ದಿನಕ್ಕೆ ಕೇವಲ 1 ಗಂಟೆ ತಯಾರಿ ನಡೆಸಿ 34 ಲಕ್ಷ ರೂ. ಸಂಬಳದ ಉದ್ಯೋಗ ಪಡೆದ ಯುವತಿ!

Young Lady
Published on

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉತ್ತಮ ಸಂಬಳದ ಕೆಲಸ ಪಡೆಯುವುದು ಸುಲಭದ ಮಾತಲ್ಲ. ಅದಕ್ಕೆ ಸಾಕಷ್ಟು ಶ್ರಮವಹಿಸಬೇಕು ಮತ್ತು ಅಧ್ಯಯನವೆಂಬ ತಪಸ್ಸು ಮಾಡಬೇಕು. ಕೆಲವರು ದಿನವಿಡಿ ಓದಿದರೂ ಯಶಸ್ಸಿನ ಹಾದಿಯನ್ನು ಹಿಡಿಯಲಾರರು. ಆದರೆ, ಇಲ್ಲೊಬ್ಬ ಯುವತಿ ದಿನಕ್ಕೆ ಒಂದು ಗಂಟೆ ತಯಾರಿ ನಡೆಸಿ, ವಾರ್ಷಿಕವಾಗಿ ಬರೋಬ್ಬರಿ 34 ಲಕ್ಷ ರೂಪಾಯಿ ಸಂಬಳದ ಕೆಲಸಕ್ಕೆ ಆಯ್ಕೆಯಾಗಿದ್ದಾಳೆ. ಹೌದು, ನಾವೀಗ ಹೇಳ ಹೊರಟಿರುವುದು ಯಲ್ಲ ಕೃಷ್ಣವೇಣಿ ಅವರ ಯಶೋಗಾಥೆ.

ಯಾವುದೇ ಕೋಚಿಂಗ್ ಇಲ್ಲದೆ ನಾಲ್ಕು ವರ್ಷಗಳ ಕಾಲ ಕಷ್ಟಪಟ್ಟು ಓದಿ ಕೆಲಸ ಗಿಟ್ಟಿಸಿಕೊಂಡು ತನ್ನ ಕನಸನ್ನು ನನಸು ಮಾಡಿಕೊಂಡಿರುವ ಕೃಷ್ಣವೇಣಿ, ಇಂದು ಇತರರಿಗೆ ಮಾದರಿಯಾಗಿದ್ದಾರೆ. ಕೃಷ್ಣವೇಣಿ ಅವರು ದಿನಕ್ಕೆ ಒಂದು ಗಂಟೆ ಮಾತ್ರ ತಯಾರಿ ನಡೆಸುತ್ತಿದ್ದರು. ಹುಜೂರಾಬಾದ್‌ ಮೂಲದ ಕೃಷ್ಣವೇಣಿ ಅವರ ಯಶೋಗಾಥೆ ಸದ್ಯ ವೈರಲ್ ಆಗಿದೆ.

ಯಶಸ್ಸು ಎಂಬುದು ಸುಲಭವಾಗಿ ಬರುವುದಿಲ್ಲ ಎಂದು ಕೃಷ್ಣವೇಣಿ ಹೇಳುತ್ತಾರೆ. ನನ್ನ ತಂದೆ ಖಾಸಗಿ ಚಿಟ್​ ಫಂಡ್​ ಕಂಪನಿಯ ಉದ್ಯೋಗಿ ಮತ್ತು ನನ್ನ ಸಹೋದರಿ ಮೆಡಿಸಿನ್​ ಓದುತ್ತಿದ್ದಾರೆ. ನಮ್ಮ ಜೀವನದಲ್ಲಿ ಬಾಡಿಗೆ ಕಟ್ಟಲಾಗದ ಪರಿಸ್ಥಿತಿಯನ್ನು ನಾವು ಎದುರಿಸಿದ್ದೇವೆ. ನನ್ನ ಓದು ಇಂದು ಎಲ್ಲ ಕಷ್ಟಗಳಿಗೆ ಕೊನೆಯಾಡಿದೆ. ಕೋಡಿಂಗ್ ಮೇಲಿನ ನನ್ನ ಹಿಡಿತವನ್ನು ಸುಧಾರಿಸಿಕೊಂಡು ವೃತ್ತಿ ಬದುಕಿನಲ್ಲಿ ವಿಜೇತಳಾಗಿದ್ದೇನೆ ಎಂದು ಕೃಷ್ಣವೇಣಿ ಹೇಳಿದ್ದಾರೆ.

ನನ್ನ ಕೌಶಲಗಳನ್ನು ಸುಧಾರಿಸಲು ಮಾತ್ರ ನಾನು ಫೋಟೋ ಮತ್ತು ಲ್ಯಾಪ್​ಟಾಪ್​ಗಳನ್ನು ಬಳಸಿದ್ದೇನೆ. ಕ್ಯಾಂಪಸ್​ ಸಂದರ್ಶನದ ವೇಳೆ ಪೇಪಾಲ್​ ಕಂಪನಿಯಲ್ಲಿ 34 ಲಕ್ಷ ರೂ. ಸಂಬಳದ ಕೆಲಸ ಗಿಟ್ಟಿಸಿದ್ದೇನೆ. ನಿಮಗೆ ಇಷ್ಟವಾಗುವುದರ ಮೇಲೆ ನೀವು ಶ್ರಮವಹಿಸಿದಾಗ ಖಂಡಿತವಾಗಿಯೂ ಯಶಸ್ಸು ಸಾಧಿಸುತ್ತೀರಿ ಎಂದು ಕೃಷ್ಣವೇಣಿ ತಮ್ಮ ಸಾಧನೆ ಹಿಂದಿನ ಗುಟ್ಟನ್ನು ರಟ್ಟು ಮಾಡಿದರು.

ಕೃಷ್ಣವೇಣಿ ಯಶೋಗಾಥೆಯ ಬಗ್ಗೆ ತಿಳಿದ ಅನೇಕರು ಆಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕೃಷ್ಣವೇಣಿ ಅನೇಕರಿಗೆ ಸ್ಪೂರ್ತಿಯಾಗಿದ್ದಾರೆ ಎಂದು ಕೊಂಡಾಡುತ್ತಿದ್ದಾರೆ. ಒಳ್ಳೆಯ ಸ್ಥಾನ ಬೇಕೆಂದರೆ, ಶ್ರಮದ ಜತೆಗೆ ಶ್ರದ್ಧೆಯು ಇರಬೇಕೆಂಬ ಸಂದೇಶವನ್ನು ಕೃಷ್ಣವೇಣಿ ಯಶೋಗಾಥೆ ಸಾರಿ ಹೇಳಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net