

ವ್ಯಾಧಿಯೆಂದರೆ ದೇಹ ಹಾಗೂ ರೋಗದ ನಡುವಿನ ಯುದ್ಧ. ಶ್ವಾಸರೋಗದಂತಹ ಕಾಯಿಲೆಗಳು ಒಮ್ಮಿಂದೊಮ್ಮೆಲೆ ಉದ್ಭವಿಸುವುದಿಲ್ಲ. ಕೆಲವೊಮ್ಮೆ ಹಠಾತ್ತಾಗಿ ಉಸಿರಾಡಲು ತುಂಬಾ ಕಷ್ಟವಾಗಿ ರಾತ್ರೋರಾತ್ರಿ ಆಸ್ಪತ್ರೆಯ ಕಡೆಗೆ ತಡಮಾಡದೆ ಹೋಗಬೇಕಾದ ಪರಿಸ್ಥಿತಿ ತಲೆದೋರುವುದಿದೆ. ಅಲ್ಲಿನ ವೈದ್ಯರು ಅಸ್ತಮಾ ಕಾಯಿಲೆಯಿದೆ ಎಂದು ನಿರ್ಣಯಿಸಿ ಚಿಕಿತ್ಸೆ ಪ್ರಾರಂಭಿಸುತ್ತಾರೆ. ನಿನ್ನೆಯ ತನಕ ಇಲ್ಲದ ಆಸ್ತಮಾ ಇಂದು ಕ್ಷಿಪ್ರವಾಗಿ ವಕ್ಕರಿಸಿದೆ ಎಂದು ನಮಗನಿಸುವುದು ಸಹಜ. ಆದರೆ ಕಾಯಿಲೆಯ ಬೆಳವಣಿಗೆಯ ಹಾದಿಯನ್ನು ಗಮನಿಸಿದರೆ ಎಲ್ಲವೂ ಸ್ಪಷ್ಟವಾಗುತ್ತದೆ. ಒಬ್ಬ ವ್ಯಕ್ತಿ ಉದ್ಯೋಗ ನಿಮಿತ್ತ ತನ್ನ ಸ್ವಂತ ಊರನ್ನು ಬಿಟ್ಟು ಬೆಂಗಳೂರಿಗೆ ಬಂದಿದ್ದಾನೆ ಎಂದಿಟ್ಟುಕೊಳ್ಳಿ. ಬೆಂಗಳೂರಿನಲ್ಲಿ ಕಲುಷಿತ ವಾತಾವರಣದಿಂದಾಗಿ ಉಸಿರಾಟದ ಸಮಸ್ಯೆಗಳು ಹೆಚ್ಚು. ವೈದ್ಯಕೀಯ ಅಂಕಿಅಂಶಗಳೂ ಇದನ್ನೇ ಹೇಳುತ್ತವೆ. ಹಾಗಿದ್ದರೂ ಬಂದು ಮೂರ್ನಾಲ್ಕು ವರ್ಷ ಉಸಿರಾಟದ ಯಾವುದೇ ತೊಂದರೆಗಳಿರುವುದಿಲ್ಲ.
ಆ ಬಳಿಕ ವರ್ಷಕ್ಕೆ ಒಂದೆರಡು ಬಾರಿ ಶೀತ, ಕೆಮ್ಮು ಬಾಧಿಸುತ್ತದೆ. ವಿಶೇಷವಾದ ಉಪಚಾರವಿಲ್ಲದೆ ಹಾಗೆಯೇ ಕಡಿಮೆಯಾಗುತ್ತದೆ. ಮುಂದಿನ ವರ್ಷ ಕೆಮ್ಮು, ಶೀತ ನಾಲ್ಕು ಬಾರಿ ತೊಂದರೆ ಕೊಡುತ್ತದೆ. ಐದಾರು ದಿನಗಳಲ್ಲಿ ಅಲ್ಪ ಔಷಧದಿಂದ ವಾಸಿಯಾಗುತ್ತದೆ. ಮರು ವರ್ಷ ಬರುವ ಕೆಮ್ಮು, ಶೀತ ತಿಂಗಳು ಕಾಲ ಸತಾಯಿಸುತ್ತದೆ. ವರುಷದ ಮೂರ್ನಾಲ್ಕು ತಿಂಗಳು ಔಷಧ, ಪಥ್ಯ, ವೈದ್ಯರ ಬದಲಿಸುವಿಕೆ ಎಲ್ಲವೂ ನಡೆದು ಅಂತೂ ಇಂತೂ ತಹಬಂದಿಗೆ ಬರುತ್ತದೆ. ಹೀಗಿದ್ದರೂ ಉಸಿರಾಟದಲ್ಲಿ ಕಷ್ಟವೇನೂ ಆಗಿರುವುದಿಲ್ಲ. ಹತ್ತನೇ ವರ್ಷ ಜ್ವರ, ಶೀತ, ನೆಗಡಿಗಳು ಪದೇಪದೇ ಕಾಡತೊಡಗುತ್ತವೆ. ಧೂಳಿಗೆ ಒಡ್ಡಿಕೊಂಡರೆ ಕೆಮ್ಮು, ತಣ್ಣಗಿನ ಆಹಾರ ತೆಗೆದುಕೊಂಡರೆ ಜ್ವರ, ಹೊಗೆಯನ್ನು ಆಘ್ರಾಣಿಸಿದರೆ ನೆಗಡಿ, ಹಳೆಯ ಪುಸ್ತಕವನ್ನು ತಿರುವಿದರೆ ಶೀತ - ಹೀಗೆ ನಾನಾ ವಿಧವಾಗಿ ತಾಪತ್ರಯಗಳು ಬೆಂಬಿಡದೆ ಕಾಡುತ್ತವೆ. ಇದೀಗ ಬೆಂಗಳೂರಿಗೆ ಬಂದು ಹನ್ನೆರಡು ವರ್ಷಗಳು ಪೂರೈಸಿವೆ. ರಾತ್ರಿ ನೆಂಟರ ಮನೆಯಲ್ಲಿ ಎಣ್ಣೆಯಲ್ಲಿ ಕರಿದ ತಿಂಡಿ, ಬಗೆಬಗೆಯ ಸಿಹಿ ತಿಂಡಿಗಳು, ಭೂರಿ ಭೋಜನ, ಕೊನೆಯಲ್ಲಿ ತಂಪಾದ ಐಸ್ಕ್ರೀಮ್ ಎಲ್ಲವನ್ನೂ ಸವಿದು ಸವಿ ನಿದ್ದೆಯಲ್ಲಿದ್ದಾಗ ಉಸಿರಾಟದ ತೊಂದರೆ ತೀವ್ರವಾಗಿ ಬಡಿದೆಬ್ಬಿ ಸುತ್ತದೆ. ಇಲ್ಲಿ ವಾತಾವರಣ ಮೊದಲಿನಂತೆಯೇ ಇದೆ. ಆಸ್ತಮಾ ರೋಗಿಯ ದೇಹ ಬಲಿಷ್ಟವಾಗಿರಬಹುದು. ಆದರೆ ಶ್ವಾಸಕೋಶ ವರ್ಷಕಳೆದಂತೆ ಬಲ ಕಳೆದುಕೊಳ್ಳುತ್ತಾ ಹೋಗಿದೆ. ಹಾಗಾಗಿ ಸ್ಥಳ ಬದಲಿಸುವುದು ಇದಕ್ಕೆ ಶಾಶ್ವತ ಪರಿಹಾರ ಅಲ್ಲವೇ ಅಲ್ಲ.
ವರ್ಷದಿಂದ ವರ್ಷಕ್ಕೆ ಶ್ವಾಸರೋಗ ಹೇಗೆ ಬೆಳವಣಿಗೆ ಕಂಡಿತೆಂಬುದು ಸೂಕ್ಷ್ಮವಾಗಿ ಅವಲೋಕಿಸಿದರೆ ವೇದ್ಯವಾಗುತ್ತದೆ. ಸರ್ಜಿಕಲ್ ಸ್ಟ್ರೈಕ್ನಂತೆ ಹಠಾತ್ತನೆ ಬಂದೆರಗಿದ್ದು ಎಂಬಂತೆ ಕಂಡರೂ ಶ್ವಾಸರೋಗದ ನಿಜಹಾದಿ ಸುದೀರ್ಘವಾಗಿದೆ. ಬೇಸಿಗೆಯ ಕೊನೆಗೆ ನದಿಗೆ ಕಟ್ಟಲಾಗಿರುವ ಅಣೆಕಟ್ಟು ನೀರಿಲ್ಲದೆ ಬರಿದಾಗಿರುತ್ತದೆ. ಜಲಾನಯನ ಪ್ರದೇಶದಲ್ಲಿ ಮಳೆಯಾದಂತೆ ಅಣೆಕಟ್ಟಿನಲ್ಲಿ ನೀರಿನ ಸಂಚಯವಾಗುತ್ತದೆ. ನೀರು ಭರ್ತಿಯಾಗಿದ್ದಾಗ ಒಂದು ವಾರ ಸತತವಾಗಿ ಭೀಕರ ಮಳೆಸುರಿದು ಅಣೆಕಟ್ಟು ಒಡೆದು ಜಲಪ್ರವಾಹವಾದರೆ ಮರುದಿನ ಪತ್ರಿಕೆಗಳಲ್ಲಿ ಒಂದು ವಾರದ ಭರ್ಜರಿ ಮಳೆಯಿಂದ ಒಡೆದ ಅಣೆಕಟ್ಟು ಎಂಬ ತಲೆಬರಹ ನೀಡಲಾಗುತ್ತದೆ. ಜನರ ಬಾಯಲ್ಲೂ ವಾರ ಸುರಿದ ವರ್ಷಧಾರೆಯಿಂದ ಇಷ್ಟೆಲ್ಲಾ ಅನಾಹುತವಾಯಿತು ಎಂಬ ಮಾತು ಕೇಳಿಬರುತ್ತದೆ. ಒಂದುವೇಳೆ ಅಣೆಕಟ್ಟು
