

ಹುಣಸೂರು: ಆಹಾರ ಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನ ರಾಂ ಅವರನ್ನು ದೇಶದ ರಾಜಕಾರಣ ಮತ್ತು ಬಡಜನರು ಎಂದೂ ಮರೆಯಲು ಸಾಧ್ಯವಿಲ್ಲ ಎಂದು ಆದಿಜಾಂಬವ ಸಂಘದ ಜಿಲ್ಲಾ ಮುಖಂಡ ಡಿ.ಕುಮಾರ್ ಅಭಿಪ್ರಾಯಪಟ್ಟರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಡಾ.ಬಾಬು ಜಗಜೀವನ ರಾಂ 38ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
40 ವರ್ಷಗಳ ಕಾಲದ ತಮ್ಮ ಸುದೀರ್ಘ ಚುನಾವಣಾ ರಾಜಕಾರಣದಲ್ಲಿ ಸೋಲಿಲ್ಲದ ಸರದಾರರಾಗಿ ಮೆರೆದರು. ಹಸಿರು ಕ್ರಾಂತಿಯ ಮೂಲಕ ಆಗಿನ ಕಾಲದಲ್ಲಿ ದೇಶದಲ್ಲಿ ಎದುರಾದಗಿದ್ದ ಆಹಾರದ ಹಾಹಾಕಾರವನ್ನು ಇಲ್ಲವಾಗಿಸಿದರು. ಕಾರ್ಮಿಕ, ರೈಲ್ವೆ ಮುಂತಾದ ಇಲಾಖೆಗಳ ಸಚಿವರಾಗಿ ತಮ್ಮದೇ ಛಾಪು ಮೂಡಿಸಿದರು ಎಂದು ಸ್ಮರಿಸಿದರು.
ಹುಣಸೂರು ಉಪವಿಭಾಗ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ನಿಂಗರಾಜ ಮಲ್ಲಾಡಿ ಮಾತನಾಡಿ, ಅಸ್ಪಶ್ಯತೆ ಎಂಬ ಸಾಮಾಜಿಕ ಪಿಡುಗಿನಿಂದ ಇನ್ನೂ ದಲಿತರು ಬಳಲುತ್ತಿದ್ದಾರೆ. ಸ್ವಾತಂತ್ರ್ಯ ಬಂದು ಹಲವು ವರ್ಷಗಳಾದರೂ ಗ್ರಾಮೀಣ ಪ್ರದೇಶದ ಕೆಲವು ಹಳ್ಳಿಗಳಲ್ಲಿ ಇಂದಿಗೂ ಅಸ್ಪಶ್ಯತೆ, ಜಾತೀಯತೆ, ಅಸಮಾನತೆಯನ್ನು ದಲಿತರ ಮೇಲೆ ಹೇರುತ್ತಿರುವುದು ಆತಂಕದ ವಿಚಾರ. ಅಸ್ಪಶ್ಯತೆ ನಿರ್ಮೂಲನೆಗೆ ಕಾನೂನುಗಳಿದ್ದರೂ ಈ ಕಾನೂನುಗಳನ್ನು ಜಾರಿಗೊಳಿಸಬೇಕಾದ ಅಧಿಕಾರಿಗಳ ಮನಸ್ಸು ಮಲೀನ ಆಗಿರುವುದರಿಂದ ಇಂತಹ ಸಾಮಾಜಿಕ ಪಿಡುಗು ನಿರ್ಮೂಲನೆ ಮಾಡಲು ಆಗುತ್ತಿಲ್ಲ ಎಂದು ಬೇಸರ ತೋಡಿಕೊಂಡರು.
ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ತಹಸೀಲ್ದಾರ್ ಮಂಜುನಾಥ್ ಮಾತನಾಡಿದರು. ದಲಿತ ಮುಖಂಡ ಬಲ್ಲೇನಹಳ್ಳಿ ಕೆಂಪರಾಜು ಕಾರ್ಯಕ್ರಮಕ್ಕೆ ಬಹುತೇಕ ಅಧಿಕಾರಿಗಳು ಗೈರಾಗಿರುವುದನ್ನು ಖಂಡಿಸಿ ಸರ್ಕಾರದ ಮಟ್ಟದಲ್ಲಿ ವರದಿ ಸಲ್ಲಿಸಬೇಕೆಂದು ತಹಸೀಲ್ದಾರ್ ಅವರನ್ನು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದರಾಜು, ಹುಣಸೂರು ನಗರಸಭೆ ಆಯುಕ್ತೆ ಮಾನಸ, ಉ ತಹಸೀಲ್ದಾರ್ ನರಸಿಂಹಯ್ಯ, ಶಿರಸ್ತೇದಾರ್ ಶ್ರೀಪಾದ್, ಆದಿಜಾಂಬವ ಸಂಘದ ಬಿ. ಶಿವಣ್ಣ, ಸಣ್ಣಮಾದು ತಿಪ್ಲಾಪುರ, ರಾಯನಹಳ್ಳಿ ಸ್ವಾಮಿ, ನಾಗನಹಳ್ಳಿ ಮಹದೇವ, ಸರಸ್ವತಿಪುರಂನ ರಾಚಯ್ಯ, ಶೇಖರ, ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ, ನಾಯಕ ಸಂಘದ ರವಿ, ಕಲ್ಕುಣಿಕೆ ಅತ್ತಿಕುಪ್ಪೆ ಸಿದ್ದೇಶ ಹಾಜರಿದ್ದರು.