

ಬೆಂಗಳೂರು: ಸಾಧಿಸುವ ಛಲವೊಂದಿದ್ದರೆ ಅಸಾಧ್ಯ ಎನ್ನುವ ಮಾತೇ ಇಲ್ಲ ಎಂದು ಹಿರಿಯರು ಹೇಳುತ್ತಾರೆ. ಅದಕ್ಕೆ ತಕ್ಕಂತೆ ಅನೇಕ ಸ್ಫೂರ್ತಿದಾಯಕ ಕಥೆಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವುದನ್ನು ನೋಡಿರುತ್ತೇವೆ. ಇದೀಗ ಅಂತದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿದ್ದು ವೈರಲ್ ಲಿಸ್ಟ್ಗೆ ಸೇರಿಕೊಂಡಿದೆ.
ಭಾರತೀಯ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸುಸಂತ ನಂದ ಇಂದು (ಜ.30) ಮುಂಜಾನೆ ಒಂದು ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಓಟದ ಸ್ಪರ್ಧೆಯ ವಿಡಿಯೋ ಇದಾಗಿದೆ. ಅದರಲ್ಲಿ ಒಂದು ವಿಶೇಷವಾದ ಸ್ಫರ್ಧಿ ಭಾಗಿಯಾಗಿದ್ದಾರೆ. ಒಂದು ಕಾಲಿರದ ಪುಟ್ಟ ಹುಡುಗಿಯೊಬ್ಬಳು ಎರಡೂ ಕಾಲಿನಲ್ಲಿ ಓಡುವ ಸ್ಪರ್ಧಾಳುಗಳೊಂದಿಗೆ ಧೈರ್ಯವಾಗಿ ಸ್ಪರ್ಧೆಗಿಳಿಯುತ್ತಾಳೆ. ಅಂತಿಮವಾಗಿ ಆಕೆ ಗೆಲ್ಲುವುದಿಲ್ಲವಾದರೂ ಸ್ಪರ್ಧೆಗೆ ನಿಂತ ಆಕೆಯ ಛಲಕ್ಕೆ ಎಂಥವರಾದರೂ ಮನಸೋಲುತ್ತಾರೆ. ಕೇವಲ 18 ಸೆಕೆಂಡುಗಳ ವಿಡಿಯೋ ಜೀವನಕ್ಕಾಗುವಷ್ಟು ಉತ್ಸಾಹವನ್ನು ತುಂಬುವಂತಿದೆ.
ಈ ವಿಡಿಯೋ ಟ್ವಿಟರ್ನಲ್ಲಿ ಅಪ್ಲೋಡ್ ಆದ ಕ್ಷಣದಿಂದ ಹೆಚ್ಚೆಚ್ಚು ಜನರನ್ನು ಆಕರ್ಷಿಸಿದ್ದು ಇದುವರೆಗೆ ಸುಮಾರು 20 ಸಾವಿರಕ್ಕೂ ಹೆಚ್ಚು ಜನರಿಂದ ವೀಕ್ಷಣೆ ಪಡೆದುಕೊಂಡಿದೆ. ಪುಟ್ಟ ಬಾಲಕಿಯ ಧೈರ್ಯಕ್ಕೆ ಬಹಳಷ್ಟು ಮೆಚ್ಚುಗೆ ಕೇಳಿ ಬಂದಿದ್ದು, ಟ್ವಿಟ್ಟಿಗರುಬಾಲಕಿಗೆ ಸಲಾಂ ಹೇಳುತ್ತಿದ್ದಾರೆ. (ಏಜೆನ್ಸೀಸ್)