ಸಾವಿರಾರು ವಿದ್ಯಾರ್ಥಿಗಳಿಗೆ ಬದುಕು ಕೊಟ್ಟ ಸಂಸ್ಥೆ

lbs college
ಸಾಗರದ ಎಲ್‌ಬಿ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾಲೇಜು ನಿರ್ಮಾಣಕ್ಕೆ ಭೂಮಿ ದಾನ ಮಾಡಿದ ಕುಟುಂಬದ ಸದಸ್ಯರನ್ನು ವಿದ್ಯಾರ್ಥಿ ಬಳಗದಿಂದ ಗೌರವಿಸಲಾಯಿತು. ಎಂ.ಹರನಾಥರಾವ್, ಡಾ. ಎಚ್.ಎಂ.ಶಿವಕುಮಾರ್, ಡಾ. ಲಕ್ಷ್ಮೀಶ್, ಕೆ.ವೆಂಕಟೇಶ್ ಕವಲಗೋಡು ಉಪಸ್ಥಿತರಿದ್ದರು.
Published on

ಸಾಗರ: ಮಲೆನಾಡಿನಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಬದುಕು ಕಟ್ಟಿಕೊಟ್ಟ ಲಾಲ್ ಬಹದ್ದೂರ್ ಕಾಲೇಜಿನ ಶ್ರೇಷ್ಠತೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ (ಎಂಡಿಎಫ್)ದ ಅಧ್ಯಕ್ಷ ಎಂ.ಹರನಾಥರಾವ್ ಹೇಳಿದರು.

ಸಾಗರದ ಎಲ್‌ಬಿ ಮತ್ತು ಎಸ್‌ಬಿಎಸ್ ಕಾಲೇಜಿನ ದೇವರಾಜ ಅರಸು ಕಲಾಕ್ಷೇತ್ರದಲ್ಲಿ ಕಾಲೇಜಿನ 1989-90ರ ಸಾಲಿನ ಬಿ.ಕಾಂ. ವಿದ್ಯಾರ್ಥಿ ಬಳಗ ಏರ್ಪಡಿಸಿದ್ದ ಸ್ನೇಹ ಸಮ್ಮೇಳನ ಮತ್ತು ಗೌರವಾರ್ಪಣೆ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು ಎನ್ನುವ ಆಶಯದಿಂದ 1964ರಲ್ಲಿ ಕಾಲೇಜು ಆರಂಭಗೊಂಡಿತು. ಈವರೆಗೆ 52 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಶಿಕ್ಷಣ ಕಲಿತು ದೇಶ ವಿದೇಶದಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಲಾಲ್ ಬಹದ್ದೂರ್ ಶಾಸ್ತ್ರಿ ಅವರೇ ಕಾಲೇಜು ಉದ್ಘಾಟಿಸಿದ್ದರು ಎನ್ನುವುದು ವಿಶೇಷತೆ. ಕವಿ ಗೋಪಾಲಕೃಷ್ಣ ಅಡಿಗರು ಕಾಲೇಜಿನ ಪ್ರಥಮ ಪ್ರಾಚಾರ್ಯರಾಗಿ ಕಾರ್ಯ ನಿರ್ವಹಿಸಿರುವುದು ಹಿರಿಮೆ ಎಂದು ತಿಳಿಸಿದರು.
ಕಾಲೇಜಿನಲ್ಲಿ ಬಿಬಿಎಂ, ಎಂಸಿಎ ಹಾಗೂ ಕಾನೂನು ಶಿಕ್ಷಣ ಆರಂಭಿಸುವ ಯೋಚನೆಯಿದೆ. ಇದಕ್ಕೆ ಎಲ್ಲ ಹಂತದಲ್ಲಿ ಹಳೆಯ ವಿದ್ಯಾರ್ಥಿಗಳು, ಪಾಲಕರು ಹಾಗೂ ಉಪನ್ಯಾಸಕ ವೃಂದ ಸಹಕರಿಸಬೇಕು. ಕಾಲೇಜು ಮರಳಿ ಗತವೈಭವಕ್ಕೆ ಮರಳಬೇಕು ಎಂಬ ಆಶಯ ವ್ಯಕ್ತಪಡಿಸಿದರು.
ಸರ್ಕಾರದ ನೆರವಿಲ್ಲದೆ ಇತ್ತೀಚೆಗೆ ಸಂಸ್ಥೆಗೆ ಆರ್ಥಿಕವಾಗಿ ಹಿನ್ನಡೆಯಾಗಿದೆ. ಕಾಲೇಜಿನ ಒಟ್ಟು 159 ಸಿಬ್ಬಂದಿಗೆ ಆಡಳಿತ ಮಂಡಳಿ ವೇತನ ಪಾವತಿಸಬೇಕು. ಹಣಕಾಸಿನ ಶಕ್ತಿ ಇರುವವರು ಶೈಕ್ಷಣಿಕ ಸಂಸ್ಥೆಗೆ ನೆರವು ನೀಡಬೇಕು. 25 ಕೋಟಿ ರೂ. ನಿಧಿ ಸ್ಥಾಪಿಸಿ ಬಡ್ಡಿ ಹಣದಲ್ಲಿ ವೆಚ್ಚ ನಿರ್ವಹಣೆ ಮಾಡುವ ಯೋಜನೆಯಿದೆ ಎಂದರು.
ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ. ಎಚ್.ಎಂ.ಶಿವಕುಮಾರ್ ಮಾತನಾಡಿ, ಕಾಲೇಜು ಆರಂಭಕ್ಕೆ ದಾನಿಗಳು ಭೂಮಿ ದಾನವಾಗಿ ಕೊಡದಿದ್ದರೆ ಈ ಕಾಲೇಜನ್ನು ಇಷ್ಟು ಭವ್ಯವಾಗಿ ನಿರ್ಮಿಸಲು ಆಗುತ್ತಿರಲಿಲ್ಲ. 80 ಎಕರೆ ಭೂ ವಿಸ್ತಾರ ಹೊಂದಿರುವ ಕಾಲೇಜಿನ ಭೂಮಿ ರಕ್ಷಣೆ ಮಾಡಿಕೊಳ್ಳುವುದು ಕಷ್ಟವಾಗಿದೆ. ಕೆಲ ಕಡೆ ಮಣ್ಣು ಕಳವು, ಅಕ್ರಮ ಕಟ್ಟಡ ನಿರ್ಮಾಣ ಹಾಗೂ ರಾತ್ರಿ ವೇಳೆ ಜೆಸಿಬಿ ಯಂತ್ರಗಳ ಶಬ್ದ, ಭೂಮಿ ಮೌಲ್ಯ ಹೆಚ್ಚಾಗಿರುವುದರಿಂದ ಅಕ್ರಮ ವ್ಯವಹಾರಗಳೇ ಜಾಸ್ತಿಯಾಗಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾಲೇಜು ನಿರ್ಮಾಣಕ್ಕೆ ಭೂಮಿ ದಾನ ಮಾಡಿದ ಸಿದ್ದಯ್ಯ ಬನ್ನೂರುಮಠ ಅವರ ಕುಟುಂಬದ ಗಡದಯ್ಯ, ಕಾನ್ಲೆ ವೆಂಕಟಗಿರಿಯಪ್ಪ ಅವರ ಕುಟುಂಬದ ಶ್ರೀಧರ ಕಾನ್ಲೆ, ಎಚ್.ಡಿ.ಮಲ್ಲಪ್ಪ ಕುಟುಂಬದ ಎಚ್.ಎಂ.ಬಸವರಾಜು, ಯಾಗೈನ್ ಶೇಷಗಿರಿಯಪ್ಪ ಕುಟುಂಬದ ಶಂಕರನಾರಾಯಣ ಮತ್ತು ಶಶಿಧರ ಅವರನ್ನು ವಿದ್ಯಾರ್ಥಿ ಬಳಗದಿಂದ ಗೌರವಿಸಲಾಯಿತು.
ಹಿರಿಯ ವಿದ್ಯಾರ್ಥಿ ಬಳಗದಲ್ಲಿ ಸಾಧನೆ ಮಾಡಿದ ಅರುಣ ಬೆಂಕಟವಳ್ಳಿ, ವಿದ್ವಾನ್ ಎಂ.ಗೋಪಾಲ್, ಬಿ.ಜಿ.ದತ್ತಾತ್ರೇಯ, ಶಾಂತಲಾ ಸುರೇಶ್, ಜಿ.ಡಿ.ಕೇಶವ ಹೆಗಡೆ, ಮೇಜರ್ ಎಂ.ನಾಗರಾಜ್ ಅವರನ್ನು ಗೌರವಿಸಲಾಯಿತು. ಹಾಸ್ಟೆಲ್ ವಾರ್ಡನ್ ಆಗಿ ಕೆಲಸ ಮಾಡಿದ್ದ ಡಾ. ಟಿ.ಎಸ್.ರಾಘವೇಂದ್ರ ಮತ್ತು ಹಾಸ್ಟೆಲ್‌ನಲ್ಲಿ ಅಡುಗೆ ತಯಾರಿಸುತ್ತಿದ್ದ ಪ್ರಭಾಕರ ಭಟ್ ಅವರನ್ನು ಸನ್ಮಾನಿಸಲಾಯಿತು.
ಪರಿಣತಿ ಕಲಾ ಕೇಂದ್ರದ ವಿದ್ಯಾರ್ಥಿನಿಯರು ಪ್ರಾರ್ಥನಾ ನೃತ್ಯ ಪ್ರದರ್ಶಿಸಿದರು. ಕಾಲೇಜಿನ ಪ್ರಾಚಾರ್ಯ ಡಾ. ಲಕ್ಷ್ಮೀಶ್, ಆಡಳಿತ ಮಂಡಳಿ ಖಜಾಂಚಿ ಕೆ.ವೆಂಕಟೇಶ್ ಕವಲಕೋಡು, ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಿ.ಸಿ.ಶಶಿಧರ್, ವಿದ್ಯಾರ್ಥಿ ಬಳಗದ ಅಧ್ಯಕ್ಷ ನಾರಾಯಣ ಜೋಗ್, ರಾಜಶೇಖರ ಹಂದಿಗೋಡು, ದಿನೇಶ್ ಹುಲಿಮನೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net