ಹತ್ತು ಲಕ್ಷ ಜನರಿಗೆ ಬಡ್ಡಿರಹಿತ ಸಾಲ: ಮಹತ್ವದ ಯೋಜನೆಗೆ ಪ್ರಜಾ ಸಂಕಲ್ಪ ಯಾತ್ರೆಯೇ ಸ್ಫೂರ್ತಿ!

Jagan Reddy
Published on

ವಿಜಯವಾಡ: ಆಂಧ್ರ ಪ್ರದೇಶದ ಸರ್ವತೋಮುಖ ಬೆಳವಣಿಗೆಗೆ ಪಣತೊಟ್ಟಿರುವ ಮುಖ್ಯಮಂತ್ರಿ ವೈ. ಎಸ್​. ಜಗನ್​ಮೋಹನ್​ ರೆಡ್ಡಿ ನೇತೃತ್ವದ ವೈಎಸ್​ಆರ್​ಸಿಪಿ ಸರ್ಕಾರ ಮತ್ತೊಂದು ಹೊಸ ಯೋಜನೆಯನ್ನು ಜಾರಿಗೆ ತಂದಿದ್ದಾರೆ.

ಜಗನ್ನಣ ಥೋಡು ಯೋಜನೆಯನ್ನು ಸಿಎಂ ಜಗನ್​ ಇಂದು ಉದ್ಘಾಟನೆ ಮಾಡಿದ್ದು, ಈ ಯೋಜೆನಯ ಅಡಿಯಲ್ಲಿ ರಾಜ್ಯದ ಎಲ್ಲ ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳಿಗೆ ನೆರವಿನ ಹಸ್ತವನ್ನು ಸರ್ಕಾರ ನೀಡಲಿದೆ.

1 ಸಾವಿರ ಕೋಟಿ ರೂ. ಯೋಜನೆ ಇದಾಗಿದ್ದು, ಯಾವುದೇ ಬಡ್ಡಿಯಿಲ್ಲದೆ ಸುಮಾರು 10 ಲಕ್ಷ ಜನರಿಗೆ ಯೋಜನೆಯಡಿ ತಲಾ 10 ಸಾವಿರ ರೂ. ಸಾಲ ನೀಡಲಾಗುತ್ತದೆ. ಫಲಾನುಭವಿಗಳ ಬ್ಯಾಂಕ್​ ಖಾತೆಗೆ ಸಿಎಂ ಜಗನ್​ ನೇರವಾಗಿ ಹಣವನ್ನು ಜಮಾ ಮಾಡುವ ಮೂಲಕ ಯೋಜನೆ ಉದ್ಘಾಟಿಸಿದ್ದಾರೆ.

ಅಧಿಕಾರಕ್ಕೂ ಮುನ್ನ ಜಗನ್​ ಮಾಡಿದ್ದ 3,648 ಕಿಮೀ ವರೆಗಿನ ಪ್ರಜಾ ಸಂಕಲ್ಪ ಯಾತ್ರಾ ಸಮಯದಲ್ಲಿ ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳ ಸ್ಥಿತಿಯನ್ನು ನೋಡಿದ್ದ ಜಗನ್​ ಇದೀಗ ಯೋಜನೆಗೆ ಒಂದು ರೂಪ ಕೊಟ್ಟಿದ್ದಾರೆ. ಬ್ಯಾಂಕ್​ಗಳು ಸಾಲ ನೀಡಲಿದ್ದು, ಸರ್ಕಾರವೇ ಬಡ್ಡಿಯನ್ನು ಬರಿಸಲಿದೆ.

ಯೋಜನೆಗೆ ಪ್ರತ್ಯೇಕವಾಗಿ ವೆಬ್​ಸೈಟ್​ ಅನ್ನು ತೆರೆಯಲಾಗಿದ್ದು, ಇದರ ಮೂಲಕ ಬ್ಯಾಂಕ್​ಗಳೊಂದಿಗೆ ಸಹಕಾರ ಸಾಧಿಸಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಯಾವುದೇ ಭ್ರಷ್ಟಾಚಾರ ನಡೆಯದಂತೆ ನೋಡಿಕೊಳ್ಳಲು ವೆಬ್​ಸೈಟ್​ ಸಹ ಪೂರಕವಾಗಿದ್ದು, ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮಾ ಆಗಲಿದ್ದು, ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ.

ಇನ್ನು ಫಲಾನುಭವಿಗಳಿಗೆ ಕ್ಯೂಆರ್​ ಕೋಡ್​ ಒಳಗೊಂದ ಗುರುತಿನ ಚೀಟಿಯನ್ನು ನೀಡಲಾಗಿದ್ದು, ಅದರ ಮೇಲೆ ನಿಗಾವನ್ನು ಇಡಲಾಗುತ್ತದೆ. ತರಕಾರಿ, ಹಣ್ಣು ಮಾರಾಟಗಾರರು, ಸಣ್ಣ ಅಂಗಡಿ ಹೊಂದಿರುವವರು ಸೇರಿದಂತೆ ಅನೇಕರು ಯೋಜನೆಯ ಲಾಭ ಪಡೆಯಲು ಅರ್ಜಿ ಅಲ್ಲಿಸಬಹುದಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net