ಖಾಲಿಯಿತ್ತು ಎಂದಿಟ್ಟುಕೊಳ್ಳಿ. ವಾರವಲ್ಲ, ತಿಂಗಳ ತನಕ ನಿರಂತರವಾಗಿ ಮಳೆ ಬಂದಿದ್ದರೂ ಏನೂ ಆಗುತ್ತಿರಲಿಲ್ಲ! ಅಂದಮೇಲೆ ಈ ಮೊದಲು ಮೂರು ತಿಂಗಳಲ್ಲಿ ಅನೇಕ ಬಾರಿ ಆಗಿರುವ ಮಳೆಯಿಂದಾಗಿ ಅಣೆಕಟ್ಟು ತುಂಬಿ ಇದ್ದುದನ್ನು ಮರೆತೇ ಬಿಡುತ್ತೇವೆ. ಆ ಎಲ್ಲಾ ಮಳೆಗಳ ಒಟ್ಟು ಪರಿಣಾಮವೇ ಈ ಅನಾಹುತ! ಆಸ್ತಮಾವೂ ಹಾಗೆಯೇ! ಇನ್ನು ಕೆಲವೊಮ್ಮೆ ವಿರುದ್ಧ ಹವಾಮಾನದ ಪರಿಸರ ಉಸಿರಾಟಕ್ಕೆ ಅನುಕೂಲ ಮಾಡುವುದಿದೆ. ಮಲೆನಾಡಿನಲ್ಲಿ ಉಸಿರಾಟದ ತೊಂದರೆಯಿರುವ ವ್ಯಕ್ತಿ ಬೆಂಗಳೂರು, ಮೈಸೂರಿಗೆ ಬಂದರೆ ಯಾವುದೇ ಸಮಸ್ಯೆ ಕಾಣಿಸುವುದಿಲ್ಲ.
ಹಾಗೆಯೇ ಬೆಂಗಳೂರಿನಲ್ಲಿ ಶ್ವಾಸರೋಗದಿಂದ ಬಳಲುತ್ತಿರುವ ವ್ಯಕ್ತಿ ನೆಲಮಂಗಲ ದಾಟುತ್ತಿದ್ದಂತೆ ಅಲರ್ಜಿ ಕಡಿಮೆಯಾಗಿ ಬಿಡುತ್ತದೆ! ಆದರೆ ಇದು ಆರಂಭದಲ್ಲಿ ಮಾತ್ರ! ಕ್ರಮೇಣ ಅಲ್ಲೂ ಹಲವರು ವ್ಯಾಧಿಯಿಂದ ಪೀಡನೆಗೆ ಒಳಗಾಗುತ್ತಾರೆ. ಇದು ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸುಲಭವಾಗಿ ಇದ್ದಂತೆ. ಸುಲಭವಾಗಿರುವ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳು ಸಲೀಸಾಗಿ ಬರುತ್ತವೆ. ಹಾಗೆಂದು ಪ್ರಶ್ನೆಪತ್ರಿಕೆ ಕ್ಲಿಷ್ಟವಾಗಿದ್ದರೆ ಅನುತ್ತೀರ್ಣ ಆಗುವುದು ನಿಶ್ಚಿತ. ಎಷ್ಟೇ ಕಷ್ಟದ ಪ್ರಶ್ನೆಗಳಿದ್ದರೂ ಉತ್ತಮ ಉತ್ತರ ನೀಡುವಂತಿರಬೇಕು. ಇದರಂತೆ ಶ್ವಾಸಕಾಂಗವ್ಯೂಹ ಸದೃಢವಾಗಿದ್ದರೆ ಯಾವುದೇ ವಾತಾವರಣ ದಲ್ಲೂ, ಎಲ್ಲಾ ಸನ್ನಿವೇಶಗಳಲ್ಲೂ ಆರೋಗ್ಯವಂತರಾಗಿರುವುದು ಸಾಧ್ಯ. ದೇಹದ ಹಿತಕ್ಕೆ ವಿರುದ್ಧವಾಗಿರುವ ವಿಷಮ ಪರಿಸ್ಥಿತಿ ಯಲ್ಲೂ ಉಸಿರಾಟ ಸಲೀಸಾಗಿ ಆಗುತ್ತಿದ್ದರೆ ಮಾತ್ರ ಆ ವ್ಯಕ್ತಿ ಶ್ವಾಸರೋಗವನ್ನು ಗೆದ್ದಿದ್ದಾನೆಂದು ಅರ್ಥ. ಇವೆಲ್ಲವನ್ನೂ ಅರ್ಥೈಸಿಕೊಂಡರಷ್ಟೇ ಚಿಕಿತ್ಸೆ ಯಶಸ್ವಿಯಾಗುತ್ತದೆ.
(ಪ್ರತಿಕ್ರಿಯಿಸಿ: vvsudina@gmail.com)