆ.

ಲಡಾಖ್ ವೈಶಿಷ್ಟ್ಯ

ಲಡಾಖ್​ನ ವಿಶಿಷ್ಟ ಭೌಗೋಳಿಕ ಲಕ್ಷಣಗಳ ಕಾರಣದಿಂದ ಈ ಜಾಗವನ್ನೇ ಈ ಮಿಷನ್​ಗೆ ಆಯ್ಕೆ ಮಾಡಿಕೊಳ್ಳ ಲಾಗಿದೆ. ಮಂಗಳ ಗ್ರಹ ಮತ್ತು ಚಂದ್ರನ ಮೇಲ್ಮೈಯನ್ನು ನಿಕಟವಾಗಿ ಹೋಲುವಂಥ ಪರಿಸರ ಇರುವುದೇ ಅದಕ್ಕೆ ಕಾರಣವಾಗಿದೆ. ಶೀತ, ಶುಷ್ಕ ಪರಿಸ್ಥಿತಿಗಳು ಮತ್ತು ಎತ್ತರದ ಪ್ರದೇಶಗಳು ತಂತ್ರಜ್ಞಾನಗಳು ಮತ್ತು ದೀರ್ಘಾವಧಿಯ ಸ್ಪೇಸ್ ಮಿಷನ್​ಗಳಿಗೆ ಅಗತ್ಯವಾದ ಕಾರ್ಯತಂತ್ರಗಳನ್ನು ಪರೀಕ್ಷಿಸಲು ಸೂಕ್ತವಾದ ಪರಿಸರವನ್ನು ಅವು ಒದಗಿಸುತ್ತವೆ.

ಸಂಸ್ಥೆಗಳ ಸಹಯೋಗ

ಹ್ಯೂಮನ್ ಸ್ಪೇಸ್​ಫ್ಲೈಟ್ ಸೆಂಟರ್, ಇಸ್ರೋ, ಎಎಕೆಎ ಸ್ಪೇಸ್ ಸ್ಟುಡಿಯೋ, ಲಡಾಖ್ ವಿಶ್ವವಿದ್ಯಾಲಯ, ಐಐಟಿ ಬಾಂಬೆ ಈ ಮಿಷನ್​ನಲ್ಲಿ ಕೈಜೋಡಿಸಿವೆ. ಲಡಾಖ್ ಗುಡ್ಡಗಾಡು ಸ್ವಾಯತ್ತ ಅಭಿವೃದ್ಧಿ ಮಂಡಳಿ ಇದಕ್ಕೆ ಬೆಂಬಲ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net