

ಅಲ್ಲಮನು ಓಂಕಾರವೆಂಬ ಮಹಾವೃಕ್ಷವನ್ನು ಆಶ್ರಯಿಸಿದ. ಮಂತ್ರಗಳಲ್ಲಿಯೆ ಶ್ರೇಷ್ಠವಾದ ಪಂಚಬ್ರಹ್ಮನೆಂಬ ಸರ್ಪದ ಹೆಡೆಯ ಮಣಿಯಿಂದತ್ತ ಎಲ್ಲಾ ಬಗೆಯ ಉತ್ಪತ್ತಿಸ್ಥಾನಗಳನ್ನು ತ್ಯಜಿಸಿಬಿಟ್ಟ. ಅನಂತರ ಅಸಮಾನವಾದ ಶಾಂತಿಯೆಂಬ ನಿರ್ಗಣ ಶೂನ್ಯಪೀಠದಲ್ಲಿ ಕುಳಿತುಕೊಂಡ. ಅಲ್ಲಮನಿಗೆ ಮೊದಲೂ ಇಲ್ಲ; ಕಡೆಯೂ ಇಲ್ಲ. ಅವನು ವೇದಾತೀತ ಮಾತ್ರವಲ್ಲ; ಯಾವ ಶಾಸ್ತ್ರಕ್ಕೂ ಎಟುಕದವನು. ನಾದ-ಬಿಂದುಗಳಿಗೂ ಅಲ್ಲಮ ಅತೀತ. ಇಂಥ ಲೋಕಗುರು-ಮಹಾಗುರು ಶೂನ್ಯಪೀಠಾರೋಹಣ ಮಾಡಿದ. ಆಗ ‘ಬಸವಣ್ಣಾ ನೀನು ಯೋಗಮಾರ್ಗದ ನೆಲೆಯನ್ನು ಅರಿತವನು. ನಿಜವಾಗಿ ವಿಚಾರಿಸಿ ನೋಡಿದರೆ: ಇದು ಇನ್ನೊಬ್ಬರಿಗೆ ತಿಳಿಯಲು ಸಾಧ್ಯವೇ ಇಲ್ಲ. ನೀನು ಮಹಾಪುರುಷನೇ ಹೌದು’ ಎಂದು ಜ್ಯೋತಿಸ್ವರೂಪದ ಅಲ್ಲಮ ನಗುತ್ತ ನುಡಿದ. ಬಸವಣ್ಣ ಅಲ್ಲಮನ ಮಾತುಗಳನ್ನು ಕೇಳುತ್ತ ಭಕ್ತಿಪರವಶನಾದ. ಅವನ ಕಣ್ಣುಗಳಲ್ಲಿ ಆನಂದಾಶ್ರು ಸುರಿಯಿತು. ಬಸವಣ್ಣ, ಅಲ್ಲಮನ ದಿವ್ಯಮೂರ್ತಿಯನ್ನು ಬಗೆಬಗೆಯಾಗಿ ನೋಡಿದ. ಅಲ್ಲಮನು ಶೂನ್ಯಪೀಠದಲ್ಲಿ ಕುಳಿತಿರುವಾಗ ಕೆಲವರು ಹಾಡುತ್ತಿದ್ದರು ಮತ್ತೂ ಕೆಲವರು ನೃತ್ಯ ಮಾಡುತ್ತಿದ್ದರು. ಅಲ್ಲಿದ್ದ ಕೆಲವರು ಪ್ರಭುವಿಗೆ ಸೇವೆಸಲ್ಲಿಸುತ್ತಿದ್ದರು. ಕೆಲವರಂತೂ ‘ಜಯ ಜಯ ಜಯ ಉಘೕ ಉಘೕ’ ಎಂದು ನಲಿದು ನೋಡುತ್ತಿದ್ದರು. ಭಕ್ತಿಯ ಪರವಶತೆಗೆ ಒಳಗಾದ ಕೆಲವರಂತೂ ಹರುಷದಿಂದಲೂ ಆನಂದದಿಂದಲೂ ಅಲ್ಲಮನನ್ನೇ ನಿರೀಕ್ಷಿಸುತ್ತಿದ್ದರು.
ಚಾಮರಸ ಕವಿಯಂತೂ ಅಲ್ಲಮನ ಮಹಿಮಾತಿಶಯವನ್ನು ಇನ್ನಿಲ್ಲದ ರೀತಿಯಲ್ಲಿ ವರ್ಣಿಸುತ್ತಾನೆ. ಶಿವಗಣಪ್ರಸಾದಿ ಮಹಾದೇವಯ್ಯನು ಈ ಸಂದರ್ಭವನ್ನು ಒಂದೇ ವಾಕ್ಯದಿಂದ ಪರಿಮಾರ್ಜನಗೊಳಿಸುತ್ತಾನೆ. ಅವನ ಮಾತಿದು: ‘ಇಂತು ಪ್ರಭುದೇವರು ಶೂನ್ಯಸಿಂಹಾಸನದ ಮೇಲೆ ಮೂರ್ತಿಗೊಂಡು ಕುಳ್ಳಿರ್ದಿ ರಲು ಬಸವರಾಜದೇವರು ಪರಮಾನಂದ ಯುಕ್ತವಾದ ಸದ್ಭಕ್ತಿಯಿಂದ ಪ್ರಭುದೇವರಂ ಪೂಜಿಸಿ ಆಡಿ ಹಾಡಿ ಓಲಾಡುತ್ತಿ ರಲು’ ಎಂದು ಹೇಳಿ ಶೂನ್ಯಪೀಠದ ಪ್ರಸಂಗವನ್ನು ಕೊನೆಗೊಳಿಸುತ್ತಾರೆ! ಆದರೆ, ಚಾಮರಸಕವಿಗೆ ಎಷ್ಟು ವರ್ಣಿಸಿದರೂ ತೃಪ್ತಿಯಿಲ್ಲ. ಅವನ ಮಾತು ಹೀಗಿದೆ:
ಹಲವು ಚಲುವಿನ ಭವ್ಯಮಂಟಪ/ದೊಳಗೆ ನೆರೆದಿಹ ಜಂಗಮದ ಸಂ/ಕುಳದ ಭಕ್ತರ ಪರಿಚರದ ಭಾವೆಯರ ಮಧ್ಯದಲಿ/ತೊಳಗಿ ಬೆಳಗುವ ಶೂನ್ಯಪೀಠದ/ನೆಲೆಯನೆಲ್ಲವ ಮೀರಿ ಬಯಲಲಿ/ ನೆಲಸಿ ನಿಂದನಿದೇನು ಮಹಿಮೆಯೊ ಗುರುಗುಹೇಶ್ವರನ (ಪ್ರಭು.ಲಿ.22-57)
ಶೂನ್ಯಪೀಠವಿದ್ದ ಆ ಮಂಗಳಮಂಟಪವು ಹಲವು ಬಗೆಯ ಚೆಲುವನ್ನು ಹೊಂದಿತ್ತು. ಅಲ್ಲಿ ಸೇರಿರುವ ಜಂಗಮ ಸಮೂಹ ಹಾಗೂ ಭಕ್ತಸಮೂಹ, ಊಳಿಗದ ಹೆಂಗಸರು ತುಂಬಿ ಆ ಮಹಾಮಂಟಪದ ಚೆಲುವನ್ನು ಹೆಚ್ಚಿಸಿದ್ದರು. ಇವರೆಲ್ಲರ ಮಧ್ಯದಲ್ಲಿ ಅಲ್ಲಮನು ಪ್ರಜ್ವಲಿಸುತ್ತ ಬೆಳಬೆಳಗುತ್ತ, ಶೂನ್ಯಪೀಠದ ನೆಲೆಯನ್ನೆಲ್ಲಾ ಮೀರಿ ಬಯಲಿನಲ್ಲಿ ನೆಲೆನಿಂತಿದ್ದ. ಇದೇನು ಗುರುಗುಹೇಶ್ವರನ ಮಹಿಮೆಯೊ?
ಅಲ್ಲಮನು ಶೂನ್ಯಪೀಠದಲ್ಲಿ ಕುಳಿತಿದ್ದಾನಷ್ಟೆ. ಆದರೆ, ನೋಡುವವರಿಗೆ ಅವನು ‘ಬಯಲಲಿ ನೆಲಸಿ ನಿಂದನಿದೇನು ಮಹಿಮೆಯೊ’ ಎಂದು ಚಾಮರಸ ಕವಿ ಅಚ್ಚರಿ ವ್ಯಕ್ತಪಡಿಸುತ್ತಿದ್ದಾನೆ. ಅಲ್ಲಮನು ಬಯಲರೂಪಿಯಷ್ಟೆ. ಭೌತಿಕವಾದ ಶೂನ್ಯಪೀಠವು ಜನರಿಗೆ ಗೊತ್ತಾಗುತ್ತಿದೆ. ಆದರೆ, ಅಲ್ಲಮನು ಎಲ್ಲವನ್ನೂ ಮೀರಿ ನಿಂತಿದ್ದಾನೆ. ಇಂಥ ಅಲ್ಲಮ ಪ್ರಭುವನ್ನು ವಿಶೇಷವಾಗಿ ಉಪಚರಿಸಲು ಬಸವಣ್ಣ ಸಿದ್ಧತೆ ಮಾಡಿಕೊಂಡಿದ್ದಾನೆ. ಅಲ್ಲಮನು ಶೂನ್ಯಸಿಂಹಾಸನದಲ್ಲಿ ಇದ್ದರೂ ಶೂನ್ಯಾಕಾಶದಲ್ಲಿ ಪ್ರಕಾಶಮಾನವಾಗಿ
ಬೆಳಗುತ್ತಿದ್ದಾನೆ. ಅವನು ಆಕಾರಗೊಂಡಿದ್ದರೂ ನಿರಾಕಾರನೂ ಆಗಿದ್ದಾನೆ. ಈ ಒಡಪು ನುಡಿಯನ್ನು ತುಸು ತಾತ್ವಿಕವಾಗಿ ತಿಳಿಯುವುದು ಅವಶ್ಯ. ಅನುಭಾವದ ಮೂಲಕ ಲಿಂಗೈಕ್ಯಸ್ಥಿತಿಯನ್ನು ಪಡೆದ ಜೀವಾತ್ಮನೇ ಆ ಶೂನ್ಯಕ್ಕೆ ಸಿಂಹಾಸನಾಗುತ್ತಾನೆ. ಇದನ್ನು ಇನ್ನಷ್ಟು ಸರಳವಾಗಿ ಹೇಳುವುದಾದರೆ: ಆ ಜೀವಾತ್ಮನಲ್ಲಿ ಜೀವತ್ವವು ಹೋಗಿ ಅದರ ಸ್ಥಳದಲ್ಲಿ ಶಿವತ್ವವು ನೆಲೆಸಿ ನಿಂತಿತ್ತು. ಆ ಶಿವತ್ವವೇ ಮಹಾಶೂನ್ಯ. ಆ ಮಹಾಶೂನ್ಯವೇ ಶೂನ್ಯಲಿಂಗ. ಇದು ಕಲ್ಲುಮಠದ ಪ್ರಭುದೇವರು ಹೇಳುವಂತೆ ‘ಲಿಂಗಲೀಲಾವಿಲಾಸ ಚಾರಿತ್ರ’ ಎಂದು ಭಾವಿಸುವುದು ಸರಿಯಾದ ಮಾತು.
(ಲೇಖಕರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು. ಕನ್ನಡ ಹಾಗೂ ಸಂಸ್ಕೃತ ವಿದ್ವಾಂಸರು. ಪ್ರತಿಕ್ರಿಯಿಸಿ: vvsudina@gmail.com, mallepuram@gmail.com)