

ಶಿವಮೊಗ್ಗ: ನಗರದ ಆಲ್ಕೋಳ ವೃತ್ತದಲ್ಲಿ ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಸಿಗದೇ ನರಳಾಟ ನಡೆಸಿದ್ದ ಗರ್ಭಿಣಿ ಕುದುರೆ ಶಿರಸಿಯ ಅಮೇಜಿಂಗ್ ಪೆಟ್ ಪ್ಲಾನೆಟ್ ಪ್ರಾಣಿ-ಪಕ್ಷಿಗಳ ಅನಾಥಾಶ್ರಮದಲ್ಲಿ ಚೇತರಿಸಿಕೊಂಡಿದ್ದು ಹೆಣ್ಣು ಮರಿಗೆ ಜನ್ಮ ನೀಡಿದೆ.
ಆಲ್ಲೋಳ ವೃತ್ತದಲ್ಲಿ ಆ.17ರಂದು ಒಂದು ಕಣ್ಣಿಲ್ಲದ ಗರ್ಭಿಣಿ ಕುದುರೆ ಅಪಘಾತದಲ್ಲಿ ಗಾಯಗೊಂಡಿತ್ತು. ಯಾರೂ ಚಿಕಿತ್ಸೆಗೆ ಸಹಕರಿಸದ ಕಾರಣ ಸತತವಾಗಿ ಎರಡು ದಿನಗಳಿಂದ ನರಳಾಡುತ್ತಿದ್ದ ಕುದುರೆಯನ್ನು ಶಿವಮೊಗ್ಗದ ನಾಗರತ್ನ ರಾವ್ ಹಾಗೂ ನೆಲ್ಸನ್ ಡಿಸೋಜಾ ಎಂಬುವರು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಪ್ರಾಣಿ-ಪಕ್ಷಿಗಳ ಆನಾಥಾಶ್ರಮಕ್ಕೆ ಬಿಟ್ಟು ಬಂದಿದ್ದರು. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಸಾಯುವ ಸ್ಥಿತಿಯಲ್ಲಿದ್ದ ಕುದುರೆ ಹೊಟ್ಟೆಯ ಭಾಗದಲ್ಲಿ ಚರ್ಮವು ಎರಡು ಅಡಿಯಷ್ಟು ಉದ್ದ ಕಿತ್ತು ಬಂದಿತ್ತು. ಅಲ್ಲದೆ, ಅದರ ಗರ್ಭಕೋಶವು ಹೊರಗಡೆ ಕಾಣುತ್ತಿತ್ತು. ಇಂತಹ ಸ್ಥಿತಿಯಲ್ಲಿದ್ದ ಗರ್ಭಿಣಿ ಕುದುರೆಗೆ ಪ್ರಾಣಿ-ಪಕ್ಷಿ ತಜ್ಞ ರಾಜೇಂದ್ರ ಶಿರ್ಸಿಕರ್ ಮರುಜೀವ ನೀಡಿದ್ದರು. ಇದೀಗ ಕುದುರೆ ಮರಿಗೆ ಜನ್ಮನೀಡಿದ್ದ ಪ್ರಾಣಿ ಪಕ್ಷಿಗಳ ಅನಾಥಶ್ರಮದಲ್ಲಿ ಸಂಭ್ರಮ ಮನೆ ಮಾಡಿದೆ. ಸತತ ನಾಲ್ಕು ತಿಂಗಳಿನಿಂದ ಚಿಕಿತ್ಸೆ ನೀಡಿ ಆರೈಕೆ ಮಾಡಿದ್ದರ ಪರಿಣಾಮ ಕುದುರೆ ಸಂಪೂರ್ಣವಾಗಿ ಗುಣಮುಖವಾಗಿ, ಗುರುವಾರ ಮುದ್ದಾದ ಮರಿಗೆ ಜನ್ಮ ನೀಡಿದೆ. ತಾಯಿ ಮತ್ತು ಮರಿ ಎರಡೂ ಆರೋಗ್ಯದಿಂದಿವೆ. ಈ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿರುವ ಶ್ರೀ ಪದ್ಮ ಸೇವಾ ಟ್ರಸ್ಟಿನ ಮುಖ್ಯಸ್ಥೆ ಪೂಜಾ ರಾಜ್, ಇನ್ನೇನು ಸಾಯುವ ಸ್ಥಿತಿಯಲ್ಲಿದ್ದ ಈ ಎರಡು ಜೀವವನ್ನು ರಾಜೇಂದ್ರ ಅವರು ತಮ್ಮ ಚಿಕಿತ್ಸೆ ಮತ್ತು ಆರೈಕೆ ಮೂಲಕ ಉಳಿಸಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಅಪಘಾತವಾಗಿ ಸಾಯುವ ಸ್ಥಿಯಲ್ಲಿದ್ದ ಕುದುರೆಯನ್ನು ಶಿರಸಿಯ ಪ್ರಾಣಿ ಪಕ್ಷಿ ಅನಾಥಾಶ್ರಮಕ್ಕೆ ಬಿಟ್ಟಿದ್ದರು. ಚಿಕಿತ್ಸೆ ಫಲಕಾರಿಯಾಗಿದ್ದು ಕುದುರೆ ಮರಿಗೆ ಜನ್ಮ ನೀಡಿದೆ. ತಾಯಿ-ಮರಿ ಆರೋಗ್ಯದಿಂದಿವೆ. - ರಾಜೇಂದ್ರ ಶಿರ್ಸಿಕರ್, ಪ್ರಾಣಿ-ಪಕ್ಷಿ ತಜ್ಞ