

ನಮ್ಮ ಜೀವನ ವಿಧಾನದಲ್ಲಿ ಇರಬಹುದಾದ ಸತ್ಯನಿಷ್ಠೆ, ಅಸ್ತೇಯ, ಜೀವನ ಪ್ರೀತಿ ಯಂತಹ ಮೇರು ಮೌಲ್ಯಗಳು ಎಂದೂ ಎಲ್ಲಿಯೂ ಕ್ಷಯವಾಗದಂತೆ ವಿಶಿಷ್ಟ ಶಕ್ತಿ ಸಂಚಯವನ್ನು ನಿರಂತರ ಅನುಗ್ರಹಿಸು ಎಂದು ನಾವು ಭಗವಂತನಲ್ಲಿ ಸಲ್ಲಿಸುವ ಅನನ್ಯ ಪ್ರಾರ್ಥನೆಯ ಕ್ಷಣಗಳಿಗೆ ಸಾಕ್ಷಿಯಾಗುವ ಹಬ್ಬ ಅಕ್ಷಯ ತೃತೀಯಾ. ವೈಶಾಖ ಮಾಸದ ಶುಕ್ಲಪಕ್ಷದ ಮೂರನೇ ದಿನವು ಅತ್ಯಂತ ಮಂಗಳಕರವಾದ ದಿನ.
ಮೂರುವರೆ ಉತ್ಕೃಷ್ಟ ಮುಹೂರ್ತಗಳಲ್ಲಿ ಒಂದಾಗಿರುವ ಅಕ್ಷಯ ತೃತೀಯವನ್ನು ವಿಶೇಷವಾಗಿ ಹಿಂದೂ ಮತ್ತು ಜೈನ ಧರ್ಮೀಯರು ಶ್ರದ್ಧಾ-ಭಕ್ತಿಗಳಿಂದ ಆಚರಿಸುತ್ತಾರೆ. ಅಕ್ಷಯ ತೃತೀಯ ಮಹತ್ವವನ್ನು ಸಾಕ್ಷೀಕರಿಸುವ ಹಲವಾರು ಪೌರಾಣಿಕ ಕಥೆಗಳು ಗಮನ ಸೆಳೆಯುತ್ತವೆ. ಭಗವಾನ್ ಶ್ರೀಕೃಷ್ಣನು ದ್ರೌಪದಿಗೆ ಅಕ್ಷಯಪಾತ್ರೆಯನ್ನು ಕರುಣಿಸಿದ ಸುದಿನವೇ ಅಕ್ಷಯ ತೃತೀಯ. ಪಾಂಡವರು ವನವಾಸದಲ್ಲಿದ್ದಾಗ ಅವರಿಗೆ ಭೋಜನಕ್ಕೆ ಆಹಾರವಿಲ್ಲದೆ ಸಂಕಷ್ಟ ಎದುರಿಸುತ್ತಿದ್ದ ಸಂದರ್ಭದಲ್ಲಿ ಶ್ರೀಕೃಷ್ಣನು ದಯಪಾಲಿಸಿದ ಅಕ್ಷಯ ಪಾತ್ರೆಯಲ್ಲಿ ಸಿದ್ಧಪಡಿಸಿದ ಆಹಾರ ಎಂದಿಗೂ ಕ್ಷಯವಾಗದೆ ಸದಾ ಲಭ್ಯವಾಗುತ್ತಿತ್ತು.
ಭಗೀರಥನ ಭಕ್ತಿಯ ಪ್ರಯತ್ನದಿಂದ ಶಿವನ ಜಡೆಯಿಂದ ಗಂಗೆ ಧರೆಗೆ ಬಂದು ಜನತೆಯ ತೃಷೆ ಇಂಗಿಸಿದ ಮಹಾ ಸುದಿನವೇ ಅಕ್ಷಯ ತೃತೀಯ. ಜೊತೆಗೆ ವಿಷ್ಣು ಪರಮಾತ್ಮನ 6ನೇ ಅವತಾರವಾದ ಪರಶುರಾಮ ಅವತಾರ ತಾಳಿದ್ದು ಸಹ ಇದೇ ದಿನವೇ ಎಂಬುದು ಮಹತ್ವದ್ದು.
ವೀರಶೈವರಲ್ಲಿ ಆಚರಣೆ : ವೀರಶೈವ-ಲಿಂಗಾಯತ ಧರ್ಮ ಸಂಸ್ಥಾಪಕರಾದ ಶ್ರೀಜಗದ್ಗುರು ರೇಣುಕಾದಿ ಪಂಚಾಚಾರ್ಯರ ಗುರುಪರಂಪರೆಯ ಪಂಚ ಪೀಠಗಳಲ್ಲಿ ಒಂದಾಗಿರುವ ಉತ್ತರಾಂಚಲ ರಾಜ್ಯದ ರುದ್ರಪ್ರಯಾಗ ಜಿಲ್ಲೆಯ ಕೇದಾರ ವೈರಾಗ್ಯ ಪೀಠದ ಮೂಲ ಆಚಾರ್ಯರಾದ ಶ್ರೀಜಗದ್ಗುರು ಏಕೋರಾಮಾರಾಧ್ಯ ಭಗವತ್ಪಾದರು ಅಕ್ಷಯ ತೃತೀಯ ದಿನದಂದೇ ಶ್ರೀಕೇದಾರನಾಥ ಜ್ಯೋತಿರ್ಲಿಂಗದಿಂದ ಅವತರಿಸಿದ್ದಾರೆ. ಜತೆಗೆ ಭಕ್ತಿಭಂಡಾರಿ ಬಸವಣ್ಣನವರು ಜನಿಸಿದ ಮಹಾಸುದಿನವೂ ಅಕ್ಷಯ ತೃತೀಯ ದಿನವೇ. ಪಂಚಾಚಾರ್ಯರ ಗುರುಪೀಠ ಪರಂಪರೆಯ ಸಮಸ್ತ ಭಕ್ತರು ಎಲ್ಲೆಡೆ ಅಕ್ಷಯ ತೃತೀಯ ದಿನ ಶ್ರೀಜಗದ್ಗುರು ಏಕೋರಾಮಾರಾಧ್ಯರ ಜಯಂತಿ ಹಾಗೂ ಬಸವಣ್ಣನವರ ಜಯಂತಿಯನ್ನು ಸಂಯುಕ್ತವಾಗಿ ಆಚರಿಸುತ್ತಾರೆ. ನೇಪಾಳ, ಹಿಮಾಚಲ ಪ್ರದೇಶ, ಉತ್ತರಾಂಚಲ, ಉತ್ತರಪ್ರದೇಶ ರಾಜ್ಯಗಳೂ ಸೇರಿದಂತೆ ಉತ್ತರ ಭಾರತದ ಬಹುಪಾಲು ಹಿಂದೂ ದೇವಾಲಯಗಳು ಭಕ್ತರ ದರ್ಶನಕ್ಕೆ ಇದೇ ದಿನ ತೆರೆದುಕೊಳ್ಳುತ್ತವೆ.
ಕಬ್ಬಿನ ಹಾಲಿನ ಅಭಿಷೇಕ: ಜೈನ ಧರ್ಮ ಸಂಸ್ಥಾಪಕರಾದ ಭಗವಾನ್ ಶ್ರೀ 1008 ಆದಿನಾಥ (ವೃಷಭನಾಥ) ತೀರ್ಥಂಕರರು ಮುನಿದೀಕ್ಷೆ ಹೊಂದಿದ ನಂತರ ಒಂದು ವರುಷದ ಅವಧಿಯಲ್ಲಿ ಅವರಿಗೆ ಆಹಾರವೇ ಪ್ರಾಪ್ತವಾಗುವದಿಲ್ಲ. ಅದರ ಹಿಂದಿರುವ ಕಾರಣಗಳನ್ನು ಅರಿತ ಅವರು ಪರಿಹಾರಕ್ಕಾಗಿ ಕಾಡಿನ ಮಧ್ಯೆ ಏಕಾಂತವಾಸದಲ್ಲಿ ಧ್ಯಾನಗೈಯುತ್ತಾರೆ. ಅವರು ತಪಸ್ಸಿನ ನಂತರ ಆಹಾರ ಮುದ್ರಾ ಸಮೇತರಾಗಿ ಮರಳಿದಾಗ ಅವರ ಪ್ರಥಮ ಆಹಾರ ಚರ್ಯ ಜರುಗುತ್ತದೆ. ಇದನ್ನು ಜೈನ ಧರ್ಮದ ಸಿದ್ಧಾಂತದಲ್ಲಿ ಪಡಗಾಹನವಿಧಿ ಎಂದು ಕರೆಯಲಾಗುತ್ತದೆ. ಈ ವಿಧಿಯ ಮೂಲಕ ಹಸ್ತಿನಾಪುರದ ಶ್ರೇಯಾಂಶ ಮಹಾರಾಜನು ಅಕ್ಷಯ ತೃತೀಯ ದಿನವೇ ಕಬ್ಬಿನ ಹಾಲನ್ನು ಶ್ರೀ ಆದಿನಾಥ ತೀರ್ಥಂಕರರ ಸನ್ನಿಧಿಗೆ ಪ್ರಸಾದಕ್ಕಾಗಿ ಸಮರ್ಪಿಸುವ ಮೂಲಕ ಅವರ ಪ್ರಥಮ ಆಹಾರ ಚರ್ಯ ಯಶಸ್ವಿಯಾಗಿ ನೆರವೇರಲು ಕಾರಣನಾಗುತ್ತಾನೆ. ಆಗ ಆದಿನಾಥರು ಸಮಸ್ತ ಮನುಕುಲಕ್ಕೆ ಎಂದೂ ಪ್ರಸಾದದ (ಆಹಾರದ) ಕೊರತೆ ಕಾಡದಿರಲಿ ಎಂದು ಆಶೀರ್ವಾದವನ್ನು ಅನುಗ್ರಹಿಸುತ್ತಾರೆ. ಅಂದಿನಿಂದ ಸಮಸ್ತ ಜೈನ ಸಮುದಾಯಕ್ಕೆ ಅಕ್ಷಯ ತೃತೀಯ ಸಂತಸದ ಸಿಹಿ ಹಬ್ಬವಾಯಿತು.
ಅಕ್ಷಯ ತೃತೀಯ ದಿನ ಪ್ರಾತಃಕಾಲದಲ್ಲಿ ವಿಶೇಷವಾಗಿ ಎಲ್ಲರೂ ಅಭ್ಯಂಜನ ಸ್ನಾನ ಮಾಡುವ ಮೂಲಕ ತಮ್ಮ ಕುಲದೇವರಿಗೆ ಪೂಜೆ-ಪ್ರಾರ್ಥನೆ ಸಲ್ಲಿಸುವರು. ಅಕ್ಷಯ ತೃತೀಯ ದಿನ ಸತಿ-ಪತಿಗಳು ಜೊತೆಗೂಡಿ ಭಗವತ್ ಸಾನ್ನಿಧ್ಯಕ್ಕೆ ಭಕ್ತಿ ಸಮರ್ಪಣೆ ಮಾಡಿದರೆ ವಿಶೇಷ ಫಲಪ್ರಾಪ್ತಿ ಇದೆ ಎಂಬುದು ನಮ್ಮ ಪೂರ್ವಜರ ನಂಬಿಕೆ. ಈ ದಿನ ಸಿಹಿ ಭಕ್ಷ್ಯಗಳನ್ನು ಸಿದ್ಧಪಡಿಸಿ ಕುಲದೇವರಿಗೆ ನೈವೇದ್ಯ ಮಾಡಿ ಕುಟುಂಬದ ಸದಸ್ಯರೆಲ್ಲರೂ ಕೂಡಿಯೇ ಪ್ರಸಾದ ರೂಪದಲ್ಲಿ ಸೇವಿಸುವ ಸಂಪ್ರದಾಯವಿದೆ.
ಬದುಕು ಬರಿದಾಗಿಸದು : ಅಕ್ಷಯ ಎಂಬುದಕ್ಕೆ ಸಂಸ್ಕೃತದಲ್ಲಿ ಎಂದೂ ಕೊರತೆಯಾಗದಿರುವ, ಬರಿದಾಗದಿರುವ, ಅಭ್ಯುದಯ, ಯಶಸ್ಸು, ಸಂತೋಷ, ಭರವಸೆ ಎಂದೂ ಅರ್ಥಗಳಿವೆ. ಮತ್ತೊಂದು ರೀತಿಯಲ್ಲಿ ಪರಮಾತ್ಮ ಮತ್ತು ಮೋಕ್ಷಗಳೆಂಬ ಅರ್ಥಗಳೂ ಕಾಣಸಿಗುತ್ತವೆ. ಹಾಗಾಗಿ ಮನುಕುಲದ ಬದುಕು ಬರಿದಾಗಿಸದ ಅಕ್ಷಯ ತೃತೀಯ ಎಂದು ವಿಸõತ ನೆಲೆಯಲ್ಲಿ ವಿಶ್ಲೇಷಿಸಬಹುದಾಗಿದೆ. ಇಲ್ಲಿ ಬದುಕು ಎಂದರೆ ಜೀವನವಷ್ಟೇ ಅಲ್ಲ. ಅದಕ್ಕೆ ಸಂಪತ್ತು, ಆಸ್ತಿ, ಜೀವಿಸು, ಜೀವನ ದಲ್ಲಿ ಧನ್ಯತೆಹೊಂದು, ಕೃತಾರ್ಥವಾಗು ಎಂದೆಲ್ಲ ಅರ್ಥ ನಿಷ್ಪತ್ತಿಗಳಿವೆ. ಈ ನಿಟ್ಟಿನಲ್ಲಿ ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಿದರೆ ಅದು ಸಂಪತ್ತು ವೃದ್ಧಿಯಾಗಲು ಕಾರಣವಾಗುತ್ತದೆ ಎಂಬ ಪ್ರತೀತಿಯೂ ಇದೆ.