

ಮೂಗೂರು : ಗ್ರಾಮದ ಶ್ರೀ ತ್ರಿಪುರ ಸುಂದರಿ ಅಮ್ಮನವರ ದೇವಾಲಯದ ಆವರಣ ಬಳಿ ಅನೈರ್ಮಲ್ಯ ತಾಂಡವವಾಡುತ್ತಿದೆ.
ಹಲವು ದಿನಗಳಿಂದ ವಿಲೇವಾರಿಯಾಗದೆ ಇದ್ದ ತ್ಯಾಜ್ಯ ಸ್ಥಳದಲ್ಲೇ ಗಬ್ಬೆದ್ದು ನಾರುತ್ತಿದೆ. ಧಾರ್ಮಿಕ ಕ್ಷೇತ್ರ ಮೂಗೂರಿನ ತ್ರಿಪುರ ಸುಂದರಿ ಅಮ್ಮನವರ ದೇವಾಲಯಕ್ಕೆ ರಾಜ್ಯ, ಜಿಲ್ಲೆಯ ನಾನಾ ಭಾಗಗಳಿಂದ ಅಸಂಖ್ಯಾತ ಭಕ್ತರ ದಂಡೇ ಬರುತ್ತದೆ. ಆದರೆ ದೇವಾಲಯದ ಸುತ್ತಲೂ ಇರುವ ಚರಂಡಿಗಳಲ್ಲಿ ತ್ಯಾಜ್ಯ ತುಂಬಿಕೊಂಡು ಮಳೆಗಾಲದಲ್ಲಿ ಚರಂಡಿಯ ಕೊಳಚೆ ನೀರು ರಸ್ತೆಗೆ ಹರಿದ ಪರಿಣಾಮ ರಸ್ತೆಯಲ್ಲಿ ಕೆಸರು ಹರಡಿ ಅನೈರ್ಮಲ್ಯ ವಾತಾವರಣ ನಿರ್ಮಾಣವಾಗಿದೆ.
ಸ್ವಚ್ಛತೆ ಇಲ್ಲದೆ ಭಕ್ತರು ಮುಜುಗರ ಅನುಭವಿಸುವಂತಾಗಿದೆ. ದೇವಾಲಯದ ಆವರಣದಲ್ಲಿ ಇರುವ ಅನಧಿಕೃತ ಪೆಟ್ಟಿಗೆ ಅಂಗಡಿಗಳ ತ್ಯಾಜ್ಯದಿಂದ ದೇಗುಲದ ಆವರಣ ಮತ್ತಷ್ಟು ಹದಗೆಡುತ್ತಿದೆ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ. ಇದಲ್ಲದೆ ಗ್ರಾಮದ ಪ್ರಮುಖ ರಸ್ತೆಗಳಲ್ಲೂ ರಾಶಿ ರಾಶಿಗಟ್ಟಲೆ ಕಸ ವಿಲೇವಾರಿಯಾಗದೆ ಹಾಗೇ ಉಳಿದು ಮಳೆಯ ಸಮಯದಲ್ಲಿ ಮತ್ತೆ ಚರಂಡಿ ಸೇರುತ್ತಿದೆ.
ದೇವಾಲಯದ ಮುಂಭಾಗದಲ್ಲಿ ಇರುವ ನೀರಿನ ತೊಂಬೆಯಲ್ಲಿ ಪಾಚಿ ಕಟ್ಟಿದ್ದು, ಕೊಳಕು ನೀರಲ್ಲೇ ಭಕ್ತರು ಕೈಕಾಲು, ಮುಖ ತೊಳೆದು ಅಮ್ಮನವರ ದರ್ಶನ ಮಾಡುವ ಸ್ಥಿತಿ ಇದೆ. ಹೋಬಳಿಯ ಕೇಂದ್ರ ಸ್ಥಾನವಾದ ಈ ಗ್ರಾಮ ಪಂಚಾಯಿತಿ 25 ಸದಸ್ಯರನ್ನು ಹೊಂದಿದ ದೊಡ್ಡ ಗ್ರಾಮ ಪಂಚಾಯಿತಿ ಆಗಿದ್ದರೂ ಸಮಸ್ಯೆಗಳು ಸಹ ಅಷ್ಟೇ ದೊಡ್ಡದಾಗಿಯೇ ಉಳಿದಿದೆ.
ಕತ್ತಲು ಕವಿದ ಬಡಾವಣೆ: ಮೂಗೂರು ಗ್ರಾಮದ ಡಾ. ಅಂಬೇಡ್ಕರ್ (ಹೊಸಳ್ಳಿ ಮೋಳೆ)ಮಾರ್ಗದ ಹೊಸ ಬಡಾವಣೆಯಲ್ಲಿ ಸುಮಾರು ದಿನಗಳಿಂದ ಬೀದಿ ದೀಪಗಳು ಬೆಳಗದೆ ಕತ್ತಲಿನಲ್ಲಿ ಕಾಲಕಳೆಯುವಂತಾಗಿದೆ. ಇದರ ಬಗ್ಗೆ ಗಮನಹರಿಸಿಲ್ಲ ಎಂಬ ದೂರುಗಳು ಕೇಳಿ ಬಂದಿವೆ.