

ಮಂಡ್ಯ : ಹೊಲದಲ್ಲಿ ಕುರಿ ಮೇಯಿಸುತ್ತಿದ್ದ ವೃದ್ಧನಿಗೆ ಕಲರ್ ಜೆರಾಕ್ಸ್ ನಕಲಿ ನೋಟು ನೀಡಿ ಕುರಿ ಖರೀದಿಸಿರುವ ಆತಂಕಕಾರಿ ಘಟನೆ ಮದ್ದೂರು ತಾಲೂಕಿನ ಅಂಕನಾಥಪುರದಲ್ಲಿ ನಡೆದಿದೆ.
ಮಂಚಯ್ಯ ಎಂಬ ವೃದ್ಧ ಹೊಲದಲ್ಲಿ ಕುರಿ ಮೇಯಿಸುತ್ತಿದ್ದ ವೇಳೆ ಆಟೋದಲ್ಲಿ ಬಂದ ಮೂವರು 5 ಸಾವಿರ ರೂಪಾಯಿ ಕಲರ್ ಜೆರಾಕ್ಸ್ ನಕಲಿ ನೋಟು ನೀಡಿ ಕುರಿ ಖರೀದಿಸಿದರು. ಹಣ ಪಡೆದು ಮನೆಗೆ ತೆರಳಿದ ಮಂಚಯ್ಯ ನೋಟು ಚಲಾವಣೆ ಮಾಡದೆ ಸುಮ್ಮನಿದ್ದರು.
ಸೋಮವಾರ ಅದೇ ತಂಡ ಮತ್ತೊಬ್ಬ ವೃದ್ಧರ ಬಳಿಗೆ ತೆರಳಿ ಜೆರಾಕ್ಸ್ ನೋಟು ನೀಡಲು ಮುಂದಾಯಿತು. ಅನುಮಾನ ಬಂದ ಆ ವೃದ್ಧ ಮರು ಪ್ರಶ್ನೆ ಹಾಕಿದ ಅದು ಜೆರಾಕ್ಸ್ ನೋಟು ಎಂದು ಪತ್ತೆಯಾಯಿತು.
ಗ್ರಾಮದಲ್ಲಿ ಜೆರಾಕ್ಸ್ ನೋಟು ನೀಡಿ ಕುರಿ ಖರೀದಿಸುತ್ತಿರುವ ವಿಷಯ ಬಹಿರಂಗಗೊಳ್ಳುತ್ತಿದ್ದಂತೆ ಮಂಚಯ್ಯ ತನ್ನ ಬಳಿ ಇದ್ದ ನೋಟುಗಳನ್ನು ಪರೀಕ್ಷಿಸಿದಾಗ ಅವು ಕೂಡ ಜೆರಾಕ್ಸ್ ಎಂದು ಗೊತ್ತಾಗಿ ಗಾಬರಿಗೊಂಡಿದ್ದಾರೆ. ಕುರಿ ಹಾಗೂ ಹಣ ಕಳೆದುಕೊಂಡ ಮಂಚಯ್ಯ ರೋಧಿಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್)