ಸಾವಿನಲ್ಲೂ ಒಂದಾದ ಪ್ರೇಮಿಗಳು; ಶೋಕದಲ್ಲಿ ಮುಳುಗಿದ ಗ್ರಾಮ

rajasthan photo
Published on

ರಾಜಸ್ಥಾನ: ಗೆಳತಿ ಮದುವೆಯಾದ ಹಿನ್ನೆಲೆಯಲ್ಲಿ ಮನನೊಂದ ಪ್ರಿಯಕರನೊಬ್ಬ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದ ಬದ್ಮೆರೆಯಲ್ಲಿ ನಡೆದಿದೆ. ಮದುವೆಯಾದ ಮೂರನೇ ದಿನ ಪ್ರಿಯಕರನ ಆತ್ಮಹತ್ಯೆಯ ಸಾವಿನ ಸುದ್ದಿ ತಿಳಿದ ನಂತರ ಆಕೆಯೂ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಆತ್ಮಹತ್ಯೆಗೆ ಶರಣಾಗುವ ಮುನ್ನ ಯುವತಿಯು ತನ್ನ ಪ್ರಿಯಕರನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ, ‘ನಾವು ಬದುಕಿದ್ದರೂ ಸತ್ತರೂ ಒಬ್ಬರನ್ನೊಬ್ಬರು ಭೇಟಿಯಾಗುತ್ತೇವೆ ಎಂದು ಪ್ರಮಾಣ ಮಾಡಿದ್ದೆವು... ಯಾಕೆ ಇಂತಹ ನಿರ್ಧಾರ ತೆಗೆದುಕೊಂಡೆ?’ ಎಂದು ಬರೆದುಕೊಂಡಿದ್ದಾಳೆ. 'ಈಗ ನಾನು ಕೂಡ ನಿನ್ನ ಬಳಿಗೆ ಬರುತ್ತಿದ್ದೇನೆ. ನೀವು ಎಂದೆಂದಿಗೂ ನನ್ನ ಜೀವನ. ಎರಡು ದಿನ ಕಳೆದಿದೆ. ಕ್ಷಮಿಸಿ ಪ್ರಿಯಾ’ ಎಂದು ಪೋಸ್ಟ್ ಮಾಡಲಾಗಿದೆ. ಘೋರಿಮಣ್ಣ ಪೊಲೀಸ್ ಠಾಣಾ ವ್ಯಾಪ್ತಿಯ ಶೋಭಾಲಾ ಜೈತ್ಮಾಲಾ ಎಂಬಲ್ಲಿ ಈ ದಾರುಣ ಘಟನೆ ನಡೆದಿದೆ.

ಜುಲೈ 4 ರಂದು ವಿವಾಹ

ಮಾಹಿತಿ ಪ್ರಕಾರ, ಶೋಭಾಲಾ ಜೈತ್ಮಾಲಾ ನಗರದ ಅನಿತಾ (22) ಹಾಗೂ ಪುರ್ಖಾರಾಮ್ ಇಬ್ಬರೂ ಪ್ರೀತಿ ಮಾಡುತ್ತಿದ್ದರು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದರು. ಆದರೆ ಅನಿತಾ ಜುಲೈ 4 ರಂದು ವಿವಾಹವಾದರು. ಇದರಿಂದ ಮನನೊಂದ ಪುರಖರಾಮ್ ಜುಲೈ 4 ರಂದು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಜುಲೈ 5 ರಂದು ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡಿರುವುದು ಗೆಳತಿಗೆ ತಿಳಿದಿದೆ.

ಬಾವಿಯಲ್ಲಿ ನವ ವಿವಾಹಿತೆ ಶವ ಪತ್ತೆ

ಸ್ಥಳೀಯರ ಪ್ರಕಾರ, ನವ ವಿವಾಹಿತೆ ಅನಿತಾ ತನ್ನ ಮನೆಯಿಂದ ಹಾಲು ಕರೆಯಲು ದನದ ಕೊಟ್ಟಿಗೆಗೆ ಹೋಗಿದ್ದಳು. ಬಹಳ ಹೊತ್ತಾದರೂ ಮನೆಗೆ ಹಿಂತಿರುಗಿರಲಿಲ್ಲ. ಕುಟುಂಬಸ್ಥರು ಆಕೆಗಾಗಿ ಹುಡುಕಾಟ ಆರಂಭಿಸಿದ್ದರು. ಆದರೆ ಬಾವಿಯ ಬಳಿ ಹಾಲಿನ ಪಾತ್ರೆಯನ್ನು ಕಂಡುಕೊಂಡರು. ಹೀಗಾಗಿ ಅನುಮಾನದಿಂದ ಬಾವಿಯತ್ತ ನೋಡಿದ್ದಾರೆ. ಬಾವಿಯಲ್ಲಿ ಅನಿತಾ ಮೃತದೇಹ ತೇಲುತ್ತಿರುವುದು ಕಂಡುಬಂದಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಅನಿತಾ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ, ಬಳಿಕ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಪ್ರೇಮಿಗಳ ಆತ್ಮಹತ್ಯೆ ಗ್ರಾಮದ ಎಲ್ಲರನ್ನೂ ದುಃಖದಲ್ಲಿ ಮುಳುಗಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net