

ಅಮ್ರೋಹಾ: ರಸ್ತೆಯಲ್ಲಿ ನಡೆದ ಅಪಘಾತದಿಂದಾಗಿ ಸತ್ತು ಬಿದ್ದ ವ್ಯಕ್ತಿ ಒಬ್ಬ 12 ತಾಸುಗಳ ಕಾಲ ವಾಹನಗಳ ಅಡಿಯಲ್ಲಿ ಸಿಕ್ಕಿಬಿದ್ದಿರುವ ಘಟನೆ ಉತ್ತರಪ್ರದೇಶದ ಅಮ್ರೋಹಾ ಬಳಿ ನಡೆದಿದೆ.
ಶನಿವಾರದಂದು ದೆಹಲಿ-ಲಖನೌ ಹೆದ್ದಾರಿಯನ್ನು ದಾಟುತ್ತಿದ್ದ ಪಾದಚಾರಿಯೊಬ್ಬನಿಗೆ ವೇಗದಿಂದ ಬಂದಿರುವ ಕಾರು ಡಿಕ್ಕಿ ಹೊಡೆದಿದೆ. ಪಾದಚಾರಿಗೆ ಹೊಡೆದ ಕಾರು ನಿಲ್ಲಿಸದೆ ಹಾಗೇ ಮುಂದೆ ಹೋಗಿದೆ. ಸ್ಥಳದಲ್ಲೇ ಪ್ರಾಣಬಿಟ್ಟ ಪಾದಚಾರಿಯ ದೇಹವನ್ನು ಯಾವೊಬ್ಬ ಪ್ರಯಾಣಿಗರೂ ಗಮನಿಸಿಲ್ಲ. ಎಲ್ಲ ಗಾಡಿಗಳು ಆ ದೇಹದ ಮೇಲೆಯೇ ಹರಿದು ಹೋಗಿವೆ.
ಸುತ್ತ ಮುತ್ತದ ಪ್ರದೇಶದಲ್ಲಿ ಹಲವು ಪೊಲೀಸ್ ಗಾಡಿಗಳು ಓಡಾಡಿವೆಯಾದರೂ, ಪೊಲೀಸರಿಗೂ ಸಹ ಅಪಘಾತವಾಗಿರುವುದು ತಿಳಿಯದ ಕಾರಣ ಸತತ 12 ಗಂಟೆಗಳ ಕಾಲ ಮೃತ ದೇಹವು ರಸ್ತೆಯಲ್ಲಿ ವಾಹನಗಳ ಅಡಿಯಲ್ಲಿ ಸಿಲುಕಿದೆ.
ಭಾನುವಾರ ಬೆಳಗ್ಗೆ ರಸ್ತೆಯಲ್ಲಿ ಮೃತ ದೇಹವಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಅಲ್ಲಿ ಉಳಿದಿದ್ದ ಶವವನ್ನು ಪೊಲೀಸರು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮೃತ ದೇಹ ಎಷ್ಟರ ಮಟ್ಟಿಗೆ ಜಜ್ಜಿಹೋಗಿತ್ತೆಂದರೆ ಅದು ಹೆಣ್ಣಿನ ದೇಹವೋ ಅಥವಾ ಗಂಡಿನ ದೇಹವೋ ಎನ್ನುವುದೂ ಸಹ ಮರಣೋತ್ತರ ಪರೀಕ್ಷೆಯಿಂದಲೇ ತಿಳಿದುಕೊಳ್ಳಬೇಕಾಯಿತು ಎಂದು ಪೊಲೀಸರು ತಿಳಿಸಿದ್ದಾರೆ,
ಮೃತ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ವಿಚಾರಣೆಗೆ ಅನುಕೂಲವಾಗಲಿ ಎಂದು ಮೃತ ವ್ಯಕ್ತಿಯ ಡಿಎನ್ಎ ಶೇಖರಿಸಿಟ್ಟುಕೊಳ್ಳಲಾಗಿದೆ.
ಕಳೆದ ವಾರ ಪುಣೆ-ಮುಂಬೈ ಹೆದ್ದಾರಿಯಲ್ಲಿ ಇಂತದ್ದೇ ಒಂದು ಪ್ರಕರಣ ನಡೆದಿತ್ತು. ಅಪಘಾತವಾಗಿ ಸತ್ತ ವ್ಯಕ್ತಿಯ ದೇಹದ ಮೇಲೆ 60ಕ್ಕೂ ಹೆಚ್ಚು ವಾಹನಗಳು ಸಂಚಾರ ನಡೆಸಿದ್ದವು. ಮೃತವ್ಯಕ್ತಿಯ ಜೇಬಿನಲ್ಲಿ ಆತನ ಗುರುತಿನ ಚೀಟಿ ಸಿಕ್ಕಿದ್ದರಿಂದಾಗಿ ಅತನನ್ನು ಗುರುತಿಸಲಾಗಿತ್ತು. (ಏಜೆನ್ಸೀಸ್)