

ಬೆಂಗಳೂರು: ರಣ ರಣ ಬಿಸಿಲೇರಿದಂತೆ ಲೋಕಸಭೆ ಅಖಾಡವೂ ಕಾವೇರುತ್ತಿದೆ. ಚುನಾವಣೆ ರಾಜಕೀಯ ಪಕ್ಷಗಳ ಪ್ರತಿಷ್ಠೆಯ ಪ್ರಶ್ನೆಯಾಗಿದೆ.
ರಾಜ್ಯದಲ್ಲಿ 2ನೇ ಹಂತದ ಲೋಕಸಭೆ ಚುನಾವಣೆ ನಾಮಪತ್ರ ಹಿಂಪಡೆಯಲು ಸೋಮವಾರ ಕೊನೆಯ ದಿನವಾಗಿರುವುದರಿಂದ ಅಭ್ಯರ್ಥಿಗಳು ತಮ್ಮ ಗೆಲುವಿಗೆ ಅಡ್ಡಿಯಾಗುವ ಅಭ್ಯರ್ಥಿಗಳ ಉಮೇದುವಾರಿಕೆ ವಾಪಸ್ ತೆಗೆಸಲು ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಒಂದೆರಡು ಕ್ಷೇತ್ರಗಳನ್ನು ಹೊರತುಪಡಿಸಿದರೆ ಉಳಿದಂತೆ ಪಕ್ಷೇತರರ ಪ್ರಭಾವ ತೀರಾ ಕಡಿಮೆ. ಶಿವಮೊಗ್ಗದಲ್ಲಿ ಕೆ.ಎಸ್.ಈಶ್ವರಪ್ಪ, ಧಾರವಾಡದಲ್ಲಿ ಶ್ರೀ ದಿಂಗಾಲೇಶ್ವರ ಸ್ವಾಮೀಜಿಗಳು ಕಣದಿಂದ ಹಿಂದೆ ಸರಿಯುವುದಿಲ್ಲ ಎಂದು ಕಡ್ಡಿ ತುಂಡಾಗುವಂತೆ ಹೇಳಿದ್ದಾರೆ.
ಇನ್ನು ಅನೇಕ ಕಡೆ ಪಕ್ಷೇತರರಿಗಿಂತ ಎಎಪಿ, ಬಿಎಸ್‌ಪಿ, ಸಿಪಿಐಎಂ, ಎನ್‌ಪಿಪಿ, ಜೆಡಿಎಸ್ ಚಿಹ್ನೆಯಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳು ಅಷ್ಟಿಷ್ಟು ಮತ ಪಡೆಯುವ ಸಾಧ್ಯತೆಗಳಿವೆ. ಆಯಾ ಕ್ಷೇತ್ರಗಳ ಸ್ಥಿತಿಗತಿಗಳಿಗೆ ಅನುಗುಣವಾಗಿ ಎಲ್ಲೆಲ್ಲಿ ಯಾವ ಯಾವ ಪಕ್ಷಗಳ ಅಭ್ಯರ್ಥಿಗಳು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ಗೆಲುವಿಗೆ ಕಂಕಟ ಉಂಟು ಮಾಡುತ್ತಾರೋ ಅಂತಲ್ಲೆಲ್ಲ ಅವರನ್ನು ಕಣದಿಂದ ಹಿಂದೆ ಸರಿಸುವ ಕಸರುತ್ತು ಸೋಮವಾರ ಅಪರಾಹ್ನದ ವರೆಗೆ ನಡೆಯಲಿದೆ.
ಇನ್ನು ಕೆಲವು ಕಡೆ ಪಕ್ಷೇತರರಾದರೂ ಪ್ರಭಾವಿಗಳಾಗಿದ್ದರೆ, ದೊಡ್ಡ ಸಮುದಾಯದ ಬೆಂಬಲ ಗಳಿಸಿದ್ದರೆ ಅಂತಹವರನ್ನು ಕೂಡ ಕಣದಿಂದ ಹಿಂದೆ ಸರಿಸಲು ರಾಜಕೀಯ ಪಕ್ಷಗಳ ನೇತಾರರು, ಅಭ್ಯರ್ಥಿಗಳು ಸೆಣಸಾಡುತ್ತಿದ್ದಾರೆ. ಸೋಮವಾರ ಸಂಜೆ ವೇಳೆಗೆ ಕಣದಿಂದ ಹಿಂದೆ ಸರಿಯುವ ಅಭ್ಯರ್ಥಿಗಳ ಸ್ಪಷ್ಟ ಚಿತ್ರಣ ದೊರೆಯಲಿದೆ.