

ಬೆಂಗಳೂರು: ಪತಿ ಬೇರೊಂದು ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದನ್ನು ಪ್ರಶ್ನಿಸಲು ತೆರಳಿದ್ದ ಪತ್ನಿಯ ಮೇಲೆ ಕಿರುತೆರೆ ನಟ ಸನ್ನಿ ಮಹಿಪಾಲ್ ಹಲ್ಲೆಗೈದು ಚಾಕುವಿನಿಂದ ಇರಿದಿರುವ ಆರೋಪ ಕೇಳಿ ಬಂದಿದೆ.
ಈ ಸಂಬಂಧ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಎಚ್‌ಎಎಲ್ ಠಾಣೆ ಪೊಲೀಸರು ಕಿರುತೆರೆ ನಟ ಸನ್ನಿ ಮಹಿಪಾಲ್ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಕಿರುತೆರೆ ನಟ ಸನ್ನಿ ಮಹಿಪಾಲ್ ಮತ್ತು ಸಂತ್ರಸ್ತೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಜನವರಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಇಬ್ಬರಿಗೂ ಸ್ನೇಹಿತವಾಗಿದೆ. ಕೆಲ ದಿನಗಳ ಬಳಿಕ ಸ್ನೇಹ ಪ್ರೀತಿಗೆ ತಿರುಗಿ ಇಬ್ಬರೂ ಆತ್ಮೀಯವಾಗಿದ್ದರು. ಈ ವೇಳೆ ಸನ್ನಿ ಮಹಿಪಾಲ್ ಮದುವೆಯಾಗುವುದಾಗಿ ನಂಬಿಸಿ ಸಂತ್ರಸ್ತೆ ಜತೆಗೆ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದರು. ಪರಿಣಾಮ ಸಂತ್ರಸ್ತೆ ಎರಡು ತಿಂಗಳ ಗಂರ್ಭಿಣಿಯಾಗಿದ್ದಾರೆ. ಬಳಿಕ ಪರಸ್ಪರ ಒಪ್ಪಿಗೆ ಮೇರೆಗೆ ಜೂನ್ ೧೫ರಂದು ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದರು. ಮನೆಯವರಿಗೆ ಮದುವೆ ವಿಚಾರ ತಿಳಿಸಲು ಸಮಯಬೇಕು. ಅಲ್ಲಿವರೆಗೂ ಇಬ್ಬರು ಸ್ನೇಹಿತರ ರೀತಿ ಇರೋಣ ಎಂದು ಮಹಿಪಾಲ್ ಹೇಳಿದ್ದನಂತೆ. ಅದರಂತೆ ಇಬ್ಬರೂ ಇದ್ದರು.
ಗರ್ಭಿಣಿ ಮೇಲೆ ಹಲ್ಲೆ!
ಈ ನಡುವೆ ಮಹಿಪಾಲ್ ಬೇರೊಂದು ಯುವತಿ ಜತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಎನ್ನಲಾಗಿದೆ. ಈ ವಿಚಾರ ತಿಳಿದು ಸಂತ್ರಸ್ತೆ ಸೋಮವಾರ ರಾತ್ರಿ ೧೧ ಗಂಟೆಗೆ ವಿಜ್ಞಾನನಗರದ ಮಹಿಪಾಲ್ ಮನೆಗೆ ತೆರಳಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿದೆ. ಈ ವೇಳೆ ಮಹಿಪಾಲ್, ಸಂತ್ರಸ್ತೆ ಮೇಲೆ ಹಲ್ಲೆ ಮಾಡಿದ್ದು ಬಳಿಕ ಚಾಕುವಿನಿಂದ ಆಕೆಯ ಎಡಗೈಗೆ ಇರಿದಿದ್ದಾರೆ. ಈ ವೇಳೆ ರಕ್ತಸ್ರಾವವಾಗಿ ಸಂತ್ರಸ್ತೆ ಕುಸಿದು ಬಿದ್ದಿದ್ದಾರೆ. ಬಳಿಕ ಸಾವರಿಸಿಕೊಂಡು ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ಪತಿ ಸನ್ನಿ ಮಹಿಪಾಲ್ ಹಲ್ಲೆಯಿಂದ ಸಂತ್ರಸ್ತೆಗೆ ಗರ್ಭಪಾತವಾಗಿದೆ ಎನ್ನಲಾಗಿದೆ. ಘಟನೆ ಸಂಬಂಧ ಎಚ್‌ಎಎಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